Home ಕ್ರೀಡೆ ಧೋನಿ @300 : IPL-14ಫೈನಲ್’ನಲ್ಲಿ ಎಂಎಸ್ ಧೋನಿ ವಿಶೇಷ ಮೈಲಿಗಲ್ಲು..!

ಧೋನಿ @300 : IPL-14ಫೈನಲ್’ನಲ್ಲಿ ಎಂಎಸ್ ಧೋನಿ ವಿಶೇಷ ಮೈಲಿಗಲ್ಲು..!

ದುಬೈ ; ಇಂಡಿಯನ್ ಪ್ರೀಮಿಯರ್ ಲೀಗ್ – ಐಪಿಎಲ್’ನ 14ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ನಾಯಕನಾಗಿ ಮೈದಾನಕ್ಕಿಳಿಯುವ ಮೂಲಕ ಮಹೇಂದ್ರ ಸಿಂಗ್ ಧೋನಿ ಅಪರೂಪದ ದಾಖಲೆಯೊಂದನ್ನು ತನ್ನದಾಗಿಸಿಕೊಳ್ಳಲಿದ್ದಾರೆ.

ಧೋನಿ ನಾಯಕತ್ವದಲ್ಲಿ ಐಪಿಎಲ್’ನಲ್ಲಿ ಚೆನ್ನೈ ದಾಖಲೆಯ 9ನೇ ಬಾರಿ ಫೈನಲ್ ಪ್ರವೇಶಿಸಿದ್ದು, ಇದರಲ್ಲಿ ಮೂರು ಬಾರಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಕೊಲ್ಕತ್ತಾ ವಿರುದ್ಧದ ಪಂದ್ಯವು ನಾಯಕನ ಜವಾಬ್ದಾರಿಯನ್ನು ವಹಿಸಿಕೊಂಡು ಧೋನಿ ಆಡುತ್ತಿರುವ 300ನೇ ಪಂದ್ಯವಾಗಿದೆ.
ಟೀಂ ಇಂಡಿಯಾ, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರೈಸಿಂಗ್ ಸೂಪರ್ ಜೈಂಟ್ಸ್ ತಂಡಗಳ ನಾಯಕನಾಗಿ,
ಟಿ-20 ವಿಶ್ವಕಪ್, ಏಷ್ಯಾ ಕಪ್, ಐಪಿಎಲ್, ಚಾಂಪಿಯನ್ಸ್ ಲೀಗ್ ಸೇರಿದಂತೆ, ಧೋನಿ ಇದುವರೆಗೂ 299 ಪಂದ್ಯಗಳನ್ನು ಆಡಿದ್ದಾರೆ.


2007 ರಲ್ಲಿ ಟೀಂ ಇಂಡಿಯಾದ ಟಿ- 20 ನಾಯಕತ್ವದ ಜವಾಬ್ದಾರಿಯನ್ನು ವಹಿಸಿದ್ದ ಧೋನಿ, 2017 ರಲ್ಲಿ ನಾಯಕತ್ವ ಸ್ಥಾನದಿಂದ ಕೆಳಗಿಳಿದಿದ್ದರು. ಈ ಅವಧಿಯಲ್ಲಿ ಟಿ 20 ವಿಶ್ವಕಪ್​ ಸೇರಿದಂತೆ 72 ಪಂದ್ಯಗಳಲ್ಲಿ ಧೋನಿ ಭಾರತ ತಂಡದ ನಾಯಕತ್ವ ವಹಿಸಿದ್ದರು.
72 ಪಂದ್ಯಗಳಲ್ಲಿ ಟೀಮ್ ಇಂಡಿಯಾ 41 ಪಂದ್ಯಗಳಲ್ಲಿ ಗೆಲುವು ಹಾಗೂ 28 ಪಂದ್ಯಗಳಲ್ಲಿ ಸೋಲನುಭವಿಸಿದೆ‌. ಒಂದು ಪಂದ್ಯವು ಡ್ರಾದಲ್ಲಿ ಕೊನೆಗೊಂಡಿತು. ಇನ್ನು ಎರಡು ಪಂದ್ಯಗಳಲ್ಲಿ ಯಾವುದೇ ಫಲಿತಾಂಶ ಕಾಣದೇ ಕೊನೆಗೊಂಡಿತ್ತು.

