ಬೆಂಗಳೂರು: ಸಂವಿಧಾನದ ಆಶಯದಂತೆ ಗ್ರಾಮ ಪಂಚಾಯತಿಗಳು ಸ್ಥಳೀಯ ಸ್ವಯಂ ಸರ್ಕಾರಗಳಾಗಿ ಕಾರ್ಯ ನಿರ್ವಹಿಸುವಂತಾಗಲು ವಿವಿಧ ಬೇಡಿಕೆಗಳನ್ನು ಈಡೇರಿಸಲು ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ಸದಸ್ಯರ ಮಹಾ ಒಕ್ಕೂಟದಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಸುರಿಯವ ಮಳೆಯ ಮಧ್ಯೆ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯ ಸ್ಥಳಕ್ಕೆ ಬೇಟಿ ನೀಡಿದ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಗ್ರಾಮ ಪಂಚಾಯತಿ ಸದಸ್ಯರ ಬೇಡಿಕೆಗಳು ಸರಿಯಾಗಿವೆ. ಮುಖ್ಯಮಂತ್ರಿಗಳು ಗುಜರಾತ್ ಪ್ರವಾಸದಲ್ಲಿದ್ದು, ತಮ್ಮೆಲ್ಲ ಬೇಡಿಕೆಗಳ ಕುರಿತು ಮುಖ್ಯಮಂತ್ರಿಗಳ ಜತೆ ಚರ್ಚೆ ನಡೆಸಲಾಗುವುದು. ಇವುಗಳ ಅನುಷ್ಠಾನಕ್ಕಾಗಿ ಸರ್ಕಾರದ ಗಮನಸೆಳೆಯಲಾಗುವುದು ಎಂದು ತಿಳಿಸಿದರು.
ಸಹಕಾರ ಸಚಿವರ ಜತೆ ವಿಧಾನ ಪರಿಷತ್ ಸದಸ್ಯ ರವಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್ ಮತ್ತಿತರರು ಹಾಜರಿದ್ದರು.
ಕೇರಳ ಸರ್ಕಾರದ ಮಾದರಿಯಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರ ವೇತನವನ್ನು 15 ಸಾವಿರ ರೂಪಾಯಿ, ಉಪಾಧ್ಯಕ್ಷರ ವೇತನ 12ಸಾವಿರ ಸದಸ್ಯರ ವೇತನವನ್ನು 10ಸಾವಿರ ರೂಪಾಯಿವರೆಗೆ ಹೆಚ್ಚಿಸಬೇಕು, ಗ್ರಾಮ ಪಂಚಾಯಿತಿ ಸದಸ್ಯರಿಗೆ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಿಗೆ ಜನರ ಕೆಲಸಕ್ಕೆ ಓಡಾಡಲು ಅನುಕೂಲವಾಗುವಂತೆ ಉಚಿತ ಬಸ್ ಪಾಸ್ ವ್ಯವಸ್ಥೆ ಮಾಡಬೇಕು ಎಂದು ಪಂಚಾಯತಿ ಸದಸ್ಯರು ಆಗ್ರಹಿಸಿದರು.
ಕೇಂದ್ರ ಸರ್ಕಾರದ ಜಲಜೀವನ್ ಮಿಷನ್ ಅನುಷ್ಠಾನದಲ್ಲಿ ಕೇಂದ್ರ ಸರ್ಕಾರದ ಜಲಶಕ್ತಿ ಇಲಾಖೆಯ ಮಾರ್ಗಸೂಚಿ ಅನ್ವಯ ಕೇಂದ್ರ ಸರ್ಕಾರದ ಪಾಲು ಶೇ45, ರಾಜ್ಯ ಸರ್ಕಾರದ ಪಾಲು ಶೇ45 ಹಾಗೂ ಫಲಾನುಭವಿಯ ಪಾಲು ಶೇ 10ರಷ್ಟಿದೆ.ರಾಜ್ಯ ಸರ್ಕಾರ ಹದಿನೈದನೆಯ ಹಣಕಾಸು ಆಯೋಗದ ಅನುದಾನದಲ್ಲಿ ಗ್ರಾಮ ಪಂಚಾಯತಿಗಳ ಹಣವನ್ನು ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ವಿರುದ್ಧವಾಗಿ ಬಳಸಿಕೊಂಡಿದೆ.ಕೂಡಲೇ ಈ ಹಣವನ್ನು ಗ್ರಾಮ ಪಂಚಾಯಿತಿಗಳಿಗೆ ವಾಪಸ್ಸು ನೀಡಬೇಕು ಎಂದು ಒತ್ತಾಯಿಸಿದರು.
ಮಹಾ ಒಕ್ಕೂಟದ ರಾಜ್ಯಾಧ್ಯಕ್ಷ ಕಾಡಾಶೆಟ್ಟಿ ಹಳ್ಳಿ ಸತೀಶ್, ಪ್ರಧಾನ ಕಾರ್ಯದರ್ಶಿ ಛಲಪತಿ ಸೇರಿದಂತೆ ಸಾವಿರಾರು ವಿವಿಧಡೆಯ ಗ್ರಾಮ ಪಂಚಾಯತಿ ಸದಸ್ಯರು ಪ್ರತಿಭಟನೆ ಯಲ್ಲಿ ಭಾಗವಹಿಸಿದ್ದರು.