ಬೆಂಗಳೂರು: ನಗರದ ಬೇಗೂರು ಸಮೀಪದ ದೇವರಚಿಕ್ಕನಹಳ್ಳಿಯ ಅಪಾರ್ಟ್ ಮೆಂಟ್ ಒಂದರಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಹಲವರು ಕಟ್ಟಡದೊಳಗೆ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಬೆಂಗಳೂರು ಐಐಎಂ ಸಮೀಪದಲ್ಲಿರುವ ಆಶ್ರಿತಾ ಆಸ್ಪೈರ್ ಎಂಬ ಅಪಾರ್ಟ್ ಮೆಂಟ್ ನಲ್ಲಿ ಮಂಗಳವಾರ ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಜ್ವಾಲೆ ಹಾಗೂ ದಟ್ಟಣೆಯ ಹೊಗೆ ಕಾಣಿಸಿಕೊಳ್ಳುತ್ತಿದ್ದಂತೆ ಕಟ್ಟಡದೊಳಗಿದ್ದ ಹಲವರು ಹೊರಗೆ ಓಡಿಬಂದಿದ್ದಾರೆ. ಕ್ಷಣಾರ್ಧದಲ್ಲಿ ಬೆಂಕಿ ಎಲ್ಲಾ ಕಡೆ ಆವರಿಸಿದ್ದು, ಕೆಲವರು ಕಟ್ಟಡದೊಳಗೆ ಸಿಲುಕಿಕೊಂಡರು. ವಿಷಯ ತಿಳಿದ ತಕ್ಷಣ 5ಕ್ಕೂ ಅಧಿಕ ಅಗ್ನಿಶಾಮಕ ವಾಹನ ಆಗಮಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿ ಐದು ಮಂದಿಯನ್ನು ರಕ್ಷಿಸಿದೆ. 42 ವರ್ಷ ಪ್ರಾಯದ ಮಹಿಳೆಯೊಬ್ಬರ ಪರಿಸ್ಥಿತಿ ಗಂಭೀರವಾಗಿದೆ. ರಕ್ಷಣಾ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.