ವಕ್ಫ್ ಸಂಸ್ಥೆಗಳ ಮೂಲಕ ಹೆಣ್ಣು ಮಕ್ಕಳ ಶಾಲಾ ಕಾಲೇಜುಗಳ ಸ್ಥಾಪನೆ: ಮೌಲಾನಾ ಶಾಫಿ ಸಅದಿ

Prasthutha|

ಬೆಂಗಳೂರು: ಶಿರವಸ್ತ್ರಕ್ಕೆ ಸಂಬಂಧಿಸಿ ಸರಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಂ ಹೆಣ್ಣು ಮಕ್ಕಳು ಯಾವ ರೀತಿಯ ಪರಿಸ್ಥಿತಿಯನ್ನು ಎದುರಿಸಿದರು ಎಂಬುದರ ಬಗ್ಗೆ ಪರಿಶೀಲನೆ ನಡೆಸಲಾಗಿದ್ದು,ಈಗಾಗಲೇ ಮದ್ರಸಾಗಳನ್ನು ಹೊಂದಿರುವ ವಕ್ಫ್ ನ ಸಂಸ್ಥೆಗಳಲ್ಲಿ ಅವಕಾಶವಿದ್ದರೆ ಅಲ್ಲಿ ಹೆಣ್ಣು ಮಕ್ಕಳಿಗಾಗಿ ಶಾಲಾ ಕಾಲೇಜುಗಳನ್ನು ಆರಂಭಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಮೌಲಾನ ಎನ್.ಕೆ. ಮುಹಮ್ಮದ್ ಶಾಫಿ ಸಅದಿ ತಿಳಿಸಿದ್ದಾರೆ.

- Advertisement -

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯ ವಕ್ಫ್ ಬೋರ್ಡ್‌ ನ ಕಚೇರಿಯಲ್ಲಿ ಎರಡು ದಿನಗಳ ಕಾಲ ನಡೆದ ಸದಸ್ಯರ ಸಭೆಯಲ್ಲಿ ಕೈಗೊಂಡ ತೀರ್ಮಾನಗಳ ಬಗ್ಗೆ ಮಾಹಿತಿ ನೀಡಿದರು.

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಲಭ್ಯವಿರುವ ವಕ್ಫ್ ನ ಖಾಲಿ ಜಾಗಗಳಲ್ಲಿ ಸ್ಥಳೀಯ ವಕ್ಫ್ ಸಂಸ್ಥೆಗಳ ಮೂಲಕ ಹೆಣ್ಣು ಮಕ್ಕಳಿಗಾಗಿ ಶಾಲಾ ಕಾಲೇಜುಗಳ ಸ್ಥಾಪನೆಗೆ ಆದ್ಯತೆ ನೀಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

- Advertisement -

ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ನೀಡಿರುವ ತೀರ್ಪನ್ನು ಪ್ರಶ್ನಿಸಿ ವಿದ್ಯಾರ್ಥಿನಿಯರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದು ಅವರಿಗೆ ನೈತಿಕವಾಗಿ ಬೆಂಬಲ ನೀಡಲು ವಕ್ಫ್ ಬೋರ್ಡ್ ಸದಸ್ಯರಾದ ಸಂಸದ ಸೈಯದ್ ನಾಸೀರ್ ಹುಸೇನ್, ಅಬ್ದುಲ್ ರಿಯಾಝ್ ಖಾನ್ ದೇಶದ ಹಿರಿಯ ವಕೀಲರೊಂದಿಗೆ ಸಭೆಯನ್ನು ನಡೆಸಿದ್ದಾರೆ. ಇದು ಕಾನೂನು ಹೋರಾಟಕ್ಕೆ ನೆರವು ನೀಡಲಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿರುವ ವಕ್ಫ್ ಆಸ್ತಿಗಳಲ್ಲಿ ಶಿಕ್ಷಣ ಸಂಸ್ಥೆಗಳ ಸ್ಥಾಪನೆಯ ನಿಟ್ಟಿನಲ್ಲಿ ಸಮುದಾಯದ ಗಣ್ಯರ ಜೊತೆಯೂ ಸಭೆಯನ್ನು ನಡೆಸಲಾಗುವುದು ಎಂದು ಅವರು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಕೆಲವು ಮತೀಯ ಸಂಘಟನೆಗಳು ರಾಜ್ಯದಲ್ಲಿ ಹಿಂದೂ ಮುಸ್ಲಿಂ  ಸಾಮರಸ್ಯ ಕೆಡಿಸುತ್ತಿರುವ ಘಟನೆಗಳು ನಡೆಯುತ್ತಿದ್ದು, ಈ ನಿಟ್ಟಿನಲ್ಲಿ ಸಮಾಜದಲ್ಲಿ ಶಾಂತಿ ಸೌಹಾರ್ದತೆಯ ಸಂದೇಶ ಸಾರುವ “ಇಫ್ತಾರ್ ಸಂಗಮ”ವನ್ನು ನಡೆಸಲು ರಾಜ್ಯದ ಎಲ್ಲಾ ವಕ್ಫ್ ಸಂಸ್ಥೆಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ನಮ್ಮ ಯೂಟ್ಯೂಬ್ ಚಾನೆಲನ್ನು Subscribe ಮಾಡಿ : Prasthutha News

Join Whatsapp
Exit mobile version