ಪುತ್ತೂರು: ಎರಡು ವರ್ಷಗಳ ಹಿಂದೆ ಅಪಘಾತವೊಂದರಲ್ಲಿ ಮೃತಪಟ್ಟ ಮಿತ್ತನಡ್ಕ ಅನ್ವರ್ ಮುಗುಳಿ ಅವರ ಸ್ಮರಣಾರ್ಥ ಅವರ ಸ್ನೇಹಿತ ವರ್ಗ, ಹತ್ತು ಹಲವು ಸಮಾಜ ಸೇವೆಗಳನ್ನು ನಡೆಸಿಕೊಂಡು ಬರುತ್ತಿದ್ದು, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿಯೂ ಸ್ಥಳೀಯ ಮಸೀದಿಗಳಲ್ಲಿ ನಡೆದ ಧ್ವಜಾರೋಹಣದ ವೇಳೆ ಮಕ್ಕಳಿಗೆ ಸಿಹಿ ತಿಂಡಿ ವಿತರಿಸಲಾಗಿದೆ.
ಅನ್ವರ್ ಅವರು 2019, ಡಿಸೆಂಬರ್ 22ರಂದು ನಡೆದ ಅಪಘಾತವೊಂದರಲ್ಲಿ ಮೃತಪಟ್ಟಿದ್ದರು. ಸಾಮಾಜಿಕ ಕಾರ್ಯಕರ್ತನೂ ಪರೋಪಕಾರಿಯೂ ಆಗಿದ್ದ ಅನ್ವರ್, ಜಾತಿ- ಮತ ನೋಡದೆ ಎಲ್ಲರ ಕಷ್ಟಸುಖಗಳಿಗೆ ಸ್ಪಂದಿಸುತ್ತಿದ್ದರು. ಅವರ ಸ್ಮರಣಾರ್ಥ ಬಡವರಿಗೆ ಆಹಾರ ಕಿಟ್ ವಿತರಣೆ, ಬಡ ಕುಟುಂಬದ ಯುವತಿಯರ ಮದುವೆಗೆ ಧನಸಹಾಯ ಮತ್ತಿತರ ಸೇವಾ ಕಾರ್ಯಗಳನ್ನು ಅವರ ಗೆಳೆಯರು ಮಾಡುತ್ತಾ ಬರುತ್ತಿದ್ದಾರೆ. ಮಿತ್ತನಡ್ಕ ಸುತ್ತಮುತ್ತ ನಿವಾಸಿಗಳ ಅನುಕೂಲಕ್ಕಾಗಿ ಅನ್ವರ್ ಅವರ ಹೆಸರಿನಲ್ಲಿ ಮುಂದಿನ ದಿನಗಳಲ್ಲಿ ಆಂಬುಲೆನ್ಸ್ ಒಂದನ್ನು ಕೊಡುಗೆಯಾಗಿ ನೀಡಲು ಅನ್ವರ್ ಸ್ನೇಹಿತರು ನಿರ್ಧರಿಸಿದ್ದು, ಈಗಾಗಲೇ ನಿಧಿ ಸಂಗ್ರಹ ಕಾರ್ಯ ಪ್ರಗತಿಯಲ್ಲಿದೆ. ರಮಝಾನ್ ಸಂದರ್ಭದಲ್ಲಿಯೂ ಅನ್ವರ್ ಹೆಸರಿನಲ್ಲಿ ಇಫ್ತಾರ್ ಕೂಟಗಳನ್ನು ಏರ್ಪಡಿಸಲಾಗಿದೆ.
ಆದರೆ ಅನ್ವರ್ ಅವರ ಹೆಸರಿಗೆ ಮಸಿ ಬಳಿಯಲು ಮಾಧ್ಯಮವೊಂದು ಸುಳ್ಳು ಸುದ್ದಿ ಪ್ರಕಟಿಸಿ ಅವರನ್ನು ಕ್ರಿಮಿನಲ್ ರೀತಿಯಲ್ಲಿ ಚಿತ್ರಿಸಿದೆ. ಈಗಾಗಲೇ ಮೃತಪಟ್ಟು ಎರಡು ವರ್ಷ ಕಳೆದ ವ್ಯಕ್ತಿಯೊಬ್ಬರ ಭಾವಚಿತ್ರ ಪ್ರಕಟಿಸಿ, ಅವರ ವಿರುದ್ಧ ಆಧಾರರಹಿತ ಸುದ್ದಿ ಪ್ರಕಟಿಸಿ ಅವರ ಕುಟುಂಬದವರ ತೇಜೋವಧೆಗೆ ಪ್ರಯತ್ನಿಸಲಾಗಿದೆ ಎಂದು ಅನ್ವರ್ ಸ್ನೇಹಿತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅನ್ವರ್ ವಿರುದ್ಧ ದರೋಡೆ ಪ್ರಕರಣವಾಗಲೀ, ಗೋ ಸಾಗಾಟ ಪ್ರಕರಣವಾಗಲೀ ದಾಖಲಾಗಿಲ್ಲ. ಯಾವುದೇ ಸಾಕ್ಷ್ಯವಿಲ್ಲದೆ ಅನ್ವರ್ ವಿರುದ್ಧ ಸುಳ್ಳಾರೋಪ ಮಾಡಲಾಗಿದೆ. ಈ ಬಗ್ಗೆ ಅನ್ವರ್ ಸ್ನೇಹಿತ ಶಫೀಕ್ ಮಿತ್ತನಡ್ಕ ಎಂಬವರು ಸಂಬಂಧಪಟ್ಟ ವರದಿಗಾರನಿಗೆ ಕರೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನು ರೆಕಾರ್ಡ್ ಮಾಡಿ ವಾಯಿಸ್ ಕಟ್ ಮಾಡಿ ಪ್ರಸಾರ ಮಾಡಲಾಗಿದೆ. ಅವರ ಭಾವಚಿತ್ರವನ್ನು ಅವರ ಅನುಮತಿ ಇಲ್ಲದೆ ಪ್ರಕಟಿಸಿ ಅವರ ತೇಜೋವಧೆಗೆ ಪ್ರಯತ್ನಿಸಲಾಗಿದೆ ಎಂದು ಅನ್ವರ್ ಸ್ನೇಹಿತರು ಆರೋಪಿಸಿದ್ದಾರೆ.
ಅನ್ವರ್ ಮತ್ತು ಅವರ ಸ್ನೇಹಿತರ ವಿರುದ್ಧ ಇಲ್ಲಸಲ್ಲದ, ಆಧಾರರಹಿತ ಸುದ್ದಿ ಪ್ರಕಟಿಸಿದ ಮಾಧ್ಯಮ ಸಂಸ್ಥೆಯ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿಯೂ ಅವರು ಎಚ್ಚರಿಕೆ ನೀಡಿದ್ದಾರೆ.