Home ಟಾಪ್ ಸುದ್ದಿಗಳು ಕಾಡ್ಗಿಚ್ಚು ನಂದಿಸಲು ಬಂದಿದ್ದ ವಿಮಾನ ಪತನ, ಇಬ್ಬರು ಪೈಲಟ್​ಗಳು ಸಾವು

ಕಾಡ್ಗಿಚ್ಚು ನಂದಿಸಲು ಬಂದಿದ್ದ ವಿಮಾನ ಪತನ, ಇಬ್ಬರು ಪೈಲಟ್​ಗಳು ಸಾವು

ರೋಡ್ಸ್​: ಕಾಡ್ಗಿಚ್ಚು ನಂದಿಸಲು ಬಂದಿದ್ದ ಅಗ್ನಿಶಾಮಕ ವಿಮಾನವು ಮರಕ್ಕೆ ಡಿಕ್ಕಿ ಹೊಡೆದು ಪತನಗೊಂಡು ಇಬ್ಬರು ಪೈಲಟ್​ಗಳು ಸ್ಥಳದಲ್ಲೇ ಮೃತಪಟ್ಟ ಘಟನೆ ಗ್ರೀಸ್‌ನಲ್ಲಿ ನಡೆದಿದೆ.

ಎವಿಯಾ ದ್ವೀಪದಲ್ಲಿರುವ ಕಾಡಿನಲ್ಲಿ ಬೆಂಕಿ ಧಗಧಗಿಸುತ್ತಿತ್ತು, ಅದನ್ನು ನಂದಿಸಲು ಗ್ರೀಕ್ ವಾಟರ್ ಬಾಂಬ್ ವಿಮಾನವು ಕೂಡ ಬಂದಿತ್ತು, ಬೆಂಕಿಗೆ ನೀರು ಹಾಯಿಸುತ್ತಿರುವಾಗ ವಿಮಾನವು ಮರಕ್ಕೆ ಡಿಕ್ಕಿ ಹೊಡೆದು ಸ್ವಲ್ಪ ದೂರ ತೆರಳಿ ಪತನಗೊಂಡಿದೆ. ತಕ್ಷಣವೇ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡು ಪೈಲಟ್​ಗಳು ಸುಟ್ಟು ಕರಕಲಾಗಿದ್ದಾರೆ.

ಬೆಂಕಿ ಇದ್ದ ಸ್ಥಳದ ಸಮೀಪವೇ ವಿಮಾನ ಪತನಗೊಂಡಿದೆ, ಇದೀಗ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು, ವಿಮಾನ ಪತನಗೊಳ್ಳುವ ಮೊದಲು ಮರಕ್ಕೆ ಡಿಕ್ಕಿ ಹೊಡೆದು ಬೀಳುವುದನ್ನು ದೃಶ್ಯದಲ್ಲಿ ಕಾಣಬಹುದು.

ಗ್ರೀಕ್‌ನ ಪ್ಲಾಟಾನಿಸ್ಟೊ ಬಳಿ ಎವಿಯಾದಲ್ಲಿನ ಬೆಂಕಿಯ ಜ್ವಾಲೆಯನ್ನು ನಂದಿಸಲು ಕನಿಷ್ಠ ಮೂರು ವಿಮಾನಗಳು ಹಾಗೂ 100ಕ್ಕೂ ಅಧಿಕ ಅಗ್ನಿಶಾಮಕ ಸಿಬ್ಬಂದಿ ಸ್ಥಳದಲ್ಲಿದ್ದರು.

ಪ್ರವಾಸಿ ದ್ವೀಪಗಳಾದ ರೋಡ್ಸ್ ಮತ್ತು ಕಾರ್ಫು ಸೇರಿದಂತೆ ಮೂರು ಕಡೆ ಕಾಡ್ಗಿಚ್ಚು ಹಬ್ಬಿದೆ. ಈ ಪ್ರದೇಶದಲ್ಲಿ ಗಾಳಿ ಬಲವಾಗಿರುವುದರಿಂದ ಸುಲಭವಾಗಿ ಬೆಂಕಿ ಹರಡಿದೆ. ಗ್ರೀಕ್ ದ್ವೀಪಗಳಾದ ರೋಡ್ಸ್ ಮತ್ತು ಕಾರ್ಫುಗಳಲ್ಲಿ ಸಾವಿರಾರು ಸ್ಥಳೀಯರು ಮತ್ತು ಪ್ರವಾಸಿಗರು ಕಾಡಿನ ಬೆಂಕಿಯಿಂದ ಸ್ಥಳಾಂತರಗೊಂಡಿದ್ದಾರೆ. ಗ್ರೀಸ್​ನಲ್ಲಿ 35,000 ಹೆಕ್ಟೇರ್ (86,500 ಎಕರೆ) ಅರಣ್ಯ ಮತ್ತು ಇತರ ಭೂಮಿ ಬೆಂಕಿಯಿಂದ ಸುಟ್ಟು ಕರಕಲಾಗಿವೆ ಎಂದು ವರದಿಯಾಗಿದೆ.

ರಾಜಧಾನಿ ಅಥೆನ್ಸ್‌ನಲ್ಲಿ ಶಾಖವು 41 ಡಿಗ್ರಿ ಸೆಲ್ಸಿಯಸ್ (106 ಡಿಗ್ರಿ ಫ್ಯಾರನ್‌ಹೀಟ್) ತಲುಪುವ ನಿರೀಕ್ಷೆಯಿದೆ ಮತ್ತು ಮಧ್ಯ ಗ್ರೀಸ್‌ನಲ್ಲಿ 44C ವರೆಗೆ ಮುಟ್ಟುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ.

Join Whatsapp
Exit mobile version