Home ಟಾಪ್ ಸುದ್ದಿಗಳು ಮತಾಂತರ ವಿರೋಧಿ ಕಾಯ್ದೆಯಡಿ ಪ್ರಖ್ಯಾತ ವಿದ್ವಾಂಸ ಉಮರ್ ಗೌತಮ್ ಅವರ ಪುತ್ರನ ಬಂಧನ

ಮತಾಂತರ ವಿರೋಧಿ ಕಾಯ್ದೆಯಡಿ ಪ್ರಖ್ಯಾತ ವಿದ್ವಾಂಸ ಉಮರ್ ಗೌತಮ್ ಅವರ ಪುತ್ರನ ಬಂಧನ

ಲಕ್ನೋ: ಮತಾಂತರ ವಿರೋಧಿ ಕಾಯ್ದೆಯಡಿ ಪ್ರಖ್ಯಾತ ವಿದ್ವಾಂಸ ಉಮರ್ ಗೌತಮ್ ಅವರನ್ನು ಬಂಧಿಸಿದ ಬೆನ್ನಲ್ಲೇ ಉ.ಪ್ರ ಎ.ಟಿ.ಎಸ್ ಅವರ ಪುತ್ರ ಅಬ್ದುಲ್ಲಾ ಅವರನ್ನೂ ಬಂಧಿಸಿದೆ.

ಪ್ರಖ್ಯಾತ ಮುಸ್ಲಿಮ್ ವಿದ್ವಾಂಸ ಮೌಲಾನಾ ಮುಹಮ್ಮದ್ ಉಮರ್ ಗೌತಮ್ ಅವರನ್ನು ಉತ್ತರ ಪ್ರದೇಶದ ಭಯೋತ್ಪದನಾ ನಿಗ್ರಹ ದಳ (ಎ.ಟಿ.ಎಸ್)ದ ಪೊಲೀಸರು ನೂತನ ಮತಾಂತರ ವಿರೋಧಿ ಕಾನೂನಿನಡಿಯಲ್ಲಿ ಜೂನ್ ತಿಂಗಳಲ್ಲಿ ಬಂಧಿಸಿದ್ದರು.
ಇದೀಗ ಅವರ ಪುತ್ರ ಅಬ್ದುಲ್ಲಾ ಅವರನ್ನು ಅಕ್ರಮ ಹಣ ವರ್ಗಾವಣೆ, ಭಯೋತ್ಪಾದಕರೊಂದಿಗೆ ನಂಟು ಮುಂತಾದ ಆರೋಪಗಳಡಿ ಗೌತಮ್ ಬುದ್ಧ ನಗರದಿಂದ ಬಂಧಿಸಲಾಗಿದೆ.

ಮಾತ್ರವಲ್ಲ ಅಬ್ದುಲ್ಲಾ ಅವರಿಂದ ಹೆಚ್ಚಿನ ಮಾಹಿತಿ ಪಡೆಯುವ ನಿಟ್ಟಿನಲ್ಲಿ ತನಿಖೆ ಮುಂದುವರಿಸಿರುವುದಾಗಿ ತಿಳಿಸಿದೆ.
ಮುಸ್ಲಿಮ್ ವಿದ್ವಾಂಸರು ಮತ್ತು ಸಂಸ್ಥೆಗಳು ಭಾರತದಾದ್ಯಂತ ಧಾರ್ಮಿಕ ಮತಾಂತರ ಕಾರ್ಯದಲ್ಲಿ ನಿರತವಾಗಿದೆ ಎಂದು ಮುಖ್ಯಮಂತ್ರಿ ಆದಿತ್ಯನಾಥ್ ಆರೋಪಿಸಿದ ಬೆನ್ನಲ್ಲೇ ಉತ್ತರ ಪ್ರದೇಶದ ಪೊಲೀಸರಿಂದ ಈ ಬಂಧನ ನಡೆದಿರುವುದು ವಿಶೇಷ.

ಮತಾಂತರದ ಆರೋಪದಲ್ಲಿ ಮೌಲಾನಾ ಉಮರ್ ಗೌತಮ್, ಅಬ್ದುಲ್ಲಾ, ಮೌಲಾನಾ ಕಲೀಮ್ ಸಿದ್ದೀಕಿ, ಆದಂ, ಅರ್ಸ್ಲಾನ್ ಮುಸ್ತಫಾ, ಕೌಶರ್ ಆಲಂ, ಮುಹಮ್ಮದ್ ಹಫೀಝ್ ಇದ್ರಿಸ್ ಸೇರಿದಂತೆ 17 ಮುಸ್ಲಿಮರನ್ನು ಎ.ಟಿ.ಎಸ್ ಪೊಲೀಸರು, ಭಯೋತ್ಪಾದನಾ ಪ್ರಕರಣದಲ್ಲಿ ಬಂಧಿಸಿದ್ದಾರೆ.

ಈ ಹಿಂದೆ 100 ಕ್ಕೂ ಮಿಕ್ಕಿದ ಮುಸ್ಲಿಮ್ ಯುವಕರನ್ನು ಉತ್ತರ ಪ್ರದೇಶದ ಪೊಲೀಸರು ನೂತನ ಮತಾಂತರ ವಿರೋಧಿ ಕಾಯ್ದೆ ಅಡಿಯಲ್ಲಿ ಬಂಧಿಸಿದ್ದಾರೆ. ಕಳೆದ ವರ್ಷದ ನವೆಂಬರ್ 28 ರಂದು ಲವ್ ಜಿಹಾದ್ ಹೆಸರಿನಲ್ಲಿ ಸುಗ್ರೀವಾಜ್ಞೆಯ ಮೂಲಕ ಜಾರಿಗೆ ತಂದ ಈ ಕಾನೂನನ್ನು ಬಿಜೆಪಿ ಸರ್ಕಾರ, ಮುಸ್ಲಿಮ್ ವಿರೋಧಿಯಾಗಿ ಪ್ರಯೋಗಿಸುತ್ತಿದೆ.

Join Whatsapp
Exit mobile version