►ಸಾಲಿಡಾರಿಟಿ ಯೂತ್ ಮೂವ್‌ಮೆಂಟ್‌ನಿಂದ ರಾಜ್ಯಮಟ್ಟದ ಪ್ರಥಮ ‘ಯುವ ಸಮಾವೇಶ’
“ಒಂದು ಸಂದರ್ಭದಲ್ಲಿ ನಾನೂ ಕೂಡ ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಮಾಡುತ್ತಿದ್ದೆ. ವಿಷದ ಬೀಜಗಳು ದೇಶದಲ್ಲೆಡೆ ಹರಡಿದ ಪರಿಣಾಮಕ್ಕೆ ನಾನೂ ಬಲಿಯಾಗಿದ್ದೆ. ಆದರೆ ಯಾವಾಗ ಅದು ತಪ್ಪು ಎಂದು ತಿಳಿದೆನೋ ಅಂದೇ ಹೊರಬಂದೆ. ಯಾಕೆಂದರೆ ಇವೆಲ್ಲವೂ ‘ದ್ವೇಷ ರಾಜಕಾರಣ’ದ ಫಲ ಎಂಬುದು ನನಗೆ ಅರಿವಾಯಿತು. ಜಟ್ಕಾಕಟ್, ಹಿಜಾಬ್ ವಿವಾದಗಳಿಗೆ ಕಾರಣ ಧರ್ಮ ಅಲ್ಲ, ರಾಜಕಾರಣ ಎಂಬುದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು” ಸಾಮಾಜಿಕ ಕಾರ್ಯಕರ್ತ ನಿಕೇತ್ ರಾಜ್ ಮೌರ್ಯ ಹೇಳಿದರು.
“ಇಂದು ದೇಶವ್ಯಾಪಿ ಸುಳ್ಳು ಹರಡಿದೆ. ಸುಳ್ಳು ಇಂದು ಅಧಿಕಾರದ ಚುಕ್ಕಾಣಿ ಹಿಡಿದಿದೆ. ಆದರೆ ಸತ್ಯ ಒಂದಲ್ಲ ಒಂದು ದಿನ ಅಧಿಕಾರಕ್ಕೆ ಬರುತ್ತದೆ ಎಂಬ ಭರವಸೆ ಇದೆ. ದೇಶ ಅಂದರೆ ಕೇವಲ ಗಡಿಗಳಲ್ಲ. ದೇಶ ಅಂದರೆ ಪ್ರಜೆಗಳು. ಅದೇ ರೀತಿ ಈ ದೇಶದ ಪ್ರಜೆಗಳು ತನಗಿಷ್ಟವಾದ ಆಹಾರ ತಿನ್ನಲು, ಇಷ್ಟವಾದ ಬಟ್ಟೆ ಉಡಲು ಯಾವಾಗ ಸ್ವಾತಂತ್ರ್ಯ ಇದೆಯೋ ಆಗ ಅದು ನಿಜವಾದ ದೇಶವಾಗುತ್ತದೆ” ನಿಕೇತ್ ರಾಜ್ ಮೌರ್ಯ ಹೇಳಿದರು.
ದೇಶಪ್ರೇಮದ ಹೆಸರಿನಲ್ಲಿ ಸಮುದಾಯಗಳನ್ನು ಒಡೆಯಬಾರದು. ಸಮುದಾಯಗಳ ನಡುವೆ ದ್ವೇಷವನ್ನು ಬಿತ್ತುವುದು ಸುಲಭದ ಕೆಲಸವಾಗಿದೆ. ದ್ವೇಷವನ್ನು ಬಿತ್ತಿ ನಾಯಕರಾಗುತ್ತಿದ್ದಾರೆ, ರಾಜಕಾರಣಿಗಳಾಗುತ್ತಿದ್ದಾರೆ, ಚುನಾವಣೆಗಳಲ್ಲಿ ಗೆದ್ದು, ಜನಪ್ರತಿನಿಧಿಗಳಾಗುತ್ತಿದ್ದಾರೆ. ಹಾಗಾಗಿ ಶಾಂತಿಯನ್ನು ಪ್ರತಿಪಾದನೆ ಮಾಡುವುದು ಕಷ್ಟದ ಕೆಲಸವಾಗುತ್ತಿದೆ ಎಂದು ನೋವು ವ್ಯಕ್ತಪಡಿಸಿದರು.
