Home ಕ್ರೀಡೆ 22 ವರ್ಷಗಳ ಬಳಿಕ ಪಾಕಿಸ್ತಾನದಲ್ಲಿ ಟೆಸ್ಟ್‌ ಸರಣಿ ಗೆದ್ದ ಇಂಗ್ಲೆಂಡ್‌

22 ವರ್ಷಗಳ ಬಳಿಕ ಪಾಕಿಸ್ತಾನದಲ್ಲಿ ಟೆಸ್ಟ್‌ ಸರಣಿ ಗೆದ್ದ ಇಂಗ್ಲೆಂಡ್‌

ಮುಲ್ತಾನ್‌ ಮೈದಾನದಲಿ ನಡೆದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನ ತಂಡವನ್ನು ಇಂಗ್ಲೆಂಡ್‌,  27 ರನ್‌ಗಳಿಂದ ರೋಚಕವಾಗಿ ಮಣಿಸಿದೆ. ಆ ಮೂಲಕ 22 ವರ್ಷಗಳಲ್ಲಿಇದೇ ಮೊದಲ ಬಾರಿಗೆ ಪಾಕ್‌ ನೆಲದಲ್ಲಿ ಟೆಸ್ಟ್‌ ಸರಣಿ ಜಯದ ಸಂಭ್ರಮವನ್ನಾಚರಿಸಿದೆ.

ಮೂರು ಪಂದ್ಯಗಳ ಟೆಸ್ಟ್‌ ಸರಣಿಯನ್ನಾಡಲು 17 ವರ್ಷಗಳ ಬಳಿಕ ಬೆನ್‌ ಸ್ಟೋಕ್ಸ್‌ ಸಾರಥ್ಯದಲ್ಲಿ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಂಡಿರುವ ಇಂಗ್ಲೆಂಡ್‌, ರಾವಲ್ಪಿಂಡಿಯಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯದಲ್ಲಿ 74 ರನ್‌ಗಳ ಅಂತರದಲ್ಲಿ ಬಾಬರ್‌ ಪಡೆಯನ್ನು ಮಣಿಸಿತ್ತು.

ದ್ವಿತೀಯ ಇನ್ನಿಂಗ್ಸ್‌ನಲ್ಲಿ ಗೆಲುವಿಗೆ 354ರನ್‌ಗಳ ಗುರಿ ಪಡೆದಿದ್ದ ಪಾಕಿಸ್ತಾನ, 3ನೇ ದಿನದಾಟದ ಅಂತ್ಯಕ್ಕೆ 4 ವಿಕೆಟ್‌ ನಷ್ಟದಲ್ಲಿ 198 ರನ್‌ಗಳಿಸಿತ್ತು. ಎರಡು ದಿನಗಳ ಆಟ ಬಾಕಿ ಉಳಿದಿದ್ದ ಕಾರಣ, ಆತಿಥೇಯರು ಗೆಲ್ಲುವ ಉತ್ಸಾಹದಲ್ಲಿದ್ದರು. ಆದರೆ 4ನೇ ದಿನ ಮಾರ್ಕ್‌ವುಡ್‌ ಮತ್ತು ಅನುಭವಿ ಆಂಡರ್‌ಸನ್‌ ದಾಳಿಗೆ ಕುಸಿದ ಪಾಕ್‌ 328 ರನ್‌ಗಳಿಗೆ ಆಲೌಟ್‌ ಆಯಿತು.

ದುಬಾರಿಯಾದ ವಿವಾದಿತ ಕ್ಯಾಚ್‌

ಪಾಕಿಸ್ತಾನ ಪಾಳಯದಲ್ಲಿ ಗೆಲುವಿನ ಭರವಸೆ ಮೂಡಿಸಿದ್ದ ಸೌದ್‌ ಶಕೀಲ್‌, 94 ರನ್‌ಗಳಿಸಿದ್ದ ವೇಳೆ ಮಾರ್ಕ್‌ ವುಡ್‌ ಎಸೆತದಲ್ಲಿ ಕೀಪರ್‌ ಒಲಿ ಪೊಪೆಗೆ ಕ್ಯಾಚಿತ್ತು ನಿರ್ಗಮಿಸಿದರು. ಆದರೆ ರೀಪ್ಲೇಯಲ್ಲಿ ಚೆಂಡು ನೆಲಕ್ಕೆ ಬಡಿದಿರುವುದು ಸ್ಪಷ್ಟವಾಗಿ ಗೋಚರಿಸಿತ್ತು. ಇಮಾಮುಲ್‌ ಹಖ್‌ 60, ಮುಹಮ್ಮದ್‌ ನವಾಝ್‌ ಮತ್ತು ಅಬ್ದುಲ್‌ ಶಾರೀಖ್‌ ತಲಾ 45 ರನ್‌ಗಳಿಸಿ ವಿಕೆಟ್‌ ಒಪ್ಪಿಸಿದರು.

 ಇಂಗ್ಲೆಂಡ್‌ ಪರ ಮಾರ್ಕ್‌ ವುಡ್‌ ಪ್ರಮುಖ 4 ವಿಕೆಟ್‌ ಪಡೆದರೆ, ಜೇಮ್ಸ್‌ ಆಂಡರ್‌ಸನ್‌ ಮತ್ತೊ ಓಲಿ ರಾಬಿನ್ಸನ್‌ ತಲಾ 2 ವಿಕೆಟ್‌ ಪಡೆದರು. ಸರಣಿಯ ಮೂರನೇ ಮತ್ತು ಅಂತಿಮ ಪಂದ್ಯ ಡಿಸೆಂಬರ್‌17, ಶನಿವಾರದಿಂದ ಕರಾಚಿಯಲ್ಲಿ ಆರಂಭವಾಗಲಿದೆ.

Join Whatsapp
Exit mobile version