Home ಅಂಕಣಗಳು ಸಂಪಾದಕಿ ಗೌರಿಗೊಂದು ಒಳ್ಳೆಯ ಚೇರ್ ಇರಲಿಲ್ಲ

ಸಂಪಾದಕಿ ಗೌರಿಗೊಂದು ಒಳ್ಳೆಯ ಚೇರ್ ಇರಲಿಲ್ಲ

ಗೌರಿಯವರ ದುರಂತ ಅಂತ್ಯವು ವಿಶ್ವದ ಹಲವು ದೇಶಗಳ ಜನತೆ ಕರ್ನಾಟಕ ದತ್ತ ನೋಡುವಂತೆ ಮಾಡಿತ್ತು. ಬೇಕಾದಷ್ಟು ಚರ್ಚೆಗಳಾದವು. ಗಣ್ಯರು ಪ್ರತಿಕ್ರಿಯಿಸಿದರು. ಐ ಆಮ್ ಆನ್ ಫಾಸ್ಟ್ ಟ್ರಾಕ್' ಎನ್ನುತ್ತಿದ್ದ ಗೌರಿ, ಸದಾ ಧಾವಂತ, ಗಡಿಬಿಡಿಯಲ್ಲೇ ಇರುವಂತೆ ಭಾಸವಾಗುತ್ತಿದ್ದ ಗೌರಿಯ ನಿರ್ಗಮನ ಒಂದು ರೀತಿಯ ತುರ್ತು ನಿರ್ಗಮನದಂತೆ ಭಾಸವಾಗುತ್ತದೆ. ಬ್ರಾಹ್ಮಣಶಾಹಿ, ಕೋಮುವಾದಿ ದುಷ್ಟರು ಗೌರಿಯ ನಿರ್ಗಮನ ಬಯಸಿದ್ದರು. ಹೀಗೆ ಸಿಡಿಲೆರಗಿದಂತೆ ಗೌರಿಯ ನಿರ್ಗಮನ ಸಂಭವಿಸಿದ್ದು ಒಂದು ಕಡೆಯಾದರೆ, ಕನ್ನಡ ಪತ್ರಿಕೋದ್ಯಮಕ್ಕೆ ಗೌರಿಯ ಆಗಮನವೂ ಬಹಳ ನಿರುತ್ಸಾಹದ ಸನ್ನಿವೇಶದಲ್ಲಿ ಶುರುವಾಗಿತ್ತು ಎನ್ನಬಹುದು. ಎರಡು ಸಾವಿರದ ಇಸವಿ ಜನವರಿಯಲ್ಲಿ ಪಿ. ಲಂಕೇಶರು ತೀರಿಕೊಂಡ ನಂತರ ನಟರಾಜ್ ಹುಳಿಯಾರ್ ರವರು ಇಂತಿ ನಮಸ್ಕಾರಗಳು’ ಎಂಬ ಅದ್ಭುತ ಸಂಚಿಕೆಯೊಂದನ್ನು ರೂಪಿಸಿದ್ದರು.


ಪಿ. ಲಂಕೇಶರು ತಮ್ಮ ಪತ್ರಿಕೆಯ ಸಂಪಾದಕ ಉತ್ತರಾಧಿಕಾರಿ ಯಾರೆಂಬುದನ್ನು ಎಲ್ಲೂ ಹೇಳಿರಲಿಲ್ಲ. ಓದುಗರಿಗೆ ಈ ತರಹದ್ದೊಂದು ಪತ್ರಿಕೆಯ ಅಗತ್ಯವಿದ್ದರೆ ಅವರೇ ಉಳಿಸಿಕೊಳ್ಳುತ್ತಾರೆ, ಮುನ್ನಡೆಸುವವರು ಯಾರೋ ಹುಟ್ಟಿಕೊ ಳ್ಳುತ್ತಾರೆಂಬ ಯೋಚನೆ ಅವರಿಗಿತ್ತೇನೋ. ಹೀಗೆ ಭಾವಿಸಲೂ ಒಂದು ಕಾರಣವಿದೆ.

