Home ಟಾಪ್ ಸುದ್ದಿಗಳು ಜಾತಿ ವ್ಯವಸ್ಥೆಯನ್ನು ಕಾಪಿಟ್ಟುಕೊಳ್ಳಲು ಮತಾಂತರ ನಿಷೇಧ ಕಾಯ್ದೆ ಜಾರಿ: ಬಿ. ಆರ್. ಭಾಸ್ಕರ್ ಪ್ರಸಾದ್

ಜಾತಿ ವ್ಯವಸ್ಥೆಯನ್ನು ಕಾಪಿಟ್ಟುಕೊಳ್ಳಲು ಮತಾಂತರ ನಿಷೇಧ ಕಾಯ್ದೆ ಜಾರಿ: ಬಿ. ಆರ್. ಭಾಸ್ಕರ್ ಪ್ರಸಾದ್

ಬೆಂಗಳೂರು: ಜಾತಿ ವ್ಯವಸ್ಥೆಯಂತಹ ನೀಚ ಪದ್ಧತಿಯನ್ನು ಹೇಗಾದರೂ ಮಾಡಿ ಕಾಪಿಟ್ಟುಕೊಂಡು ಹೋಗಬೇಕು ಎನ್ನುವ ಮನುವಾದಿಗಳ ತಂತ್ರದ ಭಾಗವಾಗಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲಾಗಿದೆ ಎಂದು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ ಡಿಪಿಐ) ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಆರ್. ಭಾಸ್ಕರ್ ಪ್ರಸಾದ್ ಟೀಕಿಸಿದ್ದಾರೆ.

ಜಾತಿ ಹೆಸರಿನಲ್ಲಿ ಕ್ರೌರ್ಯ ಮೆರೆಯುವುದು ಮನುವಾದಿಗಳ ಹಕ್ಕು ಎಂದು ಘೋಷಿಸಿಕೊಳ್ಳುವುದೇ ಈ ಮತಾಂತರ ನಿಷೇಧ ಕಾಯ್ದೆಯ ಉದ್ದೇಶ. ಇದು ಭಾರತದ ಸಂವಿಧಾನದ ಪರಿಚ್ಛೇದ 25 ರ ಸ್ಪಷ್ಟ ಉಲ್ಲಂಘನೆ ಎಂದು ಅವರು ಹೇಳಿದ್ದಾರೆ.