ದೇಶದಲ್ಲಿ ಗುಂಪು ಹತ್ಯೆ, ದ್ವೇಷ ಭಾಷಣ ನಿರಂತರವಾಗಿ ಹೆಚ್ಚಾಗುತ್ತಿದೆ. ಇದೊಂದು ವ್ಯವಸ್ಥಿತ ಷಡ್ಯಂತ್ರ. ಇದನ್ನು ನಿಲ್ಲಿಸಬೇಕಾದ ಅನಿವಾರ್ಯತೆ ದೇಶದ ಯುವಜನತೆಯ ಮುಂದಿದೆ. ಹೃದಯ ಮತ್ತು ಮನಸ್ಸನ್ನು ಗೆಲ್ಲುವ ಅಭಿಯಾನವನ್ನು ಪ್ರಾರಂಭಿಸಿ ಪ್ರತಿರೋಧ ತೋರಬೇಕಿದೆ. ಪದೇ ಪದೇ ಒತ್ತಿ ಹೇಳುವುದೇ ಪ್ರತಿರೋಧದ ಅತ್ಯಂತ ಶಕ್ತಿಯುತ ಮಾದರಿ ಎಂದು ಜಮಾಅತೆ ಇಸ್ಲಾಮೀ ಹಿಂದ್ ರಾಷ್ಟ್ರೀಯ ಅಧ್ಯಕ್ಷ ಸೈಯ್ಯದ್ ಸಾದತುಲ್ಲಾ ಹುಸೇನಿ ಅಭಿಪ್ರಾಯಿಸಿದರು.
ಭಾನುವಾರ ಬೆಂಗಳೂರಿನ ಮಿಲ್ಲರ್ಸ್ ರಸ್ತೆಯಲ್ಲಿರುವ ಖುದ್ದೂಸ್ ಸಾಹೇಬ್ ಈದ್ಗಾದಲ್ಲಿ ಸಾಲಿಡಾರಿಟಿ ಯೂತ್ ಮೂವ್‌ಮೆಂಟ್ ಕರ್ನಾಟಕದ ವತಿಯಿಂದ ಆಯೋಜಿಸಿದ್ದ ರಾಜ್ಯಮಟ್ಟದ ‘ಯುವ ಸಮಾವೇಶ’ದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
“ಮುಸ್ಲಿ ಸಮುದಾಯ ದೇಶದಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ನಾವು ಮಾತ್ರ ಯೋಚಿಸಬೇಕೆಂದು ಕೆಲವು ವರ್ಗದ ಜನರು ಬಯಸುತ್ತಾರೆ. ಆದರೆ ಮುಸ್ಲಿಮರು, ಅವರ ಸಮಸ್ಯೆಗಳು ಮಾತ್ರವಲ್ಲದೆ, ಇತರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆಯೂ ಸಹ ಮಾತನಾಡುವ ಧೈರ್ಯ ತೋರಿಸುತ್ತಿರುವುದು ಸ್ಥಾಪಿತ ಹಿತಾಸಕ್ತಿಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮುಸ್ಲಿಂ ಸಮುದಾಯ ಎಂದಿಗೂ ಸ್ವಾರ್ಥಿಗಳಾಗಿಲ್ಲ. ಮುಂದೆಯೂ ಆಗುವುದಿಲ್ಲ” ಎಂದು ಹೇಳಿದರು.
