Home ಟಾಪ್ ಸುದ್ದಿಗಳು ಬೆಳ್ತಂಗಡಿ ಮಾಜಿ ಶಾಸಕ ಕೆ.ವಸಂತ ಬಂಗೇರ ನಿಧನ

ಬೆಳ್ತಂಗಡಿ ಮಾಜಿ ಶಾಸಕ ಕೆ.ವಸಂತ ಬಂಗೇರ ನಿಧನ

ಮೂರು ಪಕ್ಷದಿಂದ ಶಾಸಕರಾದ ಕರಾವಳಿಯ ಏಕೈಕ ಜನನಾಯಕ ಇನ್ನು ನೆನಪು ಮಾತ್ರ

ಬೆಳ್ತಂಗಡಿ: ಬೆಳ್ತಂಗಡಿಯ ಮಾಜಿ ಶಾಸಕ, ಹಿರಿಯ ಕಾಂಗ್ರೆಸ್ ಮುಖಂಡ ಕೆ.ವಸಂತ ಬಂಗೇರ (79) ವಿಧಿವಶರಾಗಿದ್ದಾರೆ. ಇಂದು ಸಂಜೆ 4 ಗಂಟೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.


ಕೆಲ ಸಮಯದ ಹಿಂದೆ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರನ್ನು ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಇಂದು ಮೃತಪಟ್ಟಿದ್ದಾರೆ. ಅವರು ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಪಾರ್ಥೀವ ಶರೀರವನ್ನು ಬೆಂಗಳೂರಿನಿಂದ ಬೆಳ್ತಂಗಡಿಯ ಅವರ ನಿವಾಸಕ್ಕೆ ತರಲಾಗುತ್ತದೆ. ನಾಳೆ ಅವರ ಮನೆ ಬಳಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ, ನಾಳೆಯೇ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರ ಆಪ್ತ ಮೂಲಗಳಿಂದ ತಿಳಿದು ಬಂದಿದೆ.

ವಸಂತ ಬಂಗೇರ ಅವರು ಐದು ಬಾರಿ ಶಾಸಕರಾಗಿ ಬೆಳ್ತಂಗಡಿ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ಈ ಮೂರು ಪಕ್ಷಗಳಿಂದಲೂ ಶಾಸಕರಾಗಿ ಆಯ್ಕೆಯಾಗಿದ್ದರು. ಬಿಜೆಪಿ ಕರ್ನಾಟಕ ವಿಧಾನಸಭೆಯಲ್ಲಿ ಖಾತೆ ತೆರೆದಾಗ ಯಡಿಯೂರಪ್ಪ ಜೊತೆ ವಸಂತ ಬಂಗೇರ ಅವರು ಬಿಜೆಪಿ ಶಾಸಕರಾಗಿದ್ದರು. 1983ರಲ್ಲಿ ಅವರು ಸರ್ವಪಕ್ಷಗಳ ಬೆಂಬಲಿತ ಬಿಜೆಪಿ ಅಭ್ಯರ್ಥಿಯಾಗಿ ನೇಗಿಲ ಹೊತ್ತ ರೈತ ಚಿಹ್ನೆಯಡಿ ಮೊದಲ ಬಾರಿಗೆ ಶಾಸನ ಸಭೆ ಪ್ರವೇಶ ಮಾಡಿದ್ದರು. ಬಳಿಕ ಜನತ ದಳ ಸೇರ್ಪಡೆಯಾಗಿ ಟ್ರ್ಯಾಕ್ಟರ್ ಚಿಹ್ನೆಯಡಿ ಶಾಸಕರಾಗಿ ಆಯ್ಕೆಯಾಗಿದ್ದರು. ಬಳಿಕ ಜೆಡಿಎಸ್ ಸೇರ್ಪಡೆಯಾಗಿ ತೆನೆ ಹೊತ್ತ ಮಹಿಳೆ ಚಿಹ್ನೆಯಡಿಯೂ ಶಾಸಕರಾಗಿ ಆಯ್ಕೆಯಾಗಿದ್ದರು. 2008ರ ಚುನಾವಣೆಗಿಂತ ಮುಂಚೆ ಕಾಂಗ್ರೆಸ್ ಸೇರ್ಪಡೆಯಾಗಿ 2008 ಮತ್ತು 2013ರಲ್ಲಿ ಕಾಂಗ್ರೆಸ್ ನಿಂದ ಎರಡು ಬಾರಿ ಶಾಸಕರಾಗಿ ಸೇವೆ ಸಲ್ಲಿಸಿದ್ದರು. ಐದು ಸಲ ಶಾಸಕರಾಗಿದ್ದ ಅವರಿಗೆ ಒಮ್ಮೆಯೂ ಸಚಿವ ಸ್ಥಾನ ಒಲಿದುಬಂದಿರಲಿಲ್ಲ. ಸಿದ್ದರಾಮಯ್ಯ ಅವರ ಮೊದಲ ಅವಧಿಯ ಸರ್ಕಾರದಲ್ಲಿ ಮಂತ್ರಿಯಾಗುವ ನಿರೀಕ್ಷೆ ಇದ್ದರೂ ಅವರಿಗೆ ಅವಕಾಶ ಕೈತಪ್ಪಿತ್ತು.

ವಸಂತ ಬಂಗೇರ ಅವರು ಕೇದೆ ಸುಬ್ಬ ಪುಜಾರಿ ಮತ್ತು ದೇವಕಿ ದಂಪತಿಯ ಪುತ್ರ. ವಿಶೇಷ ಅಂದರೆ ವಸಂತ ಬಂಗೇರ ಅವರ ತಂದೆಯ ಮೂವರು ಮಕ್ಕಳು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ವಸಂತ ಬಂಗೇರ ಅವರ ಹಿರಿಯ ಸಹೋದರ ಚಿದಾನಂದ ಬಂಗೇರ ಅವರು ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿದ್ದರು. ವಸಂತ ಬಂಗೇರ ಅವರು ಮೂರು ಪಕ್ಷಗಳಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಕಿರಿಯ ಸಹೋದರ ಪ್ರಭಾಕರ್ ಬಂಗೇರ ಅವರು ಬಿಜೆಪಿ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿ ಸೇವೆ ಸಲ್ಲಿಸಿದ್ದರು.

Join Whatsapp
Exit mobile version