Home ಅಂಕಣಗಳು ಭಾರತದ ಭವಿಷ್ಯ ಅಧೋಗತಿಯೆಡೆಗೆ

ಭಾರತದ ಭವಿಷ್ಯ ಅಧೋಗತಿಯೆಡೆಗೆ

ಭಾರತ ಪ್ರಜಾಪ್ರಭುತ್ವ ರಾಷ್ಟ್ರವೆಂದು ಬಿರುದಾಂಕಿತ ದೇಶ. ಪ್ರಜೆಗಳೇ ಪ್ರಭುಗಳು ಎಂಬ ಸುಂದರ ಪರಿಕಲ್ಪನೆಯ ದೇಶ. ಆದರೆ ಪ್ರಸಕ್ತ ಭಾರತದಲ್ಲಿ ಈ ಪರಿಕಲ್ಪನೆಯು ಬುಡಮೇಲಾಗಿ ಸರ್ವಾಧಿಕಾರಿ ಧೋರಣೆಯೇ ಇಂದು ದೇಶವನ್ನಾಳುತ್ತಿದೆ. ಪ್ರಜೆಗಳು ಪ್ರಭುಗಳಾಗುವುದಿರಲಿ, ತಮ್ಮದೇ ನೆಲದಲ್ಲಿ ಪರಕೀಯರಂತೆ ಬಾಳಬೇಕಾದ ದುಸ್ಥಿತಿ ನಿರ್ಮಾಣವಾಗಿದೆ.

ದಿನಕ್ಕೊಂದರಂತೆ ಹೇರಲ್ಪಡುವ ಕರಾಳ ಕಾನೂನುಗಳು, ಶಾಸನಗಳು ಜನರ ನಿದ್ದೆಗೆಡಿಸುತ್ತಿದೆ. ಅದರಲ್ಲೂ ಗೋ ಕಳ್ಳತನ, ಲವ್ ಜಿಹಾದ್ ನಂತಹ ಆಧಾರ ರಹಿತ ಆರೋಪಗಳನ್ನು ಹೊರಿಸಿ ಅಲ್ಪಸಂಖ್ಯಾತರನ್ನು ನಿರಂತರ ಶೋಷಣೆಗೆ ಗುರಿಪಡಿಸಲಾಗುತ್ತಿದೆ. ಕಣ್ಣಿದ್ದೂ ಕುರುಡಾಗಿರುವ ಆಡಳಿತ ವರ್ಗವು ದಿವ್ಯ ಮೌನ ಪಾಲಿಸಿ ಎಲ್ಲಾ ರೀತಿಯ ಅಕ್ರಮ ಅನಾಚಾರಗಳಿಗೆ ಪರೋಕ್ಷ ಕುಮ್ಮಕ್ಕು ನೀಡುವ ಮೂಲಕ ದೇಶದ ಸಾರ್ವಭೌಮತ್ವಕ್ಕೆ ಸಡ್ಡು ಹೊಡೆಯುತ್ತಿದೆ. ಹಿಂದೂ ರಾಷ್ಟ್ರದ ಅಜೆಂಡಾದೊಂದಿಗೆ ರಂಗಕ್ಕಿಳಿದ ಸರಕಾರ ಕೋಮು ಧ್ರುವೀಕರಣದ ಮೂಲಕ ಜನರ ಮನಸ್ಸುಗಳನ್ನು ಒಡೆಯುತ್ತಿದೆ. ತಮ್ಮ ಹಕ್ಕುಗಳ ಸ್ವಾಯತ್ತತೆಯು ಪ್ರಜೆಗಳಿಗೆ ಮರೀಚಿಕೆಯಾಗಿದೆ.