ಲಂಕೇಶರು ತಮ್ಮ ಪತ್ರಿಕೆಯು ರಭಸದ ದಿನಗಳಲ್ಲಿದ್ದಾಗ ಒಮ್ಮೆ ಆತ್ಮರಕ್ಷಣೆಗೆಂದು ರಿವಾಲ್ವರ್ ಖರೀದಿಸಿ ಇಟ್ಟುಕೊಂಡಿದ್ದು, ಕೆಲ ದಿನಗಳ ನಂತರ ತಾವು ಪಡೆದಿದ್ದ ಲೈಸೆನ್ಸ್ ಹಿಂದಿರುಗಿಸಿ ಗನ್ ಸಹ ಬೇಡವೆಂದಿದ್ದರು. ಅದರ ಬಗ್ಗೆ ಒಮ್ಮೆ ಟೀಕೆ-ಟಿಪ್ಪಣೆಯ ಸಂಪಾದಕೀಯದಲ್ಲಿ ಬರೆಯುತ್ತಾ,
‘ ಈ ಸಮಾಜಕ್ಕೆ ನನ್ನಂತಹವರ ಅಗತ್ಯವಿದ್ದರೆ ಜನರೇ ನನ್ನನ್ನು ಉಳಿಸಿಕೊಳ್ಳುತ್ತಾರೆ. ಗನ್ ಮೂಲಕ ನನ್ನನ್ನು ರಕ್ಷಿಸಿಕೊಳ್ಳುವ ಅಗತ್ಯವಿಲ್ಲ” ಎಂದು ಬರೆದಿದ್ದರು.


ಅದೇ ತರ್ಕ ವಿಸ್ತರಿಸಿದರೆ ಪತ್ರಿಕೆ ಬೇಕೆನಿಸಿದರೆ ಅದಕ್ಕೊಂದು ಸಂಪಾದಕರು ಸಿಗಲಾರರೆ. ಅಂತಹದನ್ನು ಕಾಲವೇ ನಿರ್ಧರಿಸಲಿಸಲಿ ಎನ್ನುವ ತೀರ್ಮಾನ ಬಹುಶಃ ಲಂಕೇಶರಿಗಿತ್ತೇನೋ. ಹಾಗಾಗಿ ಅವರು ತಮ್ಮ ಕುಟುಂಬದಲ್ಲೇ ಇಬ್ಬರು ಪತ್ರಕರ್ತರಿದ್ದಾಗಲೂ ಅವರ ಹೆಸರನ್ನಾಗಲಿ ಅಥವಾ ತಮ್ಮ ಪತ್ರಿಕಾ ತಂಡದವರ ಹೆಸರನ್ನಾಗಲಿ ಮುಂದಿನ ಸಂಪಾದಕರೆಂದು ಬಿಂಬಿಸದೆ ತಣ್ಣಗೆ ನಿರ್ಗಮಿಸಿದ್ದರು. ಲಂಕೇಶ್ ಪತ್ರಿಕೆಯು ತನ್ನ ವೈಭವದ ದಿನಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಪ್ರಸಾರ ಹೊಂದಿತ್ತು. ಲಂಕೇಶರು ವಿರಮಿಸುವಾಗ ಪ್ರಸಾರ ಮೂವತ್ತು ಸಾವಿರದಷ್ಟಿದ್ದು, ಅವರದೊಂದು ಗೌರವದ ವಿದಾಯ,
Honourable Exit…