2007ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ಟಿ-20 ವಿಶ್ವಕಪ್‌ ಟೂರ್ನಿಯಲ್ಲಿ ತಂಡವನ್ನು ಚಾಂಪಿಯನ್ ಪಟ್ಟಕ್ಕೆ ಮುನ್ನಡೆಸಿದ್ದು ಧೋನಿಯ ಭವಿಷ್ಯವನ್ನೇ ಬದಲಾಯಿಸಿತ್ತು. ಐಪಿಎಲ್’ನ ಚೊಚ್ಚಲ ಆವೃತ್ತಿಯಿಂದಲೂ ಪ್ರಸಕ್ತ ಟೂರ್ನಿಯವರೆಗೂ ಚೆನ್ನೈ ಸೂಪರ್ ಕಿಂಗ್ಸ್‌’ನ ಮುಂಚೂಣಿಯಲ್ಲಿರುವ ಧೋನಿ 213 ಪಂದ್ಯಗಳಲ್ಲಿ ನಾಯಕತ್ವ ವಹಿಸಿದ್ದಾರೆ. 213 ಪಂದ್ಯಗಳಲ್ಲಿ 130 ಪಂದ್ಯಗಳಲ್ಲಿ ಗೆಲುವು ಮತ್ತು 81 ಪಂದ್ಯಗಳಲ್ಲಿ ಸೋಲಿನ ಸವಿಯುಂಡಿದ್ದಾರೆ.

ಈ‌ ನಡುವೆ ಚೆನ್ನೈ ತಂಡಕ್ಕೆ ಎರಡು ವರ್ಷಗಳ ನಿಷೇಧ ಹೇರಲಾದ ಕಾರಣ
2016 ರಲ್ಲಿ ಧೋನಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡದ ನಾಯಕತ್ವ ವಹಿಸಿದ್ದರು. ಪುಣೆ ತಂಡವು ಎಂಎಸ್’ಡಿ ನಾಯಕತ್ವದಲ್ಲಿ 14 ಪಂದ್ಯಗಳಲ್ಲಿ ಆಡಿದ್ದು ಅಲ್ಲಿ ಐದು ಪಂದ್ಯಗಳನ್ನು ಗೆದ್ದು 9 ಪಂದ್ಯಗಳನ್ನು ಸೋತಿದೆ.

ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ನಾಯಕನಾಗಿ ಧೋನಿ 300ನೇ ಪಂದ್ಯವನ್ನಾಡುವಾಗ ಅವರ ದಾಖಲೆಯನ್ನು ಮುರಿಯಲು ಸಮೀಪದಲ್ಲಿ ಪ್ರತಿಸ್ಪರ್ಧಿಗಳೇ ಇಲ್ಲ ಎನ್ನುವುದು ಮತ್ತೊಂದು ವಿಶೇಷ. ಧೋನಿಯ ಬಳಿಕ ಎರಡನೇ ಸ್ಥಾನದಲ್ಲಿರುವ ವೆಸ್ಟ್ ಇಂಡೀಸ್ ನ ಡ್ಯಾರೆನ್ ಸಮಿ ಒಟ್ಟು 208 ಪಂದ್ಯಗಳಲ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದಾರೆ. ಸಮಿ ನಾಯಕತ್ವದಲ್ಲಿ ವೆಸ್ಟ್ ಇಂಡೀಸ್ ಎರಡು ಬಾರಿ ಟಿ-20 ಚಾಂಪಿಯನ್ ಆಗಿತ್ತು.


ಮತ್ತೊಂದು ವಿಶೇಷವೆಂದರೆ ಇದೇ ಪಟ್ಟಿಯಲ್ಲಿರುವ ಇಂಗ್ಲೆಂಡ್’ನ ಇಯೊನ್ ಮಾರ್ಗನ್ ನಾಯಕತ್ವದ ಕೆಕೆಆರ್ ವಿರುದ್ಧವೇ ಧೋನಿ ದಾಖಲೆಯ 300ನೇ ಪಂದ್ಯವನ್ನಾಡುತ್ತಿದ್ದಾರೆ.
40 ವರ್ಷ ವಯಸ್ಸಿನ ಧೋನಿ ಕಳೆದ ವರ್ಷವೇ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಗುಡ್’ಬೈ ಹೇಳಿದ್ದರೂ ಸಹ ಅವರ ಹವಾ ಈಗಲೂ ಮುಂದುವರಿದಿದೆ

Join Whatsapp
Exit mobile version