ಸರಕಾರದ ನೀತಿ ನಿಯಮಗಳ ವಿರುದ್ಧ ಧ್ವನಿಯೆತ್ತುವ, ಸಂತ್ರಸ್ತರ ಪರ ನ್ಯಾಯಕ್ಕಾಗಿ ಹೋರಾಡುವ ಸಾಮಾಜಿಕ ಕಾರ್ಯಕರ್ತರನ್ನು, ನಿಷ್ಠಾವಂತ ಪತ್ರಕರ್ತರನ್ನು, ಪ್ರಗತಿಪರ ಚಿಂತಕರನ್ನು ನಿರ್ದಾಕ್ಷಿಣ್ಯವಾಗಿ ಬಂಧಿಸಲಾಗುತ್ತಿದೆ. ಶಾರೀರಿಕ ಮಾನಸಿಕ ಹಿಂಸೆಗೆ ಗುರಿಪಡಿಸಲಾಗುತ್ತಿದೆ. ಇನ್ನು ಒಬ್ಬ ಸಾಮಾನ್ಯ ನಾಗರಿಕನಿಗೆ ಎಲ್ಲಿಯ ಅಭಯ…..?
ದೇಶದ ಬೆನ್ನೆಲುಬಾಗಿರುವ ರೈತಾಪಿ ವರ್ಗವು ತಿಂಗಳುಗಳಿಂದಲೂ ನೂತನ ಕೃಷಿ ಕಾಯ್ದೆಗಳ ರದ್ದತಿಗಾಗಿ ಹೋರಾಡುತ್ತಿದೆ. ಬಲ ಪ್ರಯೋಗ ಮಾಡಿ ಅವರನ್ನು ಮಣಿಸಲು ಪ್ರಯತ್ನಿಸಿದರೂ ರೈತರು ತಮ್ಮ ಪ್ರತಿಭಟನೆಯಿಂದ ಹಿಂದೆ ಸರಿದಿಲ್ಲ. ಅಹೋರಾತ್ರಿಯ ಪ್ರತಿಭಟನೆಯಲ್ಲಿ ಹಲವು ಅನ್ನದಾತರ ಪ್ರಾಣಹಾನಿ ಸಂಭವಿಸಿದರೂ ಕಾರ್ಪೋರೇಟ್ ಕುಳಗಳ ವ್ಯಾಮೋಹಕ್ಕೆ ಬಿದ್ಧಿರುವ ಸರಕಾರ ರೈತರ ಬೇಡಿಕೆಗಳಿಗೆ ಎಳ್ಳಷ್ಟೂ ಮನ್ನಣೆ ನೀಡುತ್ತಿಲ್ಲ. ಪ್ರಾಣಿಗಳಿಗೆ ಇರುವ ಕನಿಷ್ಠ ಬೆಲೆಯೂ ಮನುಷ್ಯ ಜೀವಕ್ಕೆ ಇಲ್ಲವಾಗಿರುವುದು ದೇಶದ ಅತೀ ದೊಡ್ಡ ದುರಂತ.

ಜಿ.ಎಸ್. ಟಿ. ನೋಟು ನಿಷೇಧದಂತಹ ಅವೈಜ್ಞಾನಿಕ ಮಸೂದೆಗಳಿಂದ ದೇಶದ ಆರ್ಥಿಕತೆಯು ಸಂಪೂರ್ಣ ನೆಲಕಚ್ಚಿರುವ ಪ್ರಸಕ್ತ ಸನ್ನಿವೇಶದಲ್ಲಿ ಸಹಜವಾಗಿಯೇ ನಿರುದ್ಯೋಗ, ಬಡತನ, ಆರೋಗ್ಯ ಸಮಸ್ಯೆಗಳು ದೇಶದಲ್ಲಿ ತಾಂಡವವಾಡುತ್ತಿದೆ. ಪ್ರಸ್ತುತ ಕೊರೋನಾ ಕಾಲವಂತೂ ಭಾರತವನ್ನು ಜಗತ್ತಿನ ಮುಂದೆ ಬೆತ್ತಲಾಗಿಸಿತು. ತೀರಾ ಹಿಂದುಳಿದ ಕೀನ್ಯಾ ದಂತಹ ರಾಷ್ಟ್ರವು ಕೂಡಾ ನೆರವಿನ ಹಸ್ತವನ್ನು ಚಾಚುವುದರ ಮೂಲಕ ದೇಶದ ಅರ್ಥ ವ್ಯವಸ್ಥೆಯು ಪಾತಾಳಕ್ಕೆ ಇಳಿದಿದೆ ಎಂಬುವುದನ್ನು ನಿರೂಪಿಸಿತು. ವಿದೇಶೀ ಪ್ರಧಾನಿಯೊಬ್ಬರನ್ನು ಮೆಚ್ಚಿಸಲಿಕ್ಕಾಗಿ ಹಮ್ಮಿಕೊಂಡ ಸರಕಾರೀ ಪ್ರಾಯೋಜಿತ ಸಮಾವೇಶದಿಂದ ಕೊರೋನಾ ಮೊದಲನೇ ಅಲೆಯಲ್ಲಿ ಅಪಾರ ಪ್ರಾಣ ಹಾನಿ ಉಂಟಾದರೂ ಎಚ್ಚೆತ್ತುಕೊಳ್ಳದ ಸರಕಾರ ಎರಡನೇ ಅಲೆಯ ಸಂದರ್ಭದಲ್ಲೂ ತನ್ನ ಅಧಿಕಾರ ಲಾಲಸೆಯಿಂದ ಚುನಾವಣಾ ಪ್ರಚಾರ ರಾಲಿಗಳನ್ನು, ಸಭೆಗಳನ್ನು ಸಂಘಟಿಸಿ ಉದ್ಧಟತನ ಮೆರೆಯಿತು. ಆಡಳಿತ ವರ್ಗದ ಬೆಂಬಲಿಗರನ್ನು ಮೆಚ್ಚಿಸಲು ಕುಂಭಮೇಳದಂತಹ ಬ್ರಹತ್ ಧಾರ್ಮಿಕ ಕಾರ್ಯಕ್ರಮಕ್ಕೆ ಅವಕಾಶ ಕಲ್ಪಿಸಿ ಕೊರೋನಾ ವ್ಯಾಪಕವಾಗಿ ಹರಡಲು ಕಾರಣವಾಯಿತು. ಜನರ ಪ್ರಾಣಕ್ಕಿಂತಲೂ ಸ್ವ- ಹಿತಾಸಕ್ತಿಯೇ ಪ್ರಧಾನವಾಗಿಸಿದ ಆಡಳಿತ ವ್ಯವಸ್ಥೆಯಲ್ಲಿ ಜನರ ಸಂಕಷ್ಟಗಳಿಗೆ ಮಿಡಿಯುವ ಹೃದಯವ್ನು ನಿರೀಕ್ಷಿಸುವುದು ಮೂರ್ಖತನವಾದೀತು.