ತಾನು ಈಗ ಇರುವ ಅಥವಾ ತನ್ನ ಮೇಲೆ ಜನ್ಮದ ಆಧಾರದ ಮೇಲೆ ಹೇರಲ್ಪಟ್ಟಿರುವ ಧರ್ಮದಿಂದ ಬೇರ್ಪಟ್ಟು ಬೇರೊಂದು ಧರ್ಮವನ್ನು ಸ್ವೀಕರಿಸುವುದು ಜಗತ್ತಿನಾದ್ಯಂತ ನಡೆದುಕೊಂಡಿರುವ ಬಂದಿರುವಂತಹ ಪ್ರಕ್ರಿಯೆ. ಅದರಲ್ಲೂ ಜಾತಿ ವ್ಯವಸ್ಥೆಯಂತಹ ನೀಚ, ಅಮಾನವೀಯ, ಅವಮಾನಕರ ಮತ್ತು ಅಸಹ್ಯ ಪದ್ಧತಿ ಇರುವ ಪದ್ದತಿ ಇರುವ ಧರ್ಮದಿಂದ ದಲಿತ ಜನಾಂಗ ಅದರಲ್ಲೂ ಅಸ್ಪೃಶ್ಯರು ಹೊರ ನಡೆಯಬೇಕು ಎನ್ನುವುದು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯ. ಅದು ನಮ್ಮ ಸಂವಿಧಾನಬದ್ಧ ಹಕ್ಕು ಕೂಡ ಹೌದು. ಆದರೆ ಮನುವಾದಿ ಬಿಜೆಪಿ ಸರ್ಕಾರ ಈ ಹಕ್ಕನ್ನು ದಲಿತರಿಂದ ಕಸಿಯುವ ಉದ್ದೇಶದಿಂದ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿದೆ ಎಂದು ಭಾಸ್ಕರ್ ಪ್ರಸಾದ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಕಾಯ್ದೆ ಕೇವಲ ಬಲವಂತದ, ಆಮಿಷದ ಮತಾಂತರಗಳ ವಿರುದ್ಧ ಮಾತ್ರ ಎಂದು ಸರ್ಕಾರ ಹೇಳುತ್ತಿದೆ. ಆದರೆ ಇದರಲ್ಲಿ ಇರುವಂತಹ ಕೆಲವು ಷರತ್ತುಗಳನ್ನು ನೋಡಿದಾಗ ಯಾವುದೇ ವ್ಯಕ್ತಿಯು ಕೂಡ ಯಾವುದೇ ಕಾರಣಕ್ಕೂ, ಮನಃಪರಿವರ್ತನೆಯಾದರೂ ಮತಾಂತರ ಆಗುವುದು ಸಾಧ್ಯವಿಲ್ಲ. ಇದರಲ್ಲಿ ಇರುವಂತಹ ಒಂದು ಮುಖ್ಯ ಅಂಶವಾದ ಮತಾಂತರಗೊಳ್ಳುವ ವ್ಯಕ್ತಿಯ ಯಾವುದೇ ರಕ್ತ ಸಂಬಂಧಿ ಅದಕ್ಕೆ ವಿರೋಧವನ್ನು ವ್ಯಕ್ತಪಡಿಸಿದರೆ ಅಥವಾ ತನ್ನ ಸಂಬಂಧಿ ಹಣದ ಆಮಿಷಕ್ಕೆ ಅಥವಾ ಬಲವಂತಕ್ಕೆ ಮತಾಂತರಗೊಳ್ಳುತ್ತಿದ್ದಾನೆ ಎಂದು ಹೇಳಿಕೆಯನ್ನು ಜಿಲ್ಲಾಧಿಕಾರಿಗಳ ಮುಂದೆ ನೀಡಿದರೆ ಆ ಮತಾಂತರವನ್ನು ಜಿಲ್ಲಾಧಿಕಾರಿ ಪುರಸ್ಕರಿಸುವುದಿಲ್ಲ. ಇದು ಮತಾಂತರ ಸಾಧ್ಯವೇ ಇಲ್ಲದಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡುತ್ತದೆ. ನಾನು ನನ್ನ ಇಚ್ಛೆಯಿಂದ ಮತಾಂತರಗೊಳ್ಳುತ್ತೇನೆಂದರೆ ನನ್ನ ರಕ್ತ ಸಂಬಂಧಿಗಳು ಕೂಡ ಅದಕ್ಕೆ ಒಪ್ಪಿಗೆ ಸೂಚಿಸಬೇಕು ಅನ್ನುವುದು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ ಅವರು, ಇದು ಬಿಜೆಪಿ ಸರ್ಕಾರದ ದಲಿತ ವಿರೋಧಿ ನೀತಿಗಳ ಭಾಗ ಮತ್ತು ಅಸ್ಪೃಶ್ಯತೆಯನ್ನು ನಿರಂತರವಾಗಿ ಪೋಷಿಸಿಕೊಂಡು ಹೋಗುವ ಮನುವಾದಿ ಆರ್.ಎಸ್.ಎಸ್ ನ ಕುತಂತ್ರ ಎಂದು ಅವರು ಆರೋಪಿಸಿದ್ದಾರೆ.

