ಮುಂಬೈ: ನನ್ನ ಮಗಳಿಗೆ ನ್ಯಾಯ ಕೊಡಿ ಎಂದು ಒತ್ತಾಯಿಸಿರುವ ದಿಶಾ ಸಾಲಿಯನ್ ಅವರ ತಂದೆ ಸತೀಶ್ ಸಾಲಿಯನ್, ಶಿವಸೇನೆಯ (ಯುಬಿಟಿ ನಾಯಕ) ಆದಿತ್ಯ ಠಾಕ್ರೆ, ನಟರಾದ ಸೂರಜ್ ಪಾಂಚೋಲಿ ಮತ್ತು ಡಿನೊ ಮೋರಿಯಾ ಸೇರಿದಂತೆ ಎಲ್ಲ ಆರೋಪಿಗಳಿಗೆ ನಾರ್ಕೊ ಪರೀಕ್ಷೆಗಳನ್ನು ನಡೆಸಬೇಕೆಂದು ಒತ್ತಾಯಿಸಿದ್ದಾರೆ.
ತಮಗೆ ಮತ್ತು ತಮ್ಮ ವಕೀಲರಿಗೆ ರಕ್ಷಣೆ ನೀಡಬೇಕೆಂದು ಆಗ್ರಹಿಸಿದ ಅವರು, ಪ್ರಕರಣದಲ್ಲಿ ತಾರ್ಕಿಕ ಅಂತ್ಯಕ್ಕಾಗಿ ಹೋರಾಡುವುದಾಗಿ ಹೇಳಿದ್ದಾರೆ.
‘ನನ್ನ ಮಗಳಿಗೆ ನ್ಯಾಯ ಒದಗಿಸುವಂತೆ ಮುಂಬೈ ಪೊಲೀಸ್ ಅಧಿಕಾರಿಗಳನ್ನು ನಾನು ಒತ್ತಾಯಿಸಿದ್ದೇನೆ. ಈ ಪ್ರಕರಣದಲ್ಲಿ ಪ್ರಭಾವಿಗಳ ಪಾತ್ರ ಇರುವುದರಿಂದ ನನ್ನ ಮತ್ತು ನನ್ನ ವಕೀಲರಿಗೂ ರಕ್ಷಣೆ ನೀಡಬೇಕೆಂದು ಕೋರಿದ್ದೇನೆ. ನಾನೂ ನಾರ್ಕೊ ಪರೀಕ್ಷೆಗೆ ಸಿದ್ಧನಿದ್ದೇನೆ. ಆದರೆ, ಆದಿತ್ಯ ಠಾಕ್ರೆ, ಸೂರಜ್ ಪಾಂಚೋಲಿ ಮತ್ತು ಡಿನೊ ಮೋರಿಯಾ ಅವರಿಗೂ ನಾರ್ಕೊ ಪರೀಕ್ಷೆ ನಡೆಯಬೇಕು’ಸತೀಶ್ ಎಂದು ಆಗ್ರಹಿಸಿದ್ದಾರೆ.
ಪ್ರಕರಣದ ತನಿಖೆಯಲ್ಲಿ ಪ್ರಗತಿ ಕಾಣದ ಬಗ್ಗೆ ಅವರು ತಮ್ಮ ಹತಾಶೆಯನ್ನು ವ್ಯಕ್ತಪಡಿಸಿದ್ದು, ಮಹಾ ವಿಕಾಸ್ ಅಘಾಡಿ ನೇತೃತ್ವದ ಹಿಂದಿನ ಸರ್ಕಾರವು ತನ್ನ 2.5 ವರ್ಷಗಳ ಅವಧಿಯಲ್ಲಿ ನಿಷ್ಕ್ರಿಯವಾಗಿತ್ತು ಎಂದು ಹೇಳಿದ್ದಾರೆ.
ನ್ಯಾಯಾಂಗದ ಮೇಲಿನ ತಮ್ಮ ನಂಬಿಕೆಯನ್ನು ಪುನರುಚ್ಚರಿಸಿದ ಅವರು, ನ್ಯಾಯ ಸಿಗುವವರೆಗೂ ತಾನು ವಿಶ್ರಮಿಸುವುದಿಲ್ಲ ಎಂದು ಹೇಳಿದ್ದಾರೆ.
ದಿಶಾ ಹಠಾತ್ ನಿಧನದ ಐದು ವರ್ಷಗಳ ನಂತರ ತಮ್ಮ ಮಗಳ ಹತ್ಯೆ ಪ್ರಕರಣದ ತನಿಖೆಯನ್ನು ಪುನರ್ ಆರಂಭಿಸುವಂತೆ ಹೊಸ ದೂರು ದಾಖಲಿಸಿದ್ದಾರೆ. ಬಳಿಕ, ಮುಂಬೈ ಪೊಲೀಸ್ ಆಯುಕ್ತರ ಕಚೇರಿಗೆ ಭೇಟಿ ನೀಡಿದ್ದಾರೆ.