ಲಂಕೇಶರ ನಿರ್ಗಮನವು ಕನಸುಗಳ ಸ್ಥಳದಲ್ಲಿ ವಿಷಾದವು ಆವರಿಸಿಕೊಂಡಂತಹ ಭಾವನೆ ಸೃಷ್ಟಿಸಿತ್ತು.
ಹೊಸ ಕನಸುಗಳನ್ನು ನೀಡಬಲ್ಲ ಕ್ಯಾಪ್ಟನ್ ಯಾರೆಂಬ ಸಹಜ ಕುತೂಹಲವು ಕರ್ನಾಟಕದ ಉದ್ದಗಲಕ್ಕೂ ಓದುಗರು ಹಾಗೂ ಪ್ರಗತಿಪರರ ವಲಯದಲ್ಲಿ ಇತ್ತು. ಕುಟುಂಬದವರ ಸಭೆ, ಪತ್ರಿಕಾ ತಂಡದ ಹಿರಿಯ ಬರಹಗಾರರು, ವರದಿಗಾರರ ಜೊತೆಗೆ ಸತತ ಸಮಾಲೋಚನೆಗಳ ನಂತರ ಪಿ. ಲಂಕೇಶರ ಮೊದಲ ಮಗಳು ಇಂಗ್ಲೀಷ್ ಪತ್ರಕರ್ತೆಯಾಗಿದ್ದ ಗೌರಿ ಲಂಕೇಶ್ ಪತ್ರಿಕೆಯ ಸಂಪಾದಕಿ ಎಂತಲೂ, ಲಂಕೇಶರ ಮಗ ಪತ್ರಕರ್ತ ಇಂದ್ರಜಿತ್ ಪತ್ರಿಕೆಯ ಮಾಲೀಕ ಹಾಗೂ ಪ್ರಕಾಶಕರೆಂತಲೂ ನಿರ್ಧಾರವಾಯಿತು.


1998ರಿಂದಲೂ ನಾನು ಲಂಕೇಶ್ ಪತ್ರಿಕಾ ತಂಡದಲ್ಲಿದ್ದೆ. ಇಂದ್ರಜಿತ್ ಸಂಪಾದಕರಾಗಿದ್ದ ‘ಆಲ್ ರೌಂಡರ್’ ಕ್ರೀಡಾ ಪಾಕ್ಷಿಕ ಪತ್ರಿಕೆಗೆ ಹೆಚ್ಚು ಬರೆಯುತ್ತಿದ್ದೆ. ಲಂಕೇಶ್ ಪತ್ರಿಕೆಯ ಹೊಸ ಸಂಪಾದಕರ ಆಯ್ಕೆಯ ವಿಚಾರ ವಿನಿಮಯದ ಒಳ ವಿವರಗಳು ಆಗ ಇನ್ನೂ ಜೂನಿಯರ್ ಪತ್ರಕರ್ತನಾಗಿದ್ದ ನನಗೆ ತಿಳಿದಿರಲಿಲ್ಲ. ಗೌರಿಯವರು ಸಂಪಾದಕರೆಂದು ಗೊತ್ತಾಯಿತು. ಆಲ್ ರೌಂಡರ್ ಕ್ರೀಡಾ ಪಾಕ್ಷಿಕದ ಪ್ರಕಟಣೆ ನಿಲ್ಲಿಸಲಾಯಿತು. ನಾನು ಲಂಕೇಶ್ ಪತ್ರಿಕೆಗೆ ಬರೆಯುವಂತೆ ಗೌರಿ ಹಾಗೂ ಅಜಿತ್ ಸೂಚಿಸಿದರು.

ಗೌರಿಯವರು ಪತ್ರಿಕೆಯ ಎಡಿಟರ್ ಆಗಿ ಆಫೀಸಿಗೆ ಕಾಲಿಟ್ಟಾಗ ಅಲ್ಲಿನ ಒಟ್ಟು ವಾತಾವರಣವು ಅವರ ಬರವಿನ ಬಗ್ಗೆ ನಿರುತ್ಸಾಹದಾಯಕವಾಗಿತ್ತು. ಮುಂದೊಂದು ದಿನ ಗೌರಿಯೇ ನನ್ನ ಬಳಿ ಹೇಳಿಕೊಂಡಂತೆ ಅವರು ಎಡಿಟರ್ ಆಗಿ ಬಂದಾಗ ಲಂಕೇಶರ ಚೇಂಬರ್ ಎದುರಿಗಿದ್ದ 5×8 ಅಡಿ ಅಗಲದ ಪುಟ್ಟ ಸ್ಥಳವನ್ನು ಅವರಿಗೆ ಚೇಂಬರ್ ಆಗಿ ಒದಗಿಸಲಾಗಿತ್ತು. ಅದನ್ನು ಚೇಂಬರ್ ಅನ್ನುವ ಬದಲಾಗಿ ಸಿಂಪಲ್ಲಾಗಿ ವರ್ಕ್ ಸ್ಟೇಷನ್ ಅನ್ನಬಹುದಿತ್ತು.