ಸಾಲಿಡಾರಿಟಿ ಕರ್ನಾಟಕ ರಾಜ್ಯಾಧ್ಯಕ್ಷ ಲಬೀದ್ ಶಾಫಿ ಮಾತನಾಡಿ, ಕೆಡುಕನ್ನು ಒಳಿತಿನ ಮೂಲಕ ದೂರ ಮಾಡಬೇಕೆಂದು ನಾವು ಕಲಿತಿರುವ ಪಾಠ. ದ್ವೇಷ, ಹಗೆತನದ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಹದಗೆಡಿಸಲಾಗುತ್ತಿದೆ. ಆದ್ದರಿಂದ ದೇಶದ ಯುವಕರು ಸಮಾಜದಲ್ಲಿ ನಿರ್ಮಾಣಾತ್ಮಕ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಶಾಂತಿ, ಪ್ರಗತಿ ಹಾಗೂ ಅಭ್ಯುದಯವನ್ನು ಸಾಧಿಸಬೇಕಿದೆ. ಯುವಕರನ್ನು ರಚನಾತ್ಮಕವಾಗಿ ಸಿದ್ಧಗೊಳಿಸುವುದು ಕಾಲದ ಬೇಡಿಕೆ. ಈ ನಿಟ್ಟಿನಲ್ಲಿ ಸಾಲಿಡಾರಿಟಿ ಯೂತ್ ಮೂವ್‌ಮೆಂಟ್‌ನ ಯುವಕರು ಪ್ರತಿ ಕ್ಷೇತ್ರಗಳಿಗೆ ಇಳಿದು ಈ ನಿಟ್ಟಿನಲ್ಲಿ ಕಾರ್ಯಾಚರಿಸಬೇಕಿದೆ. ಜೊತೆಗೆ ಸಮಾಜದಲ್ಲಿ ಪ್ರೀತಿಯನ್ನು ಹರಡಿ, ದ್ವೇಷ, ಹಗೆತನವನ್ನು ದೂರ ಮಾಡುವ ಭರವಸೆಯ ನಾಯಕರಾಗಿ ಮುನ್ನುಗ್ಗಬೇಕಿದೆ” ಎಂದು ಕರೆ ನೀಡಿದರು.
ದಿನಪೂರ್ತಿ ನಡೆದ ಯುವ ಸಮಾವೇಶದ ಭಾಗವಾಗಿ ಬೆಳಗಿನ ಅವಧಿಯಲ್ಲಿ “ಉದ್ಯಮ, ರಾಜಕೀಯ ಮತ್ತು ಸೇವೆ” ಎಂಬ ವಿಚಾರಗೋಷ್ಠಿಯಲ್ಲಿ ಸಾಮಾಜಿಕ ಕಾರ್ಯಕರ್ತ ನಿಕೇತ್ ರಾಜ್ ಮೌರ್ಯ, ಮಾನವ ಹಕ್ಕು ಹೋರಾಟಗಾರ ಕೆ.ಕೆ.ಸುಹೈಲ್ ಹಾಗೂ ಬ್ಯಾರಿಸ್ ಗ್ರೂಪ್‌ನ ಸಂಸ್ಥಾಪಕ ಅಧ್ಯಕ್ಷ ಸೈಯದ್ ಮುಹಮ್ಮದ್ ಬ್ಯಾರಿ ಮಾತನಾಡಿದರು.
“ರಾಜಕೀಯದ ವಸ್ತುವಾಗಿ ಇಂದು ಇಸ್ಲಾಮೋಫೋಬಿಯಾ ದೇಶದಲ್ಲಿ ಚರ್ಚೆ ನಡೆಸುತ್ತಾ, ಬಳಕೆ ಮಾಡಲಾಗುತ್ತಿದೆ. ಮುಸ್ಲಿಮರ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾ ಮಾಧ್ಯಮಗಳು ಹಿಂಸೆಗೆ ಪ್ರಚೋದನೆ ನೀಡುತ್ತಿವೆ. ಇದನ್ನು ತಡೆಗಟ್ಟಬೇಕಾದ ದೊಡ್ಡ ಜವಾಬ್ದಾರಿ ಇಂದಿನ ಯುವಜನತೆಯ ಮೇಲಿದೆ” ಎಂದು ಮಾನವ ಹಕ್ಕು ಹೋರಾಟಗಾರ ಕೆ.ಕೆ.ಸುಹೈಲ್ ತಿಳಿಸಿದರು.
