Home ಕ್ರೀಡೆ ರಾಜಸ್ಥಾನ್​ ರಾಯಲ್ಸ್ ವಿರುದ್ಧ ​​ 20 ರನ್​ಗಳಿಂದ ಗೆಲುವು ಸಾಧಿಸಿದ ಡೆಲ್ಲಿ ಕ್ಯಾಪಿಟಲ್ಸ್‌

ರಾಜಸ್ಥಾನ್​ ರಾಯಲ್ಸ್ ವಿರುದ್ಧ ​​ 20 ರನ್​ಗಳಿಂದ ಗೆಲುವು ಸಾಧಿಸಿದ ಡೆಲ್ಲಿ ಕ್ಯಾಪಿಟಲ್ಸ್‌

ನವದೆಹಲಿ: ಇಲ್ಲಿನ ಅರುಣ್​ ಜೇಟ್ಲಿ ಕ್ರಿಕ್​ ಸ್ಟೇಡಿಯಮ್​ನಲ್ಲಿ ನಡೆದ ಐಪಿಎಲ್​ 17ನೇ ಆವೃತ್ತಿಯ 56ನೇ ಪಂದ್ಯದಲ್ಲಿ ರಾಜಸ್ಥಾನ್​ ರಾಯಲ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್​​ 20 ರನ್​ಗಳಿಂದ ಗೆಲುವು ಸಾಧಿಸಿದೆ. ಗೆಲ್ಲಲೇಬೇಕಾದ ಪಂದ್ಯದಲ್ಲಿ ಡೆಲ್ಲಿ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದಾರೆ.

ಇದುವರೆಗೆ ಆಡಿರುವ 12 ಪಂದ್ಯಗಳಲ್ಲಿ 6ನೇ ಗೆಲುವಿನ ಮೂಲಕ 12 ಅಂಕಗಳನ್ನು ಸಂಪಾದಿಸಿರುವ ರಿಷಭ್​ ಪಂತ್ ಬಳಗ ಲಕ್ನೊ ಸೂಪರ್ ಜೈಂಟ್ಸ್​ ತಂಡವನ್ನು ಹಿಂದಿಕ್ಕಿ 5ನೇ ಸ್ಥಾನಕ್ಕೇರಿದೆ.

ಟಾಸ್​ ಗೆದ್ದ ರಾಜಸ್ಥಾನ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್​ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್​ ತಂಡ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ಗೆ 221 ರನ್​ ಕಲೆಹಾಕಿತು. ಸಂಜು ಸ್ಯಾಮ್ಸನ್​ 46 ಎಸೆತಕ್ಕೆ 86 ರನ್ ಬಾರಿಸಿದರು. ರಾಜಸ್ಥಾನ್ ತಂಡ 8 ವಿಕೆಟ್​ಗೆ 201ರನ್​ ಅಷ್ಟೇ ಸಂಪಾದಿಸಿತು.

ಮೊದಲು ಬ್ಯಾಟ್ ಮಾಡಿದ ಡೆಲ್ಲಿ ತಂಡಕ್ಕೆ ಉತ್ತಮ ಆರಂಭ ದೊರಕಿತು. ಪ್ರೇಸರ್ ಮೆಕ್​ಗುರ್ಕ್​ 20 ಎಸೆತಕ್ಕೆ 50 ರನ್​ ಬಾರಿಸಿದರೆ ಅಭಿಷೇಕ್ ಪೊರೆಲ್​ 65 ರನ್​ ಬಾರಿಸಿದರು. ಶಾಯ್​ ಹೋಪ್​ ವಿಫಲರಾಗಿ 1 ರನ್​ಗೆ ಔಟಾದಾಗ ಡೆಲ್ಲಿ ರನ್ ಗಳಿಕೆ ವೇಗ ಕಡಿಮೆಯಾಯಿತು. ಅಕ್ಷರ್ ಪಟೇಲ್​ ಹಾಗೂ ರಿಷಭ್​ ಪಂತ್​ ತಲಾ 15 ರನ್ ಬಾರಿಸಿದರು. ಆದರೆ, ಕೊನೇ ಹಂತದಲ್ಲಿ ಟ್ರಿಸ್ಟಾನ್​ ಸ್ಟಬ್ಸ್​​ 20 ಎಸೆತಕ್ಕೆ 41 ರನ್ ಬಾರಿಸಿ ದೊಡ್ಡ ಮೊತ್ತ ಪೇರಿಸಲು ನೆರವಾದರು.

ಡೆಲ್ಲಿ ಕ್ಯಾಪಿಟಲ್ಸ್ ಪರ ಆರ್​ ಅಶ್ವಿನ್​ 24 ರನ್​ಗಳ ವೆಚ್ಚದಲ್ಲಿ 3 ವಿಕೆಟ್​ ಉರುಳಿಸುವ ಮೂಲಕ ಉತ್ತಮ ಸಾಧನೆ ಮಾಡಿದರು.

ಡೆಲ್ಲಿ ಕ್ಯಾಪಿಟಲ್ಸ್‌ ತಂಡ ನೀಡಿದ 222 ರನ್‌ ಗಳ ಬೃಹತ್‌ ಟಾರ್ಗೆಟ್ ಬೆನ್ನಟ್ಟಿದ ರಾಜಸ್ಥಾನ್‌ ತಂಡಕ್ಕೆ ಆರಂಭದಲ್ಲಿಯೇ ಆಘಾತ ಉಂಟಾಯಿತು. ಆರಂಭಿಕರಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್‌ 4 ರನ್‌ ಹಾಗೂ ಜೋಸ್‌ ಬಟ್ಲರ್‌ 19 ರನ್‌ ಸಿಡಿಸಿ ಔಟ್ ಆದರು. ಅತ್ತ ರಾಜಸ್ಥಾನ್‌ ತಂಡದ ಹೊಡಿಬಡಿ ಆಟಗಾರನಾಗಿದ್ದ ರಿಯಾನ್‌ ಪರಾಗ್‌ 22 ಎಸೆತದಲ್ಲಿ 27 ರನ್‌ ಸಿಡಿಸಿದರೆ, ಶುಭಂ ದುಬೆ 25 ರನ್‌ ಸಿಡಿಸಿ ವಿಕೆಟ್ ಒಪ್ಪಿಸಿದರು. ಆದರೆ ಒಂದೆಡೆ ನಾಯಕ ಸಂಜು ಸ್ಯಾಮ್ಸನ್‌ ಮಾತ್ರ ಉತ್ತಮವಾಗಿ ಬ್ಯಾಟಿಂಗ್‌ ಮಾಡುವ ಮೂಲಕ ಶತಕದ ಹೊಸ್ತಿಲಲ್ಲಿ ವಿಕೆಟ್‌ ಒಪ್ಪಿಸಿದರು. ಸಂಜು 46 ಎಸೆತದಲ್ಲಿ 6 ಸಿಕ್ಸ್‌ ಮತ್ತು 8 ಬೌಂಡರಿ ಸಹಿತ 86 ರನ್‌ ಸಿಡಿಸಿದರೂ ವ್ಯರ್ಥವಾಯಿತು.

ರಾಜಸ್ಥಾನ್‌ ರಾಯಲ್ಸ್‌ ಸೋಲುವ ಮೂಲಕ ಮತ್ತೊಮ್ಮೆ ಪ್ಲೇಆಫ್‌ಗಾಗಿ ಕಾಯಬೇಕಿದೆ.

Join Whatsapp
Exit mobile version