ಬಲವಂತದ ಮತಾಂತರ ನಡೆಯುತ್ತಿದೆ ಎಂದು ಹೇಳಲು ಸರ್ಕಾರದ ಬಳಿ ಏನು ಅಂಕಿ ಅಂಶಗಳಿವೆ? ಆ ಕುರಿತು ಈವರೆಗೆ ಎಷ್ಟು ಪ್ರಕರಣಗಳು ದಾಖಲಾಗಿವೆ? ಯಾವುದಾದರೂ ಕೋರ್ಟ್ ಈ ವಿಚಾರವಾಗಿ ಎಲ್ಲಿಯಾದರೂ ತೀರ್ಪು ನೀಡಿದೆಯೇ? ಇದ್ದರೆ ಸರ್ಕಾರ ಅದನ್ನು ಜನರ ಮುಂದೆ ಇಡಲಿ. ಕೇವಲ ಬಲವಂತದ ಮತಾಂತರ ನಡೆಯುತ್ತಿದೆ ಎಂದು ಗಾಳಿಯಲ್ಲಿ ಗುಂಡು ಹಾರಿಸಿದಂತೆ ಆರೋಪ ಮಾಡುತ್ತಿರುವುದೇ ಇವರ ಈ ವಾದ ಸುಳ್ಳಿನ ಕಂತೆ ಎಂದು ಹೇಳುತ್ತದೆ ಎಂದು ಭಾಸ್ಕರ್ ಪ್ರಸಾದ್ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷ ಈಗ ವೀರಾವೇಶದಿಂದ ಮಾತನಾಡಿ ಕಾಯ್ದೆಯ ಪ್ರತಿಗಳನ್ನು ಸದನದಲ್ಲಿ ಹರಿದು ಹಾಕಿ ಆಕ್ರೋಶ ಹೊರಹಾಕುವ ನಾಟಕವಾಡುತ್ತಿದೆ. ಆದರೆ ಈ ಕಾಯ್ದೆಯ ಹುಟ್ಟಿಗೆ ಕಾಂಗ್ರೆಸ್ಸೇ ಕಾರಣ. 2013ರಲ್ಲಿ ಕಾಂಗ್ರೆಸ್ ಸರ್ಕಾರವೇ ಈ ಒಂದು ಕಾಯ್ದೆಗೆ ಅಡಿಗಲ್ಲು ಹಾಕಿದ್ದು. ದಲಿತರಿಗೆ ಹಿಂಭಾಗಲಿನಿಂದ ವಂಚಿಸುವ, ಬೆನ್ನಿಗೆ ಚೂರಿ ಹಾಕುವ ಕಾಂಗ್ರೆಸ್ ಇದಕ್ಕೆ ಮೂಲ ಕಾರಣ ಎಂದು ಕಾಂಗ್ರೆಸ್ ವಿರುದ್ಧ ಎಸ್ಡಿಪಿಐ ರಾಜ್ಯ ಪ್ರಾಧಾನ ಕಾರ್ಯದರ್ಶಿ ಆಕ್ರೋಶ ಹೊರ ಹಾಕಿದರು.

ಸಂವಿಧಾನದ ಮೂಲಭೂತ ಹಕ್ಕುಗಳ ವಿರುದ್ಧವಾದ ಈ ಕಾಯ್ದೆ ಮುಂದಿನ ದಿನಗಳಲ್ಲಿ ಕೋರ್ಟುಗಳಲ್ಲಿ ಮುಗ್ಗರಿಸಲಿದೆ ಎಂದು ಬಿಜೆಪಿಗೂ ಸಹ ಗೊತ್ತಿದೆ. ಆದರೆ ಎಲ್ಲ ರಂಗಗಳಲ್ಲೂ ಸೋತಿರುವ ಈ ಕೋಮುವಾದಿ, ಭ್ರಷ್ಟ ಬಿಜೆಪಿಯ ಬೊಮ್ಮಾಯಿ ಸರ್ಕಾರ ಹೇಗಾದರೂ ಮಾಡಿ ಚುನಾವಣೆ ಸಂದರ್ಭದಲ್ಲಿ ಹಿಂದುತ್ವದ ಹೆಸರಿನಲ್ಲಿ ಮತಗಳನ್ನು ಸೆಳೆಯುವ ಉದ್ದೇಶದಿಂದ ಈ ಒಂದು ಕುತಂತ್ರದ ಕಾಯ್ದೆಯನ್ನು ಸಂವಿಧಾನಬಾಹಿರವಾಗಿ ಜಾರಿಗೆ ತರುತ್ತಿದೆ ಎಂದು ಭಾಸ್ಕರ್ ಪ್ರಸಾದ್ ಹೇಳಿದರು.

Join Whatsapp
Exit mobile version