Home ಟಾಪ್ ಸುದ್ದಿಗಳು ಗೌತಮ್ ನವ್ಲಾಖಾಗೆ ಜಾಮೀನು ಮಂಜೂರು

ಗೌತಮ್ ನವ್ಲಾಖಾಗೆ ಜಾಮೀನು ಮಂಜೂರು

ಮುಂಬೈ: ಸಾಮಾಜಿಕ ಕಾರ್ಯಕರ್ತ ಗೌತಮ್ ನವ್ಲಾಖಾ ಅವರಿಗೆ ಬಾಂಬೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.ಅವರಯ ಈ ಪ್ರಕರಣದಲ್ಲಿ ಜಾಮೀನು ಪಡೆದ 7ನೇ ಆರೋಪಿಯಾಗಿದ್ದಾರೆ. ಎಲ್ಗರ್ ಪರಿಷತ್-ಮಾವೋವಾದಿ ಲಿಂಕ್‌ ಪ್ರಕರಣದಲ್ಲಿ ಬಂಧಿತರಾಗಿದ್ದರು.

ನ್ಯಾಯಮೂರ್ತಿ ಎ ಎಸ್ ಗಡ್ಕರಿ ನೇತೃತ್ವದ ವಿಭಾಗೀಯ ಪೀಠ ನವ್ಲಾಖಾ ಅವರ ಜಾಮೀನು ಅರ್ಜಿಯನ್ನು ಸ್ವೀಕರಿಸಿ ಒಂದು ಲಕ್ಷ ರೂ. ಶ್ಯೂರಿಟಿ ಮೇಲೆ ಜಾಮೀನು ಮಂಜೂರು ಮಾಡಿದೆ.

ಎಲ್ಗರ್ ಪರಿಷತ್-ಮಾವೋವಾದಿ ಲಿಂಕ್‌ ಪ್ರಕರಣದಲ್ಲಿ 2018ರ ಆಗಸ್ಟ್‌ನಲ್ಲಿ ಬಂಧನಕ್ಕೊಳಗಾಗಿದ್ದ ಗೌತಮ್ ನವ್ಲಾಖಾ ಅವರನ್ನು ಕಳೆದ ನವೆಂಬರ್‌ನಲ್ಲಿ ಗೃಹ ಬಂಧನದಲ್ಲಿರಿಸಲು ಸುಪ್ರೀಂಕೋರ್ಟ್ ಅನುಮತಿ ನೀಡಿತ್ತು. ಬಳಿಕ ಅವರು ನವಿ ಮುಂಬೈನಲ್ಲಿ ನೆಲೆಸಿದ್ದರು.

ಕಳೆದ ಏಪ್ರಿಲ್‌ನಲ್ಲಿ ಗೌತಮ್ ನವ್ಲಾಖಾ ಅವರಿಗೆ ಜಾಮೀನು ನೀಡಲು ವಿಶೇಷ ನ್ಯಾಯಾಲಯ ನಿರಾಕರಿಸಿತ್ತು. ಇವರು ಮಾವೋವಾದಿ ಸಂಘಟನೆಯ ಸಕ್ರಿಯ ಸದಸ್ಯ ಎಂದು ತೋರಿಸಲು ಪ್ರಾಥಮಿಕ ಸಾಕ್ಷಿಗಳಿವೆ ಎಂದು ಹೇಳಿತ್ತು. ಇದನ್ನು ಪ್ರಶ್ನಿಸಿ ಗೌತಮ್ ನವ್ಲಾಖಾ ಅವರು ಹೈಕೋರ್ಟ್‌ಗೆ ಸಲ್ಲಿಸಿದ ಮೇಲ್ಮನವಿಯಲ್ಲಿ, ವಿಶೇಷ ನ್ಯಾಯಾಲಯವು ತನಗೆ ಜಾಮೀನು ನಿರಾಕರಿಸುವ ಸಂದರ್ಭದಲ್ಲಿ ತಪ್ಪು ಮಾಡಿದೆ ಎಂದು ಹೇಳಿದ್ದರು. ಜಾಮೀನು ಕೋರಿ ನವ್ಲಾಖಾ ಅವರು ಹೈಕೋರ್ಟ್‌ನಲ್ಲಿ ಎರಡನೇ ಬಾರಿ ಮೇಲ್ಮನವಿ ಸಲ್ಲಿಸಿದ್ದರು. NIA ನಂತರ ನವ್ಲಾಖಾ ಅವರ ಜಾಮೀನು ಅರ್ಜಿಯನ್ನು ವಿರೋಧಿಸಿತ್ತು.

2017ರ ಡಿಸೆಂಬರ್‌ 31ರಂದು ಪುಣೆಯಲ್ಲಿ ಎಲ್ಗಾರ್‌ ಪರಿಷತ್‌ ಸಭೆ ನಡೆದಿದ್ದು, ಈ ಸಭೆಗೆ ಮಾವೋವಾದಿಗಳು ಹಣಕಾಸು ನೆರವು ನೀಡಿದ್ದರು ಎಂದು ಪೊಲೀಸರು ಆರೋಪಿಸಿದ್ದರು. ಸಭೆಯಲ್ಲಿ ಮಾಡಲಾಗಿದ್ದ ಪ್ರಚೋದನಕಾರಿ ಭಾಷಣದಿಂದಾಗಿ ಮಹಾರಾಷ್ಟ್ರ ನಗರದ ಹೊರವಲಯದಲ್ಲಿರುವ ಭೀಮಾ–ಕೋರೆಗಾಂವ್‌ ಯುದ್ಧ ಸ್ಮಾರಕದ ಬಳಿ ಮರು ದಿನ ಹಿಂಸಾತ್ಮಕ ಕೃತ್ಯಗಳು ನಡೆದಿದ್ದವು ಎಂದು ಪೊಲೀಸರು ಆರೋಪಿಸಿದ್ದರು.

2017-18ರ ಭೀಮಾ ಕೋರೆಗಾಂವ್ ಎಲ್ಗಾರ್ ಪರಿಷತ್ ಪ್ರಕರಣದಲ್ಲಿ ವರವರ ರಾವ್, ಸುಧಾ ಭಾರದ್ವಾಜ್, ಗೌತಮ್ ನವಲಖಾ, ಆನಂದ್ ತೇಲ್ತುಂಬೆ, ಸ್ಟಾನ್ ಸ್ವಾಮಿ, ವೆರ್ನಾನ್ ಗೊನ್ಜಾಲ್ವೆಸ್ ಮತ್ತು ಅರುಣ್ ಫೆರೇರಾ ಅವರಂತಹ ಪ್ರಮುಖ ಸಾಮಾಜಿಕ ಕಾರ್ಯಕರ್ತರನ್ನು ಬಂಧಿಸಲಾಗಿತ್ತು.

Join Whatsapp
Exit mobile version