ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಸರಕಾರದ ನೂತನ ಕೃಷಿ ನೀತಿಗಳ ವಿರುದ್ಧ ದೆಹಲಿ ಗಡಿ ಪ್ರದೇಶಗಳಲ್ಲಿ ಪ್ರತಿಭಟನೆ ನಿರತರಾಗಿರುವ ರೈತರು ಇಂದಿನಿಂದ ಸರಣಿ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ.
ಕನಿಷ್ಠ 11 ಮಂದಿ ಜನರು ಉಪವಾಸ ಸತ್ಯಾಗ್ರಹದಲ್ಲಿ ಒಂದೇ ಅವಧಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇತರ ರಾಜ್ಯಗಳ ರೈತರೂ ಪ್ರತಿಭಟನೆಗೆ ಬೆಂಬಲ ನೀಡುವಂತೆ ಸ್ವರಾಜ್ ಇಂಡಿಯಾ ಮುಖ್ಯಸ್ಥ ಯೋಗೇಂದ್ರ ಯಾದವ್ ಹೇಳಿದ್ದಾರೆ.
ದೆಹಲಿ ಗಡಿ ಪ್ರದೇಶಗಳಾದ ಸಿಂಘು, ಟಿಕ್ರಿ, ಉ.ಪ್ರ. ಗೇಟ್, ಚಿಲ್ಲಾಗಳಲ್ಲಿ ರೈತರು ಕಳೆದ ಕೆಲವು ದಿನಗಳಿಂದ ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಸರಕಾರ ರೈತರ ಪ್ರತಿಭಟನೆಯನ್ನು ಹತ್ತಿಕ್ಕಲು ಅವಕಾಶವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ಎಲ್ಲ ಪ್ರಕ್ರಿಯೆಗಳನ್ನೂ ಅದು ರಾಜಕೀಯಗೊಳಿಸಿ, ರೈತ ಮುಖಂಡರನ್ನು ತಪ್ಪಾಗಿ ಬಿಂಬಿಸಲು ಯತ್ನಿಸುತ್ತಿದೆ. ಆದರೂ, ಹಿಮ್ಮೆಟ್ಟದ ರೈತರು ದೃಢವಾಗಿ ಮೋದಿ ಸರಕಾರದ ವಿರುದ್ಧ ತೊಡೆತಟ್ಟಿ ನಿಂತಿದ್ದಾರೆ.