Home ಟಾಪ್ ಸುದ್ದಿಗಳು ಇನ್ನೂ ರೈತರ ಪರವಾಗಿ ನಿಲ್ಲುತ್ತೇನೆ, ಶಾಂತಿಯುತ ಹೋರಾಟ ಬೆಂಬಲಿಸುತ್ತೇನೆ : ಗ್ರೆಟಾ ಥಂಬರ್ಗ್

ಇನ್ನೂ ರೈತರ ಪರವಾಗಿ ನಿಲ್ಲುತ್ತೇನೆ, ಶಾಂತಿಯುತ ಹೋರಾಟ ಬೆಂಬಲಿಸುತ್ತೇನೆ : ಗ್ರೆಟಾ ಥಂಬರ್ಗ್

ನವದೆಹಲಿ : ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಕುರಿತು ಮಾಡಿದ್ದ ಟ್ವೀಟ್ ಗೆ ಸಂಬಂಧಿಸಿ ಯುವ ಹವಾಮಾನ ಹೋರಾಟಗಾರ್ತಿ ಗ್ರೆಟಾ ಥಂಬರ್ಗ್ ವಿರುದ್ಧ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆದರೆ, ಈ ನಡುವೆ ಮತ್ತೊಂದು ಟ್ವೀಟ್ ಮಾಡಿರುವ ಗ್ರೆಟಾ ಥಂಬರ್ಗ್, ತಾನು ತನ್ನ ನಿಲುವಿಗೆ ಇನ್ನೂ ಬದ್ಧಳಾಗಿದ್ದೇನೆ ಎಂದು ಘೋಷಿಸಿದ್ದಾರೆ.

ಗ್ರೆಟಾ ಥಂಬರ್ಗ್ ರೈತ ಹೋರಾಟದ ಬಗ್ಗೆ ಮಾಡಿದ್ದ ಟ್ವೀಟ್ ಒಂದಕ್ಕೆ ಸಂಬಂಧಿಸಿ ದೆಹಲಿ ಪೊಲೀಸರು ಎಫ್ ಐಆರ್ ದಾಖಲಿಸಿದ್ದರು. ಈ ಬಗ್ಗೆ ಸುದ್ದಿ ಹರಡುತ್ತಿದ್ದಂತೆ ಮತ್ತೊಂದು ಟ್ವೀಟ್ ಮಾಡಿರುವ ಗ್ರೆಟಾ ಥಂಬರ್ಗ್, “ನಾನು ಇನ್ನೂ ರೈತರ ಪರವಾಗಿ ನಿಲ್ಲುತ್ತೇನೆ ಮತ್ತು ಅವರ ಶಾಂತಿಯುತ ಹೋರಾಟವನ್ನು ಬೆಂಬಲಿಸುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.

18 ವರ್ಷದ ಗ್ರೆಟಾ ಥಂಬರ್ಗ್ ನಿನ್ನೆ ರೈತರ ಹೋರಾಟ ಬೆಂಬಲಿಸಿ ಟ್ವೀಟ್ ಮಾಡಿ ಗಮನ ಸೆಳೆದಿದ್ದರು. ಅಂತಾರಾಷ್ಟ್ರೀಯ ಪಾಪ್ ಗಾಯಕಿ ರಿಹಾನ್ನಾ, ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟದ ಕುರಿತ ಸಿಎನ್ ಎನ್ ವರದಿ ಶೇರ್ ಮಾಡಿ, “ಈ ಬಗ್ಗೆ ಯಾಕೆ ಮಾತನಾಡುತ್ತಿಲ್ಲ?” ಎಂದು ಟ್ವೀಟ್ ಮಾಡಿದ ಬೆನ್ನಲ್ಲೇ ಜಾಗತಿಕ ಸೆಲೆಬ್ರಿಟಿಗಳು ರೈತ ಹೋರಾಟದ ಬಗ್ಗೆ ಗಮನ ಹರಿಸಿದ್ದರು.

ಈ ವೇಳೆ ಗ್ರೆಟಾ ಥಂಬರ್ಗ್ ಕೂಡ ರೈತರ ಹೋರಾಟ ಬೆಂಬಲಿಸಿ ಟ್ವೀಟ್ ಮಾಡಿದ್ದರು. ಆದರೆ, ರೈತರ ಹೋರಾಟಕ್ಕೆ ಸಂಬಂಧಿಸಿ ಮಾಡಿದ ಇನ್ನೊಂದು ಟ್ವೀಟ್ ಗೆ ಸಂಬಂಧಿಸಿ ದೆಹಲಿ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ. ಭಾರತದ ನೆಲದಲ್ಲಿರುವ ಜನರಿಗೆ ನೀವು ಸಹಾಯ ಮಾಡಬೇಕೆಂದಿದ್ದರೆ, ಇಲ್ಲಿ ಅಪ್ ಡೇಟ್ ಮಾಡಲಾದ ಟೂಲ್ ಕಿಟ್ ಒಂದನ್ನು ನೀಡಲಾಗಿದೆ ಎಂದು ಪ್ರತಿಭಟನೆ ಕುರಿತ ದಾಖಲೆಯೊಂದನ್ನು ಗ್ರೆಟಾ ಶೇರ್ ಮಾಡಿದ್ದರು.   

Join Whatsapp
Exit mobile version