Home ಟಾಪ್ ಸುದ್ದಿಗಳು ಕಾಶಿ, ಮಥುರಾದಲ್ಲಿ ಮಸೀದಿ ಧ್ವಂಸಗೊಂಡು ಮಂದಿರ ನಿರ್ಮಾಣವಾಗಲಿದೆ ಎಂದ ಈಶ್ವರಪ್ಪ

ಕಾಶಿ, ಮಥುರಾದಲ್ಲಿ ಮಸೀದಿ ಧ್ವಂಸಗೊಂಡು ಮಂದಿರ ನಿರ್ಮಾಣವಾಗಲಿದೆ ಎಂದ ಈಶ್ವರಪ್ಪ

ಗುಂಡ್ಲುಪೇಟೆ: ‘ನರೇಂದ್ರ ಮೋದಿ ಅವರು 2024ಕ್ಕೆ ಮತ್ತೆ ದೇಶದ ಪ್ರಧಾನಿಯಾಗುತ್ತಾರೆ. ಕಾಶಿ ಮತ್ತು ಮಥುರಾದಲ್ಲಿ ಮಸೀದಿಗಳು ಧ್ವಂಸ ಆಗಿ ಎರಡೂ ಕಡೆಗಳಲ್ಲಿ ದೇವಾಲಯ ನಿರ್ಮಾಣ ಆಗಿಯೇ ಆಗುತ್ತದೆ. ಇದರಲ್ಲಿ ಅನುಮಾನವೇ ಇಲ್ಲ’ ಎಂದು ಶಾಸಕ, ಕೆ.ಎಸ್‌.ಈಶ್ವರಪ್ಪ ಗುರುವಾರ ಹೇಳಿದರು.

ಪಟ್ಟಣದ ನೆಹರು ಪಾರ್ಕ್‌ ಬಳಿ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಸಮಾವೇಶದಲ್ಲಿ ಮಾತನಾಡಿದ ಅವರು, ‘ಕಾಶಿಯಲ್ಲಿ ವಿಶ್ವನಾಥ ದೇವಾಲಯವನ್ನು ಹಾಗೂ ಮಥುರಾದಲ್ಲಿ ಕೃಷ್ಣನ ದೇವಾಲಯವನ್ನು ಕೆಡವಿ ದೇವಾಲಯಗಳನ್ನು ನಿರ್ಮಿಸಿದ್ದಾರೆ. ಆ ಎರಡೂ ಮಸೀದಿಗಳು ಧ್ವಂಸವಾಗಿ ದೇವಾಲಯಗಳು ನಿರ್ಮಾಣವಾಗಲಿವೆ’ ಎಂದರು.

‘ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರ ನಿರ್ಮಾಣವಾಗುತ್ತಿದೆ. ಉದ್ಘಾಟನೆಯಾದ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ವಿರೋಧ ಪಕ್ಷದ ಸಿದ್ದರಾಮಯ್ಯ ಹೋಗಿ ಬರಲಿ. ಅವರ ಪಾಪವಾದರೂ ಕಡಿಮೆಯಾಗಲಿದೆ’ ಎಂದು ಹೇಳಿದರು.

‘ಕಾಂಗ್ರೆಸ್‌ನಲ್ಲಿ ಒಬ್ಬರ ಕಾಲನ್ನು ಇನ್ನೊಬ್ಬರು ಎಳೆಯುತ್ತಾರೆ. ಮುಖ್ಯಮಂತ್ರಿ ಆಕಾಂಕ್ಷಿ ಎಂದು
ಪರಮೇಶ್ವರ್ ಅವರನ್ನು ಸಿದ್ದರಾಮಯ್ಯ ಸೋಲಿಸಿದರು. ಮೈಸೂರಿನ ಚಾಮುಂಡೇಶ್ವರಿಯಲ್ಲಿ ಪರಮೇಶ್ವರ್ ಶಿಷ್ಯರು, ಅಭಿಮಾನಿಗಳು ಬಂದು ಸಿದ್ದರಾಮಯ್ಯನವರನ್ನು ಸೋಲಿಸಿದರು. ಇಲ್ಲ ಎಂದು ಪರಮೇಶ್ವರ್ ಹಾಗೂ ಸಿದ್ದರಾಮಯ್ಯ ಚಾಮುಂಡೇಶ್ವರಿ ಮೇಲೆ ಆಣೆ ಮಾಡಿ ಹೇಳಲಿ’ ಎಂದು ಸವಾಲು ಹಾಕಿದರು.

Join Whatsapp
Exit mobile version