ಬ್ಯಾರಿಸ್ ಗ್ರೂಪ್‌ನ ಸಂಸ್ಥಾಪಕ ಅಧ್ಯಕ್ಷ ಸೈಯದ್ ಮುಹಮ್ಮದ್ ಬ್ಯಾರಿ ಮಾತನಾಡಿ, ಯುವಕರು ಸೃಜನಾತ್ಮಕ ಚಿಂತನೆಯೊಂದಿಗೆ ಉದ್ಯಮ ರಂಗಕ್ಕೆ ಕಾಲಿಡಬೇಕು. ಅದನ್ನು ರಚನಾತ್ಮಕವಾಗಿ ಅಳವಡಿಸಿಕೊಂಡರೆ ಯಶಸ್ಸು ಸಾಧ್ಯ ಎಂದರು.
ಮಾಧ್ಯಮ ವಿಶ್ಲೇಷಣೆ ಮತ್ತು ದ್ವೇಷ ಭಾಷಣ | ಒಂದು ಅವಲೋಕನ; ಚಾವಡಿ ಚರ್ಚೆ
ಸಮಾವೇಶದಲ್ಲಿ “ಮಾಧ್ಯಮ ವಿಶ್ಲೇಷಣೆ ಮತ್ತು ದ್ವೇಷ ಭಾಷಣ : ಒಂದು ಅವಲೋಕನ” ಎಂಬ ವಿಷಯದಲ್ಲಿ ಚಾವಡಿ ಚರ್ಚೆ ನಡೆಯಿತು. ಈ ಚರ್ಚೆಯಲ್ಲಿ ಹಿರಿಯ ಪತ್ರಕರ್ತರಾದ ಆದಿತ್ಯ ಮೆನನ್, ಪ್ರಶಾಂತ್ ಟಂಡನ್, ಬಿ ಎಂ ಹನೀಫ್ ಬೆಂಗಳೂರು ಭಾಗವಹಿಸಿದ್ದರು.
ಈ ವೇಳೆ ಮಾತನಾಡಿದ ಪ್ರಶಾಂತ್ ಟಂಡನ್, “ಮಾಧ್ಯಮವು ಮಾನವ ದೇಹದಲ್ಲಿ ಕಿಡ್ನಿ ಇದ್ದಂತೆ. ಕಿಡ್ನಿ ಸರಿಯಾಗಿ ಕೆಲಸ ಮಾಡದಿದ್ದರೆ ಡಯಾಲಿಸೀಸ್ ಮಾಡಬೇಕಾಗುವುದು ಅನಿವಾರ್ಯ. ನಮ್ಮ ನಡುವೆ ಇರುವ ಹೆಚ್ಚಿನ ಮಾಧ್ಯಮಗಳು ಡಯಾಲಿಸೀಸ್‌ನಲ್ಲಿರುವಂತೆ ತೋರುತ್ತಿದೆ. ಮಾಧ್ಯಮಗಳು ಸಮಾಜದಲ್ಲಿ ನಡೆಸುತ್ತಿರುವ ಸಮಾಜ ವಿರೋಧಿ ಧೋರಣೆಗಳ ಬಗ್ಗೆ ಪ್ರಜ್ಞಾವಂತರು ಮಾತನಾಡಬೇಕಿದೆ” ಎಂದರು.
ಆದಿತ್ಯ ಮೆನನ್ ಮಾತನಾಡಿ, “ರಾಜಕೀಯ ನಾಯಕರ ಪೋಷಣೆಯಿಂದಾಗಿ ಸುಳ್ಳು ಸುದ್ದಿಯನ್ನು ಹರಡಲಾಗುತ್ತಿದೆ ಮತ್ತು ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಇದು ನಿರಂತರವಾಗಿ ಸಂಭವಿಸುತ್ತಲೇ ಇದೆ. ಯುವಕರು ಎಲ್ಲ ಕ್ಷೇತ್ರಗಳಲ್ಲಿ ಮುಂದೆ ಬರಬೇಕು. ಡಿಜಿಟಲ್ ಯುಗದಲ್ಲಿ ದೇಶದ ಯುವಕರು ಈಗ ಪ್ರಜ್ಞಾವಂತರಾಗುತ್ತಿದ್ದಾರೆ ಎಂಬುದಕ್ಕೆ ಸಿಎಎ ಹಾಗೂ ರೈತ ಹೋರಾಟಗಳೇ ಸಾಕ್ಷಿ. ಈ ಪ್ರಜ್ಞಾವಂತ ಯುವಕರೇ ದೇಶದ ಮುಂದಿನ ಭರವಸೆಯಾಗಿ ಕಾಣುತ್ತಿದ್ದಾರೆ” ಎಂದರು.
“ಮುಸ್ಲಿಂ ಸಮುದಾಯದ ವಿರುದ್ಧ ಇಂದು ಮಾಧ್ಯಮಗಳು ವ್ಯವಸ್ಥಿತವಾಗಿ ಸಂಚು ರೂಪಿಸಿ ಮೂಲೆಗುಂಪು ಮಾಡುತ್ತಿದೆ. ಆದರೆ, ಇವುಗಳಿಗೆ ಪ್ರತಿದಾಳಿ ನಡೆಸಲು ಜನಪರ, ಹಿಂದುಳಿದ ಮತ್ತು ಶೋಷಿತರ ಪರವಾಗಿ ಒಂದು ಮಾಧ್ಯಮ ಸಂಸ್ಥೆ ನಡೆಸಲು ಸಮುದಾಯದ ಮಂದಿಯೇ ಮುಂದೆ ಬರುತ್ತಿಲ್ಲ” ಎಂದು ಪತ್ರಕರ್ತ ಬಿ ಎಂ ಹನೀಫ್ ಇದು ವಿಷಾದ ವ್ಯಕ್ತಪಡಿಸಿದರು.
‘ಸಾಲಿಡಾರಿಟಿ ಎಕ್ಸಲೆನ್ಸ್ ಅವಾರ್ಡ್ – 2022’ ಪ್ರದಾನ
ಜಿ.ಮಹಾಂತೇಶ್ ಭದ್ರಾವತಿ(ಮಾಧ್ಯಮ), ತಬಸ್ಸುಮ್ ಮಂಗಳೂರು(ಸೇವೆ), ‘ಮರ್ಸಿ ಏಂಜಲ್ಸ್ ಸಂಸ್ಥೆ’ಯ ತನ್ವೀರ್ ಅಹ್ಮದ್ (ಸಮಾಜ ಸೇವೆ), ಮನ್ಸೂರ್ ಗೌಸ್ ಬೆಂಗಳೂರು (ಪರಿಸರ ಸಂರಕ್ಷಣೆ), ದಾವಣಗೆರೆಯ ಶುಹೇಬ್ ಬೇಗ್ ಕೆರೆಬಿಳಿಚಿ (ಶಿಕ್ಷಣ), ಶಿವಮೊಗ್ಗದ ಶೇಖ್ ಮುಹಮ್ಮದ್ ಇದ್ರೀಸ್(ಕಲೆ ಮತ್ತು ಸಂಸ್ಕೃತಿ), ಕಲಬುರಗಿಯ ಅಬ್ದುಲ್ ರೆಹಮಾನ್(ವಿಶೇಷ ಚೇತನ) ಹಾಗೂ ಅಸೋಷಿಯೇಷನ್ ಫಾರ್ ಮುಸ್ಲಿಂ ಪ್ರೊಫೆಷನಲ್ಸ್ (ಎಎಂಪಿ) ಎಂಬ ಸಂಸ್ಥೆಯ ನಝೀರ್ ಅಹ್ಮದ್ ಅವರಿಗೆ ‘ಸಾಲಿಡಾರಿಟಿ ಎಕ್ಸಲೆನ್ಸ್ ಅವಾರ್ಡ್ – 2022’ ಅನ್ನು ಪ್ರದಾನಿಸಲಾಯಿತು. ನವಾಝ್ ಮಂಗಳೂರು ಮತ್ತು ಶಾಕಿರಾ ಖಾನುಮ್ ಪ್ರಶಸ್ತಿ ಪತ್ರವನ್ನು ವಾಚಿಸಿದರು.
71 ಮಂದಿಯಿಂದ ರಕ್ತದಾನ
ಸಮಾವೇಶದ ಸಭಾಂಗಣದ ಬಳಿಯಲ್ಲಿಯೇ ಬೆಂಗಳೂರಿನ ಜೀವ ರಕ್ಷಾ ಬ್ಲಡ್ ಬ್ಯಾಂಕ್ ವತಿಯಿಂದ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ಒಟ್ಟು 71 ಮಂದಿ ಯುವಕರು ರಕ್ತದಾನ ಮಾಡಿದರು ಎಂದು ಸಂಸ್ಥೆಯ ಅಬ್ದುಲ್ ರಹಮಾನ್ ಮಾಹಿತಿ ನೀಡಿದರು. ಸಮಾವೇಶದ ಅಂಗವಾಗಿ ಪುಸ್ತಕ ಪ್ರದರ್ಶನ ಮತ್ತು ಮೇಳ, ವಸ್ತು ಪ್ರದರ್ಶನವನ್ನು ಆಯೋಜಿಸಲಾಗಿತ್ತು.
ಕೇರಳ ಸಾಲಿಡಾರಿಟಿ ಕೇರಳ ರಾಜ್ಯಾಧ್ಯಕ್ಷ ನಹಾಸ್ ಮಾಲ, ತಮಿಳುನಾಡಿನ ಪ್ರಖ್ಯಾತ ವಾಗ್ಮಿ ಫಾತಿಮಾ ಶಬರಿಮಾಲ, ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯಾಧ್ಯಕ್ಷ ಡಾ. ಮುಹಮ್ಮದ್ ಸಾದ್ ಬೆಳಗಾಮಿ, ಡಾ. ತಾಹಾ ಮತೀನ್, ಮುಹಮ್ಮದ್ ಕುಂಞಿ, ಅಕ್ಬರ್ ಅಲಿ ಉಡುಪಿ, ಮೌಲಾನಾ ವಹೀದುದ್ದೀನ್ ಖಾನ್ ಉಮರಿ ಮದನಿ, ಶೇಖ್ ಹಾರೂನ್ ಸಫ್ದರ್, ಸಮಾವೇಶದ ಸಂಚಾಲಕ ಅಖಿಲ್ ಅಹ್ಮದ್, ರೆಹಾನ್ ಉಡುಪಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಅಲ್ತಾಫ್ ಅಮ್ಜದ್ ಸಮಾವೇಶದ ನಿರ್ಣಯವನ್ನು ಮಂಡಿಸಿದರು. ಸಾಲಿಡಾರಿಟಿ ಮುಖಂಡ ಮುಹಮ್ಮದ್ ಮಾಝ್ ಮಣಿಯಾರ್ ಧನ್ಯವಾದವಿತ್ತರು. ಜಮಾಲುದ್ದೀನ್ ಹಿಂದಿ, ಮಝರ್ ಯಹ್ಯಾ ಮತ್ತು ಮುಸ್ತಫಾ ರಝ್ವಿ ನಿರೂಪಿಸಿದರು.