Home ಟಾಪ್ ಸುದ್ದಿಗಳು ಶಾಲೆ ಪ್ರಾರಂಭಕ್ಕೆ ಸಂಜೆ ಮಾರ್ಗಸೂಚಿ ಪ್ರಕಟ: ಸಚಿವ ನಾಗೇಶ್

ಶಾಲೆ ಪ್ರಾರಂಭಕ್ಕೆ ಸಂಜೆ ಮಾರ್ಗಸೂಚಿ ಪ್ರಕಟ: ಸಚಿವ ನಾಗೇಶ್

ಬೆಂಗಳೂರು: ಶಾಲೆ ಪ್ರಾರಂಭಕ್ಕೆ ಸಕಲ ಸಿದ್ಧತೆ ನಡೆಸಿದ್ದು, ಸಂಜೆ ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದಾರೆ.


ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಗಸ್ಟ್ 23ಕ್ಕೆ 9ರಿಂದ 12ನೇ ತರಗತಿವರೆಗಿನ ಶಾಲೆಗಳು ಪ್ರಾರಂಭವಾಗುತ್ತವೆ. ಅದಕ್ಕೆ ಬೇಕಾದ ಎಲ್ಲಾ ಸಿದ್ದತೆ ಮಾಡಿಕೊಳ್ತಿದ್ದೇವೆ. ಈಗಾಗಲೇ ಡಿಸಿಗಳ ಜೊತೆ ಮಾತುಕತೆ ನಡೆಸಿದ್ದೇನೆ. ಎರಡು ಜಿಲ್ಲೆ ಹೊರತು ಪಡಿಸಿ ಉಳಿದ ಕಡೆ ಪ್ರಾರಂಭಿಸಲಾಗುವುದು.


ಮಕ್ಕಳಿಗೆ ಪೂರಕವಾದ ಮಾರ್ಗಸೂಚಿ ಪ್ರಕಟವಾಗಲಿದೆ. ಮಕ್ಕಳಿಗೆ ಮಾಸ್ಕ್ ಕಡ್ಡಾಯ ಮಾಡಲಾಗುತ್ತದೆ. ಮನೆಯಿಂದ ಬಂದು ವಾಪಸಾಗುವವರೆಗೆ ಮಾಸ್ಕ್ ಧರಿಸಿರಬೇಕು. ಈ ಜವಾಬ್ದಾರಿಯನ್ನು ಶಿಕ್ಷಕರು ವಹಿಸಲಿದ್ದಾರೆ. ಶಿಕ್ಷಕರಿಂದಲೂ ಶಾಲೆ ಪ್ರಾರಂಭಕ್ಕೆ ಬೆಂಬಲವಿದೆ ಎಂದು ಅವರು ಹೇಳಿದರು.
ಶಾಲೆಯ ಶುಲ್ಕ ವಿಚಾರವಾಗಿ ನಾವು ಯಾವುದನ್ನೂ ಬಲವಂತವಾಗಿ ಹೇರಲಾಗಲ್ಲ. ರೂಪ್ಸಾ ಜೊತೆ ನಾನು ಮಾತನಾಡಿದ್ದೇನೆ. ಕೋವಿಡ್ ನಿಂದ ಪೋಷಕರು ಸಂಕಷ್ಟದಲ್ಲಿದ್ದಾರೆ. ಹಾಗಾಗಿ ಹೆಚ್ಚು ಬಲವಂತ ಮಾಡಬೇಡಿ ಎಂಬ ಮನವಿಗೆ ಖಾಸಗಿ ಶಾಲೆಗಳ ಸಂಘಟನೆ ಒಪ್ಪಿದೆ ಎಂದು ನಾಗೇಶ್ ವಿವರಿಸಿದರು.


ಪೂರ್ಣ ಶುಲ್ಕ ಕಟ್ಟಿ ಎಂದು ಒತ್ತಡ ಹೇರುವುದು ಸರಿಯಲ್ಲ. ಪೋಷಕರನ್ನು ಗ್ರಾಹಕರ ರೀತಿ ನೋಡಬೇಡಿ ಎಂದಿದ್ದೇನೆ. ಶಾಲೆಗಳನ್ನೂ ಇತಿಮಿತಿಗೆ ತೆಗೆದುಕೊಳ್ಳಬೇಕು. ಪೋಷಕರ ಹಿತವನ್ನೂ ಗಮನಿಸಬೇಕು. ಕೆಲವೊಂದು ವಿಚಾರ ಕೋರ್ಟ್ ನಲ್ಲಿವೆ. ಹಾಗಾಗಿ ನೇರವಾಗಿ ಹಿಡಿತ ಸಾಧಿಸುವುದು ಕಷ್ಟ ಎಂದು ಸಚಿವರು ಅಸಹಾಯಕತೆ ವ್ಯಕ್ತಪಡಿಸಿದರು.


ಮೂರನೇ ಅಲೆ ಬರುತ್ತದೆ ಎನ್ನಲಾಗುತ್ತಿದೆ. ತಜ್ಙರ ಸಲಹೆಗೆ ಹೆಚ್ಚಿನ ಒತ್ತು ಕೊಟ್ಟಿದ್ದೇವೆ. ಆಗಸ್ಟ್ 30 ರಂದು ತಜ್ಙರ ಸಮಿತಿ ಸಭೆ ನಡೆಯುತ್ತದೆ. ತಜ್ಙರ ಜೊತೆ ಸಿಎಂ ಸಭೆ ನಡೆಸುತ್ತಾರೆ. ಅಲ್ಲಿ 1 ರಿಂದ 8 ರವರೆಗೆ ತೆರೆಯುವ ಬಗ್ಗೆ ಚರ್ಚೆ ಮಾಡಿ ಮುಖ್ಯಮಂತ್ರಿಗಳು ನಿರ್ಧರಿಸುತ್ತಾರೆ ಎಂದು ನಾಗೇಶ್ ಹೇಳಿದರು.

Join Whatsapp
Exit mobile version