Home ಟಾಪ್ ಸುದ್ದಿಗಳು ಗುಜರಾತ್ ಸೇತುವೆ ದುರಂತ: ಮೋದಿ ಭೇಟಿ ಹಿನ್ನೆಲೆಯಲ್ಲಿ ಮೊರ್ಬಿ ಆಸ್ಪತ್ರೆ ನವೀಕರಣ; ಪ್ರಾಧಿಕಾರದ ನಡೆಗೆ ವ್ಯಾಪಕ...

ಗುಜರಾತ್ ಸೇತುವೆ ದುರಂತ: ಮೋದಿ ಭೇಟಿ ಹಿನ್ನೆಲೆಯಲ್ಲಿ ಮೊರ್ಬಿ ಆಸ್ಪತ್ರೆ ನವೀಕರಣ; ಪ್ರಾಧಿಕಾರದ ನಡೆಗೆ ವ್ಯಾಪಕ ಆಕ್ರೋಶ

ಮೊರ್ಬಿ (ಗುಜರಾತ್): 135ಕ್ಕೂ ಅಧಿಕ ಜನರ ಸಾವಿಗೆ ಕಾರಣವಾದ ಗುಜರಾತ್ ಮೊರ್ಬಿ ಸೇತುವೆ ದುರಂತದಲ್ಲಿ ಬದುಕುಳಿದ ಸಂತ್ರಸ್ತರನ್ನು ಭೇಟಿಯಾಗಲು ಪ್ರಧಾನಿ ಮೋದಿ ಅವರು ಇಂದು ಮೊರ್ಬಿ ಆಸ್ಪತ್ರೆಗೆ ಬರಲಿದ್ದು, ಈ ಹಿನ್ನೆಲೆಯಲ್ಲಿ ಮೊರ್ಬಿ ಸಿವಿಲ್ ಆಸ್ಪತ್ರೆಯನ್ನು ರಾತ್ರಿಯಿಡೀ ನವೀಕರಿಸಲಾಗಿದೆ ಎಂದು ಮೂಲಗಳು ವರದಿ ಮಾಡಿವೆ. ಪ್ರಾಧಿಕಾರದ ಈ ನಡೆಗೆ ಪ್ರತಿಪಕ್ಷ ಸೇರಿದಂತೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಮಚ್ಚು ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ತೂಗುಸೇತುವೆಯ ಭೀಕರ ದುರಂತದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಮೊರ್ಬಿ ಆಸ್ಪತ್ರೆಗೆ ಭೇಟಿ ನೀಡಲಿದ್ದಾರೆ. ಈ ಘಟನೆಯಲ್ಲಿ ಸುಮಾರು 135 ಮಂದಿ ಸಾವನ್ನಪ್ಪಿದ್ದು, 100ಕ್ಕೂ ಅಧಿಕ ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ಹೆಚ್ಚಿನವರು ಮೊರ್ಬಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ. ಈ ಮಧ್ಯೆ ಕೆಲವೊಂದು ಮಾಧ್ಯಮಗಳು ಪ್ರಸಕ್ತ ಬೆಳವಣಿಗೆಯನ್ನು ವರದಿ ಮಾಡಲು ಆಸ್ಪತ್ರೆಗೆ ಭೇಟಿ ನೀಡಿದಾಗ ಆಸ್ಪತ್ರೆಯನ್ನು ನವೀಕರಿಸುವುದನ್ನು ಪತ್ತೆಹಚ್ಚಿ ವರದಿ ಮಾಡಿವೆ.

