ಬೆಂಗಳೂರು: ಹಿಜಾಬ್ ಹೆಸರಿನಲ್ಲಿ ಅಶಾಂತಿ ಉಂಟು ಮಾಡುವವರ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಅಲ್ಪಸಂಖ್ಯಾತರ ಧಾರ್ಮಿಕ ಹಕ್ಕಿಗೆ ಚ್ಯುತಿಬಾರದಂತೆ ಸರ್ಕಾರ ನಡೆದುಕೊಳ್ಳಬೇಕು ಎಂದು ಸೌಹಾರ್ದ ಕರ್ನಾಟಕ ಸಂಘಟನೆ ಆಗ್ರಹಿಸಿದೆ.
ಬೆಂಗಳೂರಿನಲ್ಲಿಂದು ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಸಂಚಾಲಕರಾದ ರವಿಕುಮಾರ್ ರಾಯಸಂದ್ರ, ಯಲ್ಲಪ್ಪ ಹೆಗಡೆ, ಸತೀಶ್ ಟಿ.ವಿ. ಸೈಯದ್ ಅಬ್ಬಾಸ್, 1995ರಲ್ಲಿ ಕರ್ನಾಟ ಕರ್ನಾಟಕ ಶಿಕ್ಷಣ ಕಾಯ್ದೆಯಡಿ ಪ್ರೌಡಶಿಕ್ಷಣದಲ್ಲಿ ಸಮವಸ್ತ್ರ ನೀತಿಯನ್ನು ಜಾರಿ ತರಲಾಗಿದೆ. ಬಳಿಕ 2006 ರಲ್ಲಿ ಪದವಿ ಪೂರ್ವ ಕಾಲೇಜುಗಳಲ್ಲಿ ಸಮವಸ್ತ್ರ ನೀತಿಯನ್ನು ಜಾರಿಗೆ ತರಲಾಗಿದೆ. ಇದುವರೆಗೂ ಯಾವುದೇ ವಿವಾದ ಇಲ್ಲದೇ ಮುಸ್ಲಿಮ್ ಹೆಣ್ಣು ಮಕ್ಕಳು ಹಿಜಾಬ್ ಹಾಕಿಕೊಂಡು ಶಾಲಾ ಕಾಲೇಜುಗಳಿಗೆ ಹೋಗುತ್ತಾರೆ. ಈಗ ಏಕಾಏಕಿ ಕೆಲವು ಸಂಘಟನೆಗಳ ಕುತಂತ್ರದಿಂದ ವಿದ್ಯಾರ್ಥಿಗಳಿಗೆ ಶಾಲನ್ನು ಹಾಕಿಸಿ ಧರ್ಮದ ವಿಷಬೀಜ ಬಿತ್ತಿ ಹಿಜಾಬ್ ಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಆರೋಪಿಸಿದರು.
ಬಸವಾದಿ ಶರಣರ ನಾಡಿನಲ್ಲಿ ಹಿಜಾಬ್ ಮತ್ತು ಕೇಸರಿ ಶಾಲುಗಳ ವಿವಾದ ಸೃಷ್ಟಿ ಮಾಡಿ ಸರ್ಕಾರಿ ಶಾಲಾ ಕಾಲೇಜುಗಳ ವ್ಯವಸ್ಥೆಯನ್ನು ದುರ್ಬಲಗೊಳಿಸುವ ದೂರದೃಷ್ಟಿಯ ಯೋಜನೆಯ ಒಂದು ಭಾಗವೇ ಕೇಸರಿ ಮತ್ತು ಹಿಜಾಬ್ ವಿವಾದದ ಮೂಲ ಉದ್ದೇಶವಾಗಿದೆ. ಬಡ ಮತ್ತು ಮಧ್ಯಮ ವರ್ಗದ ಜನರನ್ನು ಶಿಕ್ಷಣದಿಂದ ದೂರ ಮಾಡುವ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಪ್ರೋತ್ಸಾಹಿಸುವ ಹುನ್ನಾರ ನಡೆದಿದೆ ಎಂದು ಆರೋಪಿಸಿದರು.