ಸಮಗ್ರ ಪರಿಹಾರಗಳಿಲ್ಲದೆ ಹೇರಿದ ಲಾಕ್ ಡೌನ್ ಗಳು ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ. ಜನ ಹಸಿವಿನಿಂದ ತತ್ತರಿಸಿ ಹೋಗಿದ್ದಾರೆ. ರಸ್ತೆ ಬದಿಗಳಲ್ಲಿ ಕೊಳೆತ ಹಣ್ಣು ತರಕಾರಿಗಳನ್ನು ಬೇಯಿಸಿ ತಿನ್ನುವ ದೃಶ್ಯವು ” ವಿಶ್ವ ಗುರು ” ಆಗಲು ಹೊರಟ ಭಾರತದ ಪ್ರಜೆಗಳ ಹೀನಾಯ ಪರಿಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ. ಆಯಾ ದಿನಗಳಲ್ಲಿ ದುಡಿದು ತಿನ್ನುವ ಬಡ ಕುಟುಂಬಗಳು ಭವಿಷ್ಯದ ಭೀತಿಯಿಂದ ಆತ್ಮಹತ್ಯೆಗೆ ಶರಣಾಗುತ್ತಿದೆ. ಗಂಗಾ ನದಿಯಲ್ಲಿ ತೇಲಿ ಬರುತ್ತಿರುವ ಸಾಲು ಸಾಲು ಮೃತದೇಹಗಳು ಸರಕಾರದ ಹೊಣೆಗೇಡಿತನಕ್ಕೆ ಸಾಕ್ಷಿಯಾಗಿದೆ. ಅಸಮರ್ಪಕ ಆರೋಗ್ಯ ವ್ಯವಸ್ಥೆ, ಆಕ್ಸಿಜನ್ ಕೊರತೆಗಳಿಂದ ಜನ ಪರದಾಡುತ್ತಿದ್ದರೂ ಮನುಷ್ಯತ್ವವನ್ನೇ ಮರೆತಂತಿರುವ ” ಜನ ಸೇವಕರು ” ಲಸಿಕಾ ವಿತರಣೆಯಲ್ಲೂ ಭ್ರಷ್ಟಾಚಾರ ನಡೆಸಿ ತಮ್ಮ ಖಜಾನೆ ತುಂಬಿಸುವುದರಲ್ಲಿ ತಲ್ಲೀನರಾಗಿದ್ದಾರೆ.

ಪ್ರಸ್ತುತ ಸ್ಥಿತಿಗತಿಗಳನ್ನು ಅವಲೋಕಿಸುವಾಗ ಒಂದು ಹಂತದವರೆಗೂ ಸುಸ್ಥಿರ ವ್ಯವಸ್ಥೆಯನ್ನು ಕಂಡುಕೊಂಡಿದ್ದ ಭಾರತದ ಭವಿಷ್ಯವು ಅಧೋಗತಿಗೆ ತಲುಪಲಿದೆಯೆಂಬ ಭೀತಿಯು ಕಾಡುತ್ತಿದೆ.

Join Whatsapp
Exit mobile version