Home ರಾಷ್ಟ್ರೀಯ ಕೆಲ ದೃಶ್ಯಗಳಿಗೆ ಕತ್ತರಿ ಹಾಕಿದರೆ ‘ಎಮರ್ಜೆನ್ಸಿ’ಗೆ ಪ್ರಮಾಣಪತ್ರ: ಸಿಬಿಎಫ್’ಸಿ

ಕೆಲ ದೃಶ್ಯಗಳಿಗೆ ಕತ್ತರಿ ಹಾಕಿದರೆ ‘ಎಮರ್ಜೆನ್ಸಿ’ಗೆ ಪ್ರಮಾಣಪತ್ರ: ಸಿಬಿಎಫ್’ಸಿ

ಮುಂಬೈ: ಕಂಗನಾ ರನೌತ್ ನಟನೆಯ ‘ಎಮರ್ಜೆನ್ಸಿ’ ಸಿನಿಮಾದ ಕೆಲವು ನಿರ್ದಿಷ್ಟ ದೃಶ್ಯಗಳಿಗೆ ಕತ್ತರಿ ಹಾಕಿದರೆ ಸಿನಿಮಾಕ್ಕೆ ಪ್ರಮಾಣಪತ್ರ ನೀಡಲಾಗುವುದು ಎಂದು ಬಾಂಬೆ ಹೈಕೋರ್ಟ್ ಗೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ(ಸಿಬಿಎಫ್ ಸಿ) ಗುರುವಾರ ತಿಳಿಸಿದೆ.


ಕಾನೂನು ಮತ್ತು ಸುವ್ಯವಸ್ಥೆಗೆ ತೊಂದರೆ ಆಗಬಹುದು ಎಂಬ ಕಾರಣ ನೀಡಿ ಪ್ರಮಾಣಪತ್ರ ನೀಡಲು ಹಿಂದೇಟು ಹಾಕಿದ ಮಂಡಳಿಯ ವಿರುದ್ಧ ಜೀ ಎಂಟರ್ ಟೇನ್ಮೆಂಟ್ ಎಂಟರ್ಪ್ರೈಸಸ್ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿತ್ತು.


ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿ ಕಂಗನಾ ರನೌತ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಚಿತ್ರದ ಸಹ–ನಿರ್ಮಾಪಕಿಯೂ ಆಗಿದ್ದಾರೆ. ಸಿನಿಮಾ ಬಿಡುಗಡೆಯನ್ನು ವಿಳಂಬಗೊಳಿಸುವ ಉದ್ದೇಶದಿಂದ, ಮಂಡಳಿಯು ಪ್ರಮಾಣಪತ್ರ ನೀಡುತ್ತಿಲ್ಲ ಎಂದು ಅವರು ಈಚೆಗೆ ದೂರಿದ್ದರು.


ಚಿತ್ರತಂಡಕ್ಕೆ ಸಿಹಿ ಸುದ್ದಿ ತಂದಿದ್ದೀರಾ? ಎಂದು ಇಂದಿನ ವಿಚಾರಣೆ ವೇಳೆ ಪೀಠವು ಸಿಬಿಎಫ್ಸಿಯನ್ನು ಕೇಳಿದೆ.


‘ಈ ಬಗ್ಗೆ ಸೆನ್ಸಾರ್ ಮಂಡಳಿಯ ಪುನರ್ ಪರಿಶೀಲನಾ ಸಮಿತಿ ನಿರ್ಧಾರ ತೆಗೆದುಕೊಂಡಿದೆ’ ಎಂದು ಸಿಬಿಎಫ್’ಸಿ ಪರ ಹಾಜರಿದ್ದ ಹಿರಿಯ ವಕೀಲ ಅಭಿನವ್ ಚಂದ್ರಚೂಡ್ ತಿಳಿಸಿದರು.
‘ಸಿನಿಮಾದ ಕೆಲವು ನಿರ್ದಿಷ್ಟ ದೃಶ್ಯಗಳಿಗೆ ಕತ್ತರಿ ಹಾಕಿದರೆ ಸಿನಿಮಾಕ್ಕೆ ಪ್ರಮಾಣಪತ್ರ ನೀಡಬಹುದು ಎಂದು ಪುನರ್ ಪರಿಶೀಲನಾ ಸಮಿತಿ ಸಲಹೆ ನೀಡಿದೆ’ ಎಂದು ತಿಳಿಸಿದರು.

Join Whatsapp
Exit mobile version