Home ಕರಾವಳಿ ಮಳೆ ರಜೆ ಸರಿದೂಗಿಸಲು ಶನಿವಾರ ಪೂರ್ಣ ದಿನ ತರಗತಿ ನಡೆಸುವಂತೆ ಶಿಕ್ಷಣ ಇಲಾಖೆಯಿಂದ ಸೂಚನೆ

ಮಳೆ ರಜೆ ಸರಿದೂಗಿಸಲು ಶನಿವಾರ ಪೂರ್ಣ ದಿನ ತರಗತಿ ನಡೆಸುವಂತೆ ಶಿಕ್ಷಣ ಇಲಾಖೆಯಿಂದ ಸೂಚನೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯ ಕಾರಣಕ್ಕೆ ಕಳೆದ ಕೆಲವು ದಿನಗಳಿಂದ ಶಾಲಾಕಾಲೇಜುಗಳಿಗೆ ರಜೆ ನೀಡಿದ್ದರಿಂದ  ವಿದ್ಯಾರ್ಥಿಗಳ ಓದಿಗೆ ಹಿನ್ನಡೆಯಾಗಿದ್ದು, ಇದೀಗ, ರಜೆಗಳನ್ನು ಸರಿದೂಗಿಸಲು ಮುಂದಿನ ಆರು ವಾರಗಳ ಕಾಲ ಶನಿವಾರ ಪೂರ್ಣ ದಿನ ತರಗತಿಗಳನ್ನು ನಡೆಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಮೌಖಿಕ ಸೂಚನೆ ನೀಡಿದೆ.

“ಮಳೆ ಹಿನ್ನೆಲೆಯಿಂದಾಗಿ ಆಯಾಯ ಪ್ರದೇಶದ ಪರಿಸ್ಥಿತಿಯನ್ನು ಅವಲೋಕಿಸಿ ಶಾಲೆ ರಜೆ ಘೋಷಿಸಲಾಗುತ್ತದೆ. ಸದ್ಯಕ್ಕೆ ಮುಂಗಾರು ಮಳೆಯನ್ನು ಎದುರಿಸಲು ಜಿಲ್ಲಾಡಳಿತ ಎಲ್ಲ ರೀತಿಯಲ್ಲಿ ಸನ್ನದ್ಧವಾಗಿದೆ. ಇನ್ನು ಮುಂದೆ ಶಾಲೆ ಮತ್ತು ಕಾಲೇಜುಗಳಿಗೆ ರಜೆ ಘೋಷಿಸುವ ನಿರ್ಧಾರವನ್ನು ಸ್ಥಳೀಯ ಅಧಿಕಾರಿಗಳಿಗೆ ಬಿಡಲಾಗುತ್ತದೆ. ಕೆಲವು ಸಂದರ್ಭದಲ್ಲಿ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಬೇಕೆ? ಬೇಡವೇ? ಎಂದು ನಿರ್ಧರಿಸಬಹುದು. ಕಳೆದುಹೋದ ಅಧ್ಯಯನದ ಸಮಯವನ್ನು ಸರಿದೂಗಿಸಲು ಶಾಲೆಗಳು ಆರು ವಾರ ಶನಿವಾರದಂದು ಪೂರ್ಣ ದಿನದ ತರಗತಿಗಳನ್ನು ನಡೆಸುತ್ತವೆ” ಎಂದು ಜಿಲ್ಲಾಧಿಕಾರಿ ಕೆ.ವಿ ರಾಜೇಂದ್ರ ಹೇಳಿದ್ದಾರೆ.

“ಮಳೆ ರಜೆಯನ್ನು ವಿಸ್ತರಿಸಿದರೆ, ವಿದ್ಯಾರ್ಥಿಗಳ ಅಧ್ಯಯನಕ್ಕೆ ತೊಂದರೆಯಾಗದಂತೆ ಆನ್ಲೈನ್ ತರಗತಿ ನಡೆಸಲು ಕಾಲೇಜುಗಳಿಗೆ ತಿಳಿಸಲಾಗಿದೆ” ಎಂದು ಮಂಗಳೂರು ವಿವಿ ಉಪಕುಲಪತಿ ಪಿ ಎಸ್ ಯಡಪಡಿತ್ತಾಯ ತಿಳಿಸಿದ್ದಾರೆ.

“ಇತರ ಶೈಕ್ಷಣಿಕ ವರ್ಷಗಳಿಗೆ ಹೋಲಿಸಿದರೆ ಪ್ರಸ್ತುತ ಶೈಕ್ಷಣಿಕ ವರ್ಷವು 15 ದಿನಗಳ ಮುಂಚಿತವಾಗಿ ಪ್ರಾರಂಭವಾಗಿದೆ. ಸಾಮಾನ್ಯವಾಗಿ ಶಾಲೆಗಳು ಜೂನ್ 1ರಂದು ಪ್ರಾರಂಭವಾಗುತ್ತವೆ. ಆದರೆ, ಈ ವರ್ಷ ಮೇ ಎರಡನೇ ವಾರದಲ್ಲಿ ಪ್ರಾರಂಭವಾಗಿವೆ. ಆದ್ದರಿಂದ, ಒಂದು ವಾರ ರಜೆ ಕೊಟ್ಟಿರುವುದು ತರಗತಿಯ ಮೇಲೆ ಯಾವುದೇ ದೊಡ್ಡ ಮಟ್ಟದ ಪರಿಣಾಮ ಬೀರುವುದಿಲ್ಲ. ಆದರೂ ಕಳೆದುಹೋದ ಅಧ್ಯಯನ ಸಮಯವನ್ನು ಸರಿದೂಗಿಸಲು ವಾರಾಂತ್ಯದಲ್ಲಿ ವ್ಯವಸ್ಥೆ ಮಾಡಲು ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ (ಡಿಪಿಐ) ಶಾಲೆಗಳಿಗೆ ಮೌಖಿಕ ಸೂಚನೆ ನೀಡಿದೆ” ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Join Whatsapp
Exit mobile version