ನವದೆಹಲಿ: ಗಾಝಾದಲ್ಲಿರುವ ನೆರವಿನ ಗುಂಪುಗಳಿಗೆ ಸಂಪರ್ಕ ವ್ಯವಸ್ಥೆ ನೀಡುವುದಕ್ಕೆ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಮುಂದಾಗಿದ್ದಾರೆ. ಅಂತಾರಾಷ್ಟ್ರೀಯ ನೆರವು ಸಂಸ್ಥೆಗಳಿಗೆ ತಮ್ಮ ಉಪಗ್ರಹ ಆಧಾರಿತ ಸಂವಹನ ವ್ಯವಸ್ಥೆಯನ್ನು ಸ್ಟಾರ್ ಲಿಂಕ್ ನೀಡಲಿದೆ ಎಂದು ಟೆಸ್ಲಾ ಸಿಇಒ ಎಲಾನ್ ಮಸ್ಕ್ ಹೇಳಿದ್ದಾರೆ.
2.2 ಮಿಲಿಯನ್ ಜನಸಂಖ್ಯೆಯ ಪ್ರದೇಶವೊಂದಕ್ಕೆ ಎಲ್ಲಾ ರೀತಿಯ ಸಂವಹನ ವ್ಯವಸ್ಥೆಯನ್ನು ಸಂಪೂರ್ಣ ಕಡಿತಗೊಳಿಸಿರುವುದು ಒಪ್ಪಲು ಸಾಧ್ಯವಿಲ್ಲ ಎಂದು ಅಮೇರಿಕಾದ ಪ್ರತಿನಿಧಿ ಅಲೆಕ್ಸಾಂಡ್ರಿಯಾ ಒಕಾಸಿಯೊ-ಕಾರ್ಟೆಜ್ ಹೇಳಿದ್ದರು. ಪತ್ರಕರ್ತರು, ವೈದ್ಯಕೀಯ ವೃತ್ತಿಪರರು, ಮಾನವೀಯ ಪ್ರಯತ್ನಗಳಲ್ಲಿ ತೊಡಗಿರುವವರು ಮತ್ತು ಮುಗ್ಧರು ಎಲ್ಲರೂ ಅಪಾಯದಲ್ಲಿದ್ದಾರೆ ಎಂದು ಗಾಝಾ ಪರಿಸ್ಥಿತಿಯ ಕುರಿತು ಒಕಾಸಿಯೊ-ಕಾರ್ಟೆಜ್ ತಮ್ಮ ಪೋಸ್ಟ್ನಲ್ಲಿ ಹೇಳಿದ್ದರು. ಯುಎಸ್ ಐತಿಹಾಸಿಕವಾಗಿ ಈ ರೀತಿಯ ನಡೆಗಳನ್ನು ಖಂಡಿಸಿದೆ ಎಂದೂ ಅವರು ಹೇಳಿದ್ದರು. ಈ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಮಸ್ಕ್, ‘ಸ್ಟಾರ್ಲಿಂಕ್ ಗಾಜಾದಲ್ಲಿ ಅಂತಾರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ಸಹಾಯ ಸಂಸ್ಥೆಗಳಿಗೆ ಸಂವಹನ ಸಂಪರ್ಕವನ್ನು ಕಲ್ಪಿಸಲಿದೆ ಎಂದು ಹೇಳಿಕೆ ನೀಡಿದ್ದಾರೆ.
ಇಸ್ರೇಲಿ ಬಾಂಬ್ ದಾಳಿಗಳಿಂದಾಗಿ ಫೋನ್ ಮತ್ತು ಇಂಟರ್ನೆಟ್ ಸೇವೆಗಳು ಕುಸಿದಿದೆ. ಈ ಬಳಿಕ ಅವರು ಭೂಸೇನೆ ಕಾರ್ಯಾಚರಣೆಯನ್ನು ತೀವ್ರಗೊಳಿಸಿದಾಗ ಗಾಝಾ ಪಟ್ಟಿಯಲ್ಲಿರುವ ತಮ್ಮ ತಂಡಗಳೊಂದಿಗೆ ಸಂವಹನ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಸಹಾಯ ಗುಂಪುಗಳು ಹೇಳಿತ್ತು.