ಕೆಲವು ಗೋಡೆಗಳು ಮತ್ತು ಮೇಲ್ಛಾವಣಿಯ ಭಾಗಗಳಿಗೆ ಹೊಸದಾಗಿ ಸುಣ್ಣ, ಬಣ್ಣವನ್ನು ಬಳಿಯಲಾಗಿದ್ದು, ಹೊಸ ವಾಟರ್ ಕೂಲರ್’ಗಳನ್ನು ಖರೀದಿಸಲಾಗಿದೆ. ಸೇತುವೆ ದುರಂತದಲ್ಲಿ ಗಾಯಗೊಂಡ 13 ಮಂದಿ ಮೊರ್ಬಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಎರಡು ವಾರ್ಡ್’ಗಳ ಬೆಡ್’ಶೀಟ್’ಗಳನ್ನು ಕೂಡ ತ್ವರಿತವಾಗಿ ಬದಲಾಯಿಸಲಾಗಿದೆ. ತಡರಾತ್ರಿ ಅನೇಕ ಕಾರ್ಮಿಕರು ಆವರಣ ಗೋಡೆಯನ್ನು ರಿಪೇರಿ ಮಾಡುತ್ತಿರುವುದು ಮಾಧ್ಯಮದವರಿಗೆ ಕಂಡುಬಂದಿದೆ. ಆಸ್ಪತ್ರೆಯನ್ನು ಶುದ್ಧೀಕರಿಸುವ ಮಧ್ಯೆ ಹಳೆಯ ವಾಟರ್ ಕೂಲರ್, ಹಾನಿಗೊಳಗಾದ ಗೋಡೆ ಮತ್ತು ಸೀಲಿಂಗ್ ಅನ್ನು ದುರಸ್ತಿ ಮಾಡುತ್ತಿರುವುದು ಮಾಧ್ಯಮಗಳು ವರದಿ ಮಾಡಿವೆ.

ಉನ್ನತ ಸರ್ಕಾರಿ ಅಧಿಕಾರಿಗಳ ಭೇಟಿಗೂ ಮುನ್ನ ಆಸ್ಪತ್ರೆಯನ್ನು ನವೀಕರಿಸುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ. ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ ಇದನ್ನು ಟೀಕಿಸಿದ್ದು, ಬಿಜೆಪಿ ಪ್ರಧಾನಿಯವರಿಗೆ ಫೋಟೋ ಶೂಟ್ ಅನ್ನು ಖಚಿತಪಡಿಸಿಕೊಳ್ಳಲು ಈ ಯೋಜನೆಯನ್ನು ಮಾಡಿದೆ ಎಂದು ಆರೋಪಿಸಿದೆ.

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ಇದನ್ನು ದುರಂತ ಎಂದು ಬಣ್ಣಿಸಿದೆ. ಪ್ರಧಾನಿ ಮೊರ್ಬಿ ಆಸ್ಪತ್ರೆಗೆ ಭೇಟಿಲಿದ್ದಾರೆ. ಅದಕ್ಕೂ ಮೊದಲು ಬಣ್ಣ ಹಾಕಲಾಗುತ್ತಿದ್ದು, ಹೊಳೆಯುವ ಟೈಲ್ಸ್ ಅಳವಡಿಸಲಾಗುತ್ತಿದೆ. ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಪ್ರಧಾನಿಯವರ ಚಿತ್ರಗಳಲ್ಲಿ ಯಾವುದೇ ರೀತಿಯಲ್ಲಿ ಕೊರತೆ ಬರದಂತೆ ನೋಡಿಕೊಳ್ಳಲು ಈ ರೀತಿ ಮಾಡಲಾಗಿದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಅನೇಕ ಜನರು ಈ ದುರ್ಘಟನೆಯಲ್ಲಿ ಸಾವನ್ನಪ್ಪಿದ್ದಾಗ ಈ ರೀತಿಯ ಯೋಜನೆ ರೂಪಿಸುವುದರಲ್ಲಿ ನಿರತರಾಗಿದ್ದಾರೆ ಎಂದು ಕಿಡಿಕಾರಿದೆ.

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಿಂಗ್’ಮೇಕರ್ ಆಗಲು ಪ್ರಯತ್ನಿಸುತ್ತಿರುವ ಆಮ್ ಆದ್ಮಿ ಪಕ್ಷವು ಕೂಡ ಇದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿದೆ. ಕಳೆದ 27 ವರ್ಷಗಳಲ್ಲಿ ಬಿಜೆಪಿ ಅಭಿವೃದ್ಧಿ ಕೆಲಸ ಮಾಡಿದ್ದರೆ, ಮಧ್ಯರಾತ್ರಿ ಆಸ್ಪತ್ರೆಯನ್ನು ಅಲಂಕರಿಸುವ ಅಗತ್ಯವಿರಲಿಲ್ಲ ಎಂದು ಲೇವಡಿ ಮಾಡಿದೆ.

Join Whatsapp
Exit mobile version