ಬಳ್ಳಾರಿ: ಪರೀಕ್ಷಾ ಶುಲ್ಕವನ್ನು ಕಡಿಮೆಗೊಳಿಸಿ, ಶುಲ್ಕ ಕಟ್ಟುವ ಸಮಯ ವಿಸ್ತರಿಸಲು ಅಗ್ರಹಿಸಿ ಕ್ಯಾಂಪಸ್ ಫ್ರಂಟ್ ಬಳ್ಳಾರಿ ಜಿಲ್ಲೆಯ ವತಿಯಿಂದ ಬಳ್ಳಾರಿ ಯೂನಿವರ್ಸಿಟಿಗೆ ಶುಕ್ರವಾರ ಮಾರ್ಚ್ ನಡೆಸಲಾಯಿತು.
ಕ್ಯಾಂಪಸ್ ಫ್ರಂಟ್ ರಾಜ್ಯ ಸಮಿತಿ ಸದಸ್ಯ ಚಾಂದ್ ಸಲ್ಮಾನ್ ಮಾತನಾಡಿ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಎಲ್ಲ ವಲಯಗಳಲ್ಲಿ ಬೆಲೆಯೇರಿಕೆಯಾಗಿದ್ದು, ಜನರು ತತ್ತರಿಸಿ ಹೋಗಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರ ಮತ್ತು ಬಳ್ಳಾರಿ ವಿಶ್ವವಿದ್ಯಾಲಯದಿಂದ ಪರೀಕ್ಷಾ ಶುಲ್ಕ ಹೆಚ್ಚಳ ಮಾಡಿ ವಿದ್ಯಾರ್ಥಿಗಳಿಂದ ಹಣ ವಸೂಲಿ ಮಾಡಲು ಹೊರಟಿದ್ದು ಸರಿಯಲ್ಲ. ಪರೀಕ್ಷೆ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಲ್ಲಿ ಗೊಂದಲ ಸೃಷ್ಟಿಸಿ ಬೀದಿಗೆ ತಂದು ನಿಲ್ಲಿಸಿದೆ, ವಿದ್ಯಾರ್ಥಿಗಳಿಂದ ಇಷ್ಟು ವಿರೋಧ ವ್ಯಕ್ತವಾದರೂ ಕುಲಪತಿಗಳು ಪರೀಕ್ಷಾ ಶುಲ್ಕ ಕಡಿಮೆ ಮಾಡುವುದಿಲ್ಲ ಎಂದು ಹೇಳುತ್ತಿದ್ದು ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಆರೋಪಿಸಿದರು.
ಪರೀಕ್ಷೆ ಶುಲ್ಕ ಕಟ್ಟುವ ಸಮಯವನ್ನು ವಿಸ್ತರಿಸಬೇಕು ಹಾಗೂ ಪರೀಕ್ಷಾ ಶುಲ್ಕವನ್ನು ಕಡಿಮೆ ಮಾಡಬೇಕು. ಒಂದು ವೇಳೆ ವಿಶ್ವವಿದ್ಯಾಲಯದ ಈ ಸಮಸ್ಯೆಯನ್ನು ಬಗೆಹರಿಸದೆ ಹೋದರೆ ಇನ್ನುಮುಂದೆ ಬಳ್ಳಾರಿ ವಿಶ್ವವಿದ್ಯಾಲಯದ ಅಧೀನದಲ್ಲಿ ಬರುವ ಎಲ್ಲ ಕಾಲೇಜುಗಳ ವಿದ್ಯಾರ್ಥಿಗಳನ್ನು ಸಂಘಟಿಸಿ ದೊಡ್ಡ ಪ್ರಮಾಣದಲ್ಲಿ ವಿಶ್ವವಿದ್ಯಾಲಯದ ಮುಂದೆ ಮತ್ತೆ ಪ್ರತಿಭಟಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬಳ್ಳಾರಿ ಜಿಲ್ಲಾಧ್ಯಕ್ಷ ಸುಹೈಲ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾ ಕಾರ್ಯದರ್ಶಿ ಹಬೀಬ್, ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.