ಬೆಂಗಳೂರು: ಚುನಾವಣೆ ಇನ್ನಷ್ಟು ಸಮೀಪಿಸುತ್ತಿದ್ದಂತೆ ಬಿಜೆಪಿ ಗಲಭೆ ಸೃಷ್ಟಿಸುವ, ಶಾಂತಿಗೆ ಭಂಗ ತರುವ ಪ್ರಯತ್ನವನ್ನು ಖಂಡಿತಾ ಮಾಡಲಿದೆ. ಮಂಡ್ಯ ಧ್ವಜ ವಿವಾದ ಪೂರ್ವಯೋಜಿತ ಕೃತ್ಯ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮಂಡ್ಯ ಹನುಮ ಧ್ವಜ ವಿವಾದಕ್ಕೆ ಸಂಬಂಧಿಸಿದಂತೆ ಪತ್ರಿಕಾ ಹೇಳಿಕೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಜ್ಞಾವಂತ ಕನ್ನಡಿಗರು ಶಾಂತಿ, ಸಂಯಮದ ಮೂಲಕ ಕೋಮುವಾದಿಗಳ ಷಡ್ಯಂತ್ರವನ್ನು ವಿಫಲಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.
ಕೆರೆಗೋಡು ಗ್ರಾಮ ಪಂಚಾಯಿತಿಯಿಂದ ಧ್ವಜ ಸ್ಥಂಬ ಸ್ಥಾಪನೆ ಸಂದರ್ಭದಲ್ಲಿ ಹಾಕಿದ ಷರತ್ತಿನ ಪತ್ರವನ್ನು ಬಿಡುಗಡೆ ಮಾಡಿರುವ ಸಿಎಂ, ರಾಷ್ಟ್ರಧ್ವಜ ಹಾರಬೇಕಿದ್ದ ಜಾಗದಲ್ಲಿ ಹನುಮಧ್ವಜ ಹಾರಿಸಿರುವುದು, ಉದ್ದೇಶಪೂರ್ವಕವಾಗಿ ನಿಯಮ ಉಲ್ಲಂಘಿಸಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವುದು ಈ ಯಾವುವೂ ಆಕಸ್ಮಿಕ ಅಲ್ಲ ಎಂದು ತಿಳಿಸಿದ್ದಾರೆ.
ಈ ಘಟನೆ ಬಿಜೆಪಿ ಹಾಗೂ ಸಂಘ ಪರಿವಾರದ ಪೂರ್ವ ನಿಯೋಜಿತ ಕೃತ್ಯ. ರಾಜ್ಯ ಸರ್ಕಾರದ ವಿರುದ್ಧ ವ್ಯವಸ್ಥಿತವಾಗಿ ಜನರನ್ನು ಎತ್ತಿಕಟ್ಟುವ ಉದ್ದೇಶದಿಂದಲೇ ಇಂತಹದ್ದೊಂದು ಸ್ಥಿತಿ ನಿರ್ಮಾಣ ಮಾಡಲಾಗಿದೆ. ಮಂಡ್ಯದಲ್ಲಿ ಕೋಮುಗಲಭೆ ಎಬ್ಬಿಸುವ ಸಂಚು ರೂಪಿಸಿರುವುದು ಬಿಜೆಪಿ ನಾಯಕರು ಲೋಕಸಭಾ ಚುನಾವಣೆಗೆ ನಡೆಸಿರುವ ತಯಾರಿಯಾಗಿದೆ ಎಂಬುದರಲ್ಲಿ ಅನುಮಾನವೇ ಇಲ್ಲ ಎಂದಿದ್ದಾರೆ.
ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ನಮ್ಮ ಸರ್ಕಾರ ಬದ್ಧವಾಗಿದೆ. ನಾವು ಯಾವುದೇ ನಿರ್ದಿಷ್ಟ ಜಾತಿ, ಧರ್ಮ, ಸಮುದಾಯದ ವಿರುದ್ಧವಿಲ್ಲ, ನಮ್ಮದು ಸಂವಿಧಾನಪರವಾದ ನಿಲುವು ಎಂದು ಹೇಳಿದ್ದಾರೆ.
ಬಿಜೆಪಿ ನಾಯಕರ ಮಾತುಗಳಿಗೆ ಮರುಳಾಗಿ, ಕಾನೂನು ಕೈಗೆತ್ತಿಕೊಳ್ಳುವ ತಪ್ಪನ್ನು ಜನತೆ ಮಾಡಬಾರದು. ಸಂವಿಧಾನ, ಕಾನೂನಿಗೆ ಗೌರವ ಕೊಡಬೇಕಿರುವುದು ನಮ್ಮೆಲ್ಲರ ಕರ್ತವ್ಯ ಎಂದು ಸಿಎಂ ಕರೆ ಕೊಟ್ಟಿದ್ದಾರೆ.