ರಾಜಸ್ಥಾನ: ನಾಯಕತ್ವ ಬದಲಾವಣೆಯ ಊಹಾಪೋಹಗಳ ನಡುವೆಯೇ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ಸರ್ಕಾರದ ಎಲ್ಲಾ ಮಂತ್ರಿಗಳು ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ರಾಜಸ್ಥಾನದ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸಂಪುಟ ಪುನಾರಚನೆಯಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಸಚಿವರು ರಾಜೀನಾಮೆ ನೀಡಿದ್ದಾರೆ.
ಶನಿವಾರ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮನೆಯಲ್ಲಿ ನಡೆದ ಸಂಪುಟ ಸಭೆಯ ಬಳಿಕ ಸಚಿವರೆಲ್ಲರೂ ರಾಜೀನಾಮೆ ನೀಡಿದ್ದಾರೆ ಎಂದು ಸಾರಿಗೆ ಸಚಿವ ಪ್ರತಾಪ್ ಸಿಂಗ್ ಖಚಾರಿಯಾವಾಸ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಭಾನುವಾರ ರಾಜಸ್ಥಾನ ಕಾಂಗ್ರೆಸ್ ಕಚೇರಿಯಲ್ಲಿ ಪ್ರಧಾನ ಕಾಂಗ್ರೆಸ್ ಸಮಿತಿ ಸಭೆ ನಿಗದಿಯಾಗಿದ್ದು, ಸಿಎಂ ಅಶೋಕ್ ಗೆಹ್ಲೋಟ್, AICC ಪ್ರಧಾನ ಕಾರ್ಯದರ್ಶಿ ಅಜಯ್ ಮಾಕೆನ್, ಪ್ರದೇಶ ಕಾಂಗ್ರೆಸ್ ಸಮಿತಿ ಮುಖ್ಯಸ್ಥ ಗೋವಿಂದ್ ಸಿಂಗ್ ದೋತಾಸ್ರಾ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಸಭೆಯಲ್ಲಿ ನೂತನ ಸಚಿವರ ಆಯ್ಕೆ ನಡೆಯುವ ಸಾಧ್ಯತೆಯಿದ್ದು, ಸಂಜೆಯ ವೇಳೆಗೆ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಸಂಪುಟ ಪುನಾರಚನೆಯಿಂದ ಹಲವು ಹೊಸ ಮುಖಗಳು ರಾಜಸ್ಥಾನ ಸಂಪುಟ ಸೇರಿಕೊಳ್ಳಲಿದ್ದು, ಮತ್ತೊಂದೆಡೆ ಹಲವು ಹಾಲಿ ಸಚಿವರು ಮಾಜಿಗಳಾಗುವ ಸಾಧ್ಯತೆಯಿದೆ.
ರಾಜಸ್ಥಾನ ಸರ್ಕಾರದ ಕಂದಾಯ ಸಚಿವ ಹರೀಶ್ ಚೌಧರಿ, ವೈದ್ಯಕೀಯ ಮತ್ತು ಆರೋಗ್ಯ ಸಚಿವ ಡಾ ರಘು ಶರ್ಮಾ, ಶಿಕ್ಷಣ ಸಚಿವ ಗೋವಿಂದ್ ಸಿಂಗ್ ಈ ಹಿಂದೆಯೇ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದರು.
ಅಶೋಕ್ ಗೆಹ್ಲೋಟ್ ಬಣ ಹಾಗೂ ಸಚಿನ್ ಪೈಲೆಟ್ ಬಣಗಳ ನಡುವೆ ಹಗ್ಗಜಗ್ಗಾಟ ಅಂತ್ಯಗೊಳಿಸಲು ಸಂಪುಟ ಪುನಾರಚನೆಗೆ ಕಾಂಗ್ರೆಸ್ ಇದೀಗ ಮುಂದಾಗಿದೆ.