Home ಟಾಪ್ ಸುದ್ದಿಗಳು ಸಮುದ್ರದಲ್ಲಿ ತೇಲಿ ಬಂದ​ ಬಾಟಲನ್ನು ವಿದೇಶಿ ಮದ್ಯ ಎಂದು ಕುಡಿದ ಮೀನುಗಾರರು | ಮುಂದೇನಾಯಿತು?

ಸಮುದ್ರದಲ್ಲಿ ತೇಲಿ ಬಂದ​ ಬಾಟಲನ್ನು ವಿದೇಶಿ ಮದ್ಯ ಎಂದು ಕುಡಿದ ಮೀನುಗಾರರು | ಮುಂದೇನಾಯಿತು?

ಚೆನ್ನೈ: ಸಮುದ್ರದಲ್ಲಿ ತೇಲಿಬಂದ ಕೆಲವು ಬಾಟಲಿಗಳನ್ನು ಮೀನುಗಾರರು ವಿದೇಶಿ ಮದ್ಯ ಎಂದು ಸೇವನೆ ಮಾಡಿರುವ ಘಟನೆ ತಮಿಳುನಾಡಿನ ರಾಮೇಶ್ವರದಲ್ಲಿ ನಡೆದಿದೆ. ಆದರೆ ಅದು ಮದ್ಯವಾಗಿರದೇ ವಿಷಪೂರಿತ ದ್ರವವಾಗಿತ್ತು. ಅದನ್ನು ಕುಡಿಯುತ್ತಿದ್ದಂತೆಯೇ ಮೂವರು ಮೀನುಗಾರರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಮೃತರನ್ನು ರಾಮೇಶ್ವರಂ ಬಳಿಯ ತಂಗಾಚಿಮಡಂನ ಅಂಥೋನಿಸ್ವಾಮಿ (38) ಅರೋಕಿಯಾ ಪ್ರೋಹಿತ್ (50) ಹಾಗೂ ವಿನೋದ್ ಕುಮಾರ್ (26) ಎಂದು ಗುರುತಿಸಲಾಗಿದೆ. ಈ ಮೂವರು ಸಮುದ್ರದಲ್ಲಿ ತೇಲಿ ಬಂದ ಬಾಟಲನ್ನು ವಿದೇಶಿ ಮದ್ಯ ಎಂದು ಕುಡಿದು ಪ್ರಾಣ ಬಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಮೂವರು ಮೀನು ಹಿಡಿಯಲು ಸಮುದ್ರಕ್ಕೆ ಇಳಿಯುತ್ತಿದ್ದಂತೆಯೇ ದೂರದಲ್ಲಿ ತುಂಬಿದ ಬಾಟಲಿಗಳು ತೇಲಿ ಬರುತ್ತಿರುವುದನ್ನು ನೋಡಿದ ಮೀನುಗಾರರು ವಿದೇಶಿ ಮದ್ಯ ಎಂದು ಕುಡಿದಿದ್ದಾರೆ ಎನ್ನಲಾಗಿದೆ.

ಬಾಟಲ್ ನಲ್ಲಿ ಇರುವುದಾದರೂ ಏನು ಎಂಬುದನ್ನು ತಿಳಿಯುವ ಗೋಜಿಗೂ ಹೋಗದೇ ಅದರಲ್ಲಿದ್ದ ದ್ರವವನ್ನು ಕುಡಿದು ಮೂವರೂ ಅಸ್ವಸ್ಥಗೊಂಡಿದ್ದಾರೆ. ಉಳಿದ ಮೀನುಗಾರರು ಅವರನ್ನು ದಡಕ್ಕೆ ತರುವಾಗಲೇ ಇಬ್ಬರು ಮೃತಪಟ್ಟಿದ್ದರೆ, ಓರ್ವ ಆಸ್ಪತ್ರೆಯಲ್ಲಿ ಪ್ರಾಣಬಿಟ್ಟಿದ್ದಾನೆ.

ಮೀನುಗಾರಿಕೆ ಇಲಾಖೆ ಅಧಿಕಾರಿಗಳು, ಕರಾವಳಿ ಭದ್ರತಾ ಪಡೆ ಪೊಲೀಸರು ಮತ್ತು ಇತರ ಅಧಿಕಾರಿಗಳು ಈ ಪ್ರಕರಣ ಕುರಿತಾಗಿ ತನಿಖೆ ನಡೆಸುತ್ತಿದ್ದಾರೆ.

Join Whatsapp
Exit mobile version