ಪುಟ್ಟದೊಂದು ಚೇರು-ಟೇಬಲ್ ಹಾಗೂ ಕಂಪ್ಯೂಟರ್ ಇಟ್ಟುಕೊಳ್ಳಲು ಅಲ್ಲಿ ಜಾಗವಿತ್ತು. ಜೊತೆಗೆ ವಿಸಿಟರ್ಸ್ ಬಂದಾಗ ಕುಳಿತುಕೊಳ್ಳಲು ಎರಡು ಪುಟ್ಟ ಚೇರ್ ಗಳನ್ನು ಇಡಲು ಸ್ಥಳಾವಕಾಶವಿತ್ತು. ಗೌರಿಯವರು ಮೊದಲ ದಿನ ಸಂಪಾದಕಿಯಾಗಿ ಪತ್ರಿಕೆ ಆಫೀಸಿಗೆ ಕಾಲಿಟ್ಟಾಗ ನೇರವಾಗಿ ಲಂಕೇಶರ ಚೇಂಬರಿಗೆ ಹೋಗಿ ಬಹಳ ಹೊತ್ತು ಸುಮ್ಮನೆ ಕುಳಿತಿದ್ದರು. ಸ್ವಲ್ಪ ಭಾವುಕ ಜೀವಿಯಾಗಿದ್ದ ಗೌರಿಗೆ ತಮ್ಮೆದುರಿಗಿದ್ದ ಚಾಲೆಂಜ್ ಏನೆಂಬುದರ ಅರಿವಿತ್ತು. ಅವರು ಕಷ್ಟ ಪಡಲು ಸಿದ್ಧರಾಗಿದ್ದರು. ಸ್ವಭಾವತಃ ಸ್ನೇಹಮಯಿಯಾಗಿದ್ದರೂ ತನ್ನ ತಂದೆಯ ಸಂಸ್ಥೆಯೊಳಗಡೆಯೇ ಪರಕೀಯ ಭಾವನೆ ಅನುಭವಿಸುವಂತಿತ್ತು. ಪತ್ರಿಕಾ ತಂಡಕ್ಕೂ ಅವರೊಂದಿಗೆ ಹೆಚ್ಚಿನ ಒಡನಾಟವೇನೂ ಇರಲಿಲ್ಲ.


ಇದೆಲ್ಲದರ ಕೆಟ್ಟ ನಿದರ್ಶನವೆಂಬಂತೆ ಗೌರಿಯವರಿಗೆ ಅವರ ಚೇಂಬರಿನಲ್ಲಿ ಒಂದು ಸಾಧಾರಣ ಸ್ಟೀಲ್ ಚೇರ್ ಇರಿಸಲಾಗಿತ್ತು!
ತನ್ನ ಅಕ್ಕ ಗೌರಿಗೆ ಶುಭಾಶಯ ಹೇಳಲು ಬಂದಿದ್ದ ಕವಿತಾರವರು ಗೌರಿಗಿಟ್ಟಿದ್ದ ಆ ಮಡಚುವ ಆರ್ಡಿನರಿ ಚೇರ್ ನೋಡಿ ಸಿಟ್ಟಿಗೆದ್ದರು.
`ಏಯ್ ಗಿರಿ ಬಾ ಇಲ್ಲಿ’ ಎಂದು ಕರೆದರು. ಆ ಗಿರಿ ಯಾನೆ ಮೂಡಲಗಿರಿಯಪ್ಪ ಎಂಬುವರು ಎರಡು ದಶಕ ಕಾಲ ಲಂಕೇಶರ ಸಹಾಯಕನಾಗಿ ಪತ್ರಿಕೆ ಆಫೀಸಿನಲ್ಲಿದ್ದಾತ. ಆತನಿಗೆ ‘ಇವತ್ತು ಹೊಸ ಸಂಪಾದಕರಾಗಿ ಗೌರಿ ಬರುತ್ತಾರೆ. ಅವರಿಗೆ ಚೇಂಬರಿನಲ್ಲಿ ಒಂದು ಕುರ್ಚಿ ಹಾಕು’

ಎಂದು ಯಾರು ಹೇಳಿದ್ದರೋ ಏನೋ, ಈ ಗಿರಿ ಹೋಗಿ ಆಫೀಸಿನ ಯಾವುದೋ ಮೂಲೆಯಲ್ಲಿದ್ದ ಸಾಧಾರಣ ಸ್ಟೀಲ್ ಚೇರನ್ನು ತಂದಿರಿಸಿದ್ದ.
ಕವಿತಾ,
ಗಿರಿಯನ್ನು ಕರೆದು ರೇಗುತ್ತಾ
`ಗೌರಿ ಇಲ್ಲಿ ಎಡಿಟರ್. ಸರಿಯಾದ ಒಂದು ಚೇರ್ ತಂದಿಡೋಕೆ ಆಗಲ್ವಾ?’
ಎಂದಾಗ ಬೇರೆ ಚೇರ್ ನ ಆಗಮನವಾಯಿತು.
ಜೀವನದ ಕಷ್ಟ ಕಾಲದಲ್ಲಿ ಕಲಿಯುವ ಪಾಠ ಹಾಗೂ ಆಗುವ ಅನುಭವಗಳು ಬಹಳ ಕಾಲ ನೆನಪಿದ್ದು ಕಾಡುತ್ತವೆ ಎನ್ನುವುದು ನಿಜವಿರಬಹುದು. ಏಕೆಂದರೆ ಗೌರಿ ಬಹಳ ಕಾಲ ಆ ಚೇರ್ ಪ್ರಸಂಗವನ್ನು ನೆನಪಿಟ್ಟುಕೊಂಡಿದ್ದರು.
ಗೌರಿಯವರಿಗೆ ಎದುರಾದ ಇನ್ನೊಂದು ಪ್ರಮುಖ ತೊಡಕು ಲಂಕೇಶ್ ಪತ್ರಿಕಾ ತಂಡದ ಹಿರಿಯ ವರದಿಗಾರರದ್ದು. ಪತ್ರಿಕೆಯಲ್ಲಿ ಆಗ ಬಸವರಾಜ್, ರವೀಂದ್ರ ರೇಷ್ಮೆ, ಟಿ.ಕೆ. ತ್ಯಾಗರಾಜ್, ಸದಾಶಿವ ಶೆಣೈ, ಗಂಗಾಧರ ಕುಷ್ಟಗಿ, ಈ ಚಂದ್ರ ತಾಳಿಕಟ್ಟೆ, ಸಿ.ಎಸ್. ದ್ವಾರಕಾನಾಥ್, ವಿವೇಕಾನಂದ ತಾಂಡೇಲ, ಎನ್.ಎಸ್. ಶಂಕರ್ ಮುಂತಾದ ವರದಿಗಾರರು ಇದ್ದರು. ಇವರಲ್ಲಿ ಎನ್.ಎಸ್. ಶಂಕರ್ ಸೃಜನಶೀಲ ಬರಹಗಾರರು ಹಾಗೂ ಚಿತ್ರ ನಿರ್ದೇಶಕರಾಗಿ ಹೆಸರು ಮಾಡಿದ್ದರು. ನಟರಾಜ್ ಹುಳಿಯಾರ್ ಓರ್ವ ಬುದ್ಧಿಜೀವಿಯಾಗಿ ಸಾಹಿತ್ಯ-ಸಾಂಸ್ಕೃತಿಕ ಕ್ಷೇತ್ರದಲ್ಲಿ ಚಿರಪರಿಚಿತರಾಗಿದ್ದರು.

ಇವರಲ್ಲಿ ಕೆಲವರಿಗೆ ಲಂಕೇಶರ ನಂತರ ತಾನು ಪತ್ರಿಕೆಯ ಸಂಪಾದಕನಾಗಬಹುದೆಂಬ ನಿರೀಕ್ಷೆ ಇತ್ತೆಂಬ ಮಾತುಗಳಿವೆ. ನನಗದರ ಬಗ್ಗೆ ಖಚಿತವಾಗಿ ತಿಳಿಯದು. ಆದರೆ ಖಚಿತವಾಗಿ ಹೇಳಬಹುದಾದ ವಿಚಾರವೆಂದರೆ ಬಹುತೇಕರಿಗೆ ಗೌರಿ ಸಂಪಾದಕಿಯಾದ ಬಗ್ಗೆ ಆಕ್ಷೇಪವಿತ್ತು, ಸ್ವಜನಪಕ್ಷಪಾತ (Nepotism) ಎಂಬ ಕಾರಣದಿಂದಾಗಿ, ಕೆಲವರಿಗೆ ಅಸಹನೆಯಾಗಿದ್ದು ಅನನುಭವಿ ಎಡಿಟರ್ ಗೌರಿ ಕೈಕೆಳಗೆ ಕೆಲಸ ಮಾಡಬೇಕಾಗಿ ಬಂತೆಂಬ ಕಾರಣವಿರಬಹುದು.
ವಾಸ್ತವದಲ್ಲಿ ಗೌರಿ ಕನ್ನಡ ಪತ್ರಿಕೋದ್ಯಮದ ಅನನುಭವಿ ಎಡಿಟರ್ ಆಗಿದ್ದರು ನಿಜ. ಅವರೂ ಸಹ ಆತಂಕಗೊಂಡಿದ್ದದ್ದೂ ನಿಜ. ಆದರೆ ಗೌರಿ ಶ್ರಮಜೀವಿಯಾಗಿದ್ದರು. ಆತ್ಮವಿಶ್ವಾಸದಿಂದಿದ್ದರು. ನಿಧಾನಕ್ಕೆ ಒಂದೊಂದೇ ವಿಚಾರಗಳನ್ನು ಕಲಿಯುತ್ತಾ, ಓದುತ್ತಾ, ಬರೆಯುತ್ತಾ ಓರ್ವ ಕಾಂಪಿಟೆಂಟ್ ಎಡಿಟರ್ ಅನಿಸಿಕೊಳ್ಳುವ ಮಟ್ಟಿಗೆ ಹೆಜ್ಜೆ ಹಾಕತೊಡಗಿದರು.
ಆದರೆ ಗೌರಿ ಎಡಿಟರ್ ಆಗಿ ಬಂದಾಗ ಅದನ್ನು ಹೇರಿಕೆ ಎಂದು ಸಕಾರಣವಾಗಿ ಭಾವಿಸಿದ್ದ ಕೆಲ ಹಿರಿಯ ಪತ್ರಕರ್ತರು ಮುಂದಿನ ದಿನಗಳಲ್ಲಿ ಗೌರಿ ಕನ್ನಡ ಬರವಣಿಗೆ ರೂಢಿಸಿಕೊಂಡು ತಮ್ಮ ಸಾಮರ್ಥ್ಯ ಹಾಗೂ ಕಾಳಜಿ ಸಾಬೀತುಪಡಿಸಿದ ಮೇಲೂ ಅವರ ಮೇಲಿನ ಆಕ್ಷೇಪ ಹಾಗೂ