ಮಂಗಳೂರು: ಕೊಲೆ ಪ್ರಕರಣವೊಂದರ ಸಂಬಂಧ ಆರೋಪಿಗಳನ್ನು ಬಂಧಿಸಲು ಹೋದ ವೇಳೆ ಪೊಲೀಸರ ಮೇಲೆಯೇ ದಾಳಿಗೆ ಯತ್ನಿಸಿದ ಹಿನ್ನೆಲೆ, ಪ್ರತಿಯಾಗಿ ಪೊಲೀಸರು ಫೈರಿಂಗ್ ನಡೆಸಿ ಆರೋಪಿಗಳನ್ನು ಬಂಧಿಸಿರುವ ಘಟನೆ ನಗರದ ಹೊರವಲಯದ ಮುಲ್ಕಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇತ್ತೀಚೆಗೆ ಪಣಂಬೂರು ಠಾಣಾ ವ್ಯಾಪ್ತಿಯ ಬೈಕಂಪಾಡಿಯಲ್ಲಿ ನಡೆದಿದ್ದ ರಾಘವೇಂದ್ರ ಯಾನೆ ರಾಜ (28) ಕೊಲೆ ಪ್ರಕರಣದ ಆರೋಪಿಗಳು ಮೂಲ್ಕಿಯ ಗ್ಲೋಬಲ್ ಹೆರಿಟೇಜ್ ಲೇಔಟ್ ಬಳಿ ಅಡಗಿಕೊಂಡಿದ್ದು, ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಹೀಗಾಗಿ ಪಣಂಬೂರು ಪೊಲೀಸರು ಆರೋಪಿಗಳ ಬಂಧನ ಕಾರ್ಯಾಚರಣೆಗೆ ಮುಂದಾಗಿದ್ದರು. ಈ ವೇಳೆ ಆರೋಪಿಗಳು ದಾಳಿ ಪೊಲೀಸರ ಮೇಲೆಯೇ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ತಕ್ಷಣವೇ, ಎಚ್ಚೆತ್ತುಕೊಂಡ ಸಿಸಿಬಿ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್ ಮೂರು ಸುತ್ತಿನ ಗುಂಡು ಹಾರಿಸಿದ್ದಾರೆ.
ಪೊಲೀಸರ ಗುಂಡೇಟಿನಿಂದ ಆರೋಪಿಗಳಾದ ಅರ್ಜುನ್ ಮೂಡುಶೆಡ್ಡೆ ಹಾಗೂ ಮನೋಜ್ ಯಾನೆ ಬಿಂದಾಸ್ ಮನೋಜ್ ಗಾಯಗೊಂಡಿದ್ದಾರೆ. ಅಲ್ಲದೇ, ಆರೋಪಿಗಳ ದಾಳಿಯಿಂದ ಪಿಎಸ್ಐ ನಾಗೇಂದ್ರ, ಹೆಡ್ ಕಾನ್ ಸ್ಟೇಬಲ್ ಸಂತೋಷ್ ಪೂಜಾರಿ ಹಾಗೂ ಎಎಸ್ಐ ಡೇವಿಡ್ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಮುಕ್ಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.