ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ಗಣೇಶೋತ್ಸವ ಆಚರಿಸುವವರು ಡಿಜೆಗಾಗಿ ಧ್ವನಿವರ್ಧಕ ಬಳಸುವಾಗ ಹೈಕೋರ್ಟ್ ಮತ್ತು ರಾಜ್ಯ ಸರ್ಕಾರದ ಆದೇಶ ಮೀರಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಕಮೀಷನರ್ ಪ್ರತಾಪ್ ರೆಡ್ಡಿ ಎಚ್ಚರಿಸಿದ್ದಾರೆ.
ವಿವಾದಿತ ಮತ್ತು ಮಾಲೀಕರ ಅನುಮತಿಯಿಲ್ಲದ ಸ್ಥಳಗಳಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಕೂಡದು. ಪೆಂಡಾಲ್ ಗಳಲ್ಲಿ ಬ್ಯಾನರ್, ಫ್ಲೆಕ್ಸ್ ಮತ್ತು ಇತರೆ ಫಲಕವನ್ನು ಅಳವಡಿಸಲು ಬಿಬಿಎಂಪಿ ವತಿಯಿಂದ ಪ್ರತ್ಯೇಕ ಅನುಮತಿ ಪಡೆಯಬೇಕು ಎಂದು ಕಮೀಷನರ್ ಸೂಚಿಸಿದ್ದಾರೆ.
ಪೆಂಡಾಲ್ ಗಳಲ್ಲಿ ಗಣೇಶೋತ್ಸವ ಆಚರಿಸುವವರು ಬೆಳಗ್ಗೆ 6 ರಿಂದ ರಾತ್ರಿ 10 ರವರೆಗೆ ಮಾತ್ರ ಧ್ವನಿವರ್ಧಕ ಬಳಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಮೂರ್ತಿ ಪ್ರತಿಷ್ಠಾಪನೆಗಾಗಿ ಬಿಬಿಎಂಪಿಯಿಂದ ಅನುಮತಿ ಪಡೆಯಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಅವರು ತಿಳಿಸಿದ್ದಾರೆ.
ಇತರೆ ಪ್ರಾರ್ಥನಾ ಸ್ಥಳಗಳ ಮುಂಭಾಗದಲ್ಲಿ ಸಿಡಿಮದ್ದು ಸಿಡಿಸಬಾರದು, ಆಚರಣೆಯ ಸುತ್ತಮುತ್ತ ಕಾನೂನು ಸುವ್ಯವಸ್ಥೆ ಹಾಳಾಗದಂತೆ ನೋಡಿಕೊಳ್ಳಬೇಕು ಮತ್ತು ಸಾರ್ವಜನಿಕರಿಂದ ಒತ್ತಾಯಪೂರ್ವಕವಾಗಿ ದೇಣಿಗೆ ಸಂಗ್ರಹ ಮಾಡಬಾರದು .ಒಂದು ವೇಳೆ ಅಹಿತಕರ ಘಟನೆ ಸಂಭವಸಿದ್ದಲ್ಲಿ 112 ನಂಬರಿಗೆ ಕರೆ ಮಾಡಬೇಕು ಎಂದು ಹೇಳಿದರು.