ಲಿಯೊನೆಲ್‌ ಮೆಸ್ಸಿ ವಿಶ್ವದ ಶ್ರೀಮಂತ ಕ್ರೀಡಾಪಟು, ಕ್ರಿಕೆಟ್‌ನಲ್ಲಿ ಕೊಹ್ಲಿಯೇ ʻಕಿಂಗ್‌ʼ

Prasthutha|

ಜಗತ್ತಿನಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುತ್ತಿರುವ ಕ್ರೀಡಾಪಟುಗಳಲ್ಲಿ ಫುಟ್ಬಾಲ್‌ ದಿಗ್ಗಜ, ಅರ್ಜೆಂಟೀನಾದ ನಾಯಕ ಲಿಯೊನೆಲ್‌ ಮೆಸ್ಸಿ ಅಗ್ರಸ್ಥಾನವನ್ನು ಅಲಂಕರಿಸಿದ್ದಾರೆ. ಫೋಬ್ಸ್‌ ಪ್ರಕಟಿಸಿದ ವಿಶ್ವದ ಶ್ರೀಮಂತ ಕ್ರೀಡಾಪಟುಗಳ ಪಟ್ಟಿಯಲ್ಲಿ ಸ್ಟಾರ್‌ ಎನ್‌ಬಿಎ ಆಟಗಾರ ಲೆಬ್ರಾನ್‌ ಜೇಮ್ಸ್‌ ದ್ವಿತೀಯ ಮತ್ತು ಪೋರ್ಚುಗಲ್‌ನ ಫುಟ್ಬಾಲ್‌ ಮಾಂತ್ರಿಕ ಕ್ರಿಸ್ಟಿಯಾನೋ ರೊನಾಲ್ಡೋ ಮೂರನೇ ಸ್ಥಾನದಲ್ಲಿದ್ದಾರೆ.
ಟೀಮ್‌ ಇಂಡಿಯಾದ ಮಾಜಿ ನಾಯಕ ಪಟ್ಟಿಯಲ್ಲಿ 61ನೇ ಸ್ಥಾನ ಪಡೆದಿದ್ದು, ಅಗ್ರ 100ರಲ್ಲಿ ಸ್ಥಾನ ಪಡೆದ ಏಕೈಕ ಕ್ರಿಕೆಟಿಗ ಮತ್ತು ಭಾರತೀಯ ಕ್ರೀಡಾಪಟು ಎನಿಸಿದ್ದಾರೆ. 2021ರಲ್ಲಿ ಟಾಪ್‌ 10 ಕ್ರೀಡಾಪಟುಗಳ ಒಟ್ಟು ಆದಾಯ ಸುಮಾರು 8130 ಕೋಟಿ ರೂಪಾಯಿದ್ದರೆ, ಈ ಬಾರಿ ಅದು ಸುಮಾರು 7688 ಕೋಟಿ ರೂಪಾಯಿಗೆ ಇಳಿಕೆ ಕಂಡಿದೆ
ಪ್ಯಾರಿಸ್‌ ಸೇಂಟ್‌ ಜರ್ಮನ್‌ ಫುಟ್ಬಾಲ್‌ ಕ್ಲಬ್‌ ಪ್ರತಿನಿಧಿಸುತ್ತಿರುವ ಸ್ಟಾರ್‌ ಸ್ಟ್ರೈಕರ್‌ ಲಿಯೊನೆಲ್‌ ಮೆಸ್ಸಿ ಮೇ 1, 2022ಕ್ಕೆ ಕೊನೆಗೊಳ್ಳುವ 12-ತಿಂಗಳ ಅವಧಿಯಲ್ಲಿ ವಾರ್ಷಿಕ 130 ಮಿಲಿಯ ಡಾಲರ್‌ (sumAru ಒಂದು ಸಾವಿರದ ಏಳು ಕೋಟಿ) ಆದಾಯ ಗಳಿಸಿದ್ದಾರೆ. ಇದರಲ್ಲಿ 75 ಮಿಲಿಯನ್ ಡಾಲರ್‌ ಮೊತ್ತವನ್ನು ಫುಟ್ಬಾಲ್‌ ಆಟದ ಮೂಲಕ ಮತ್ತು ಉಳಿದ ಮೊತ್ತವನ್ನು ಜಾಹೀರಾತು, ಮತ್ತು ಇತರ ಮೂಲಗಳಿಂದ ಗಳಿಸಿದ್ದಾರೆ.
ಲಾಸ್ ಏಂಜಲೀಸ್ ಲೇಕರ್ಸ್ ತಂಡದ ಮುಂಚೂಣಿ ಆಟಗಾರ ಜೇಮ್ಸ್ ಒಟ್ಟು 121 ಮಿಲಿಯನ್ ಡಾಲರ್‌ ಮೊತ್ತವನ್ನು ಸಂಪಾದಿಸುವ ಮೂಲಕ ಶ್ರೀಮಂತ ಕ್ರೀಡಾಪಟುಗಳ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. ಕಳೆದ ವರ್ಷ ಜೇಮ್ಸ್‌ ಒಟ್ಟು 96.5 ಮಿಲಿಯನ್‌ ಡಾಲರ್‌ಗಳನ್ನು ಸಂಪಾದಿಸಿದ್ದರು. ಪೋರ್ಚುಗಲ್ ಫುಟ್ಬಾಲ್‌ ತಂಡದ ನಾಯಕ ರೊನಾಲ್ಡೊ, 115 ಮಿಲಿಯನ್‌ ಡಾಲರ್‌ ಸಂಪಾದನೆಯೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಮತ್ತೋರ್ವ ಸಮಕಾಲೀನ ಫುಟ್ಬಾಲ್‌ ಸೂಪರ್‌ಸ್ಟಾರ್‌ ಬ್ರಝಿಲ್‌ ತಂಡದ ನೇಮರ್‌ ನಾಲ್ಕನೇ ಸ್ಥಾನದಲ್ಲಿದ್ದಾರೆ. (95 ಮಿಲಿಯನ್‌ ಡಾಲರ್).
ಕೊಹ್ಲಿ ವಿಶ್ವದ ಶ್ರೀಮಂತ ಕ್ರಿಕೆಟಿಗ
ಪ್ರಸ್ತುತ ನಡೆಯುತ್ತಿರುವ ಐಪಿಎಲ್‌ನಲ್ಲಿ ಫಾರ್ಮ್‌ ಕಳೆದುಕೊಂಡಿರುವ ಕೊಹ್ಲಿ, ಗಳಿಕೆಯ ವಿಚಾರದಲ್ಲಿ ವಿಶ್ವದಲ್ಲಿಯೇ ಶ್ರೀಮಂತ ಕ್ರಿಕೆಟಿಗ ಎನಿಸಿದ್ದಾರೆ. ಪಟ್ಟಿಯಲ್ಲಿ 61ನೇ ಸ್ಥಾನ ಪಡೆದಿರುವ ಕೊಹ್ಲಿ, ವಾರ್ಷಿಕ 262 ಕೋಟಿ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಇದರಲ್ಲಿ 22 ಕೋಟಿನ ರೂಪಾಯಿ ಕ್ರಿಕೆಟ್‌ನಿಂದ ಮತ್ತು 240 ಕೋಟಿಗೂ ಮಿಕ್ಕ ಆದಾಯವನ್ನು ಜಾಹೀರಾತಿನಿಂದ ಗಳಿಸಿದ್ದಾರೆ.

Join Whatsapp
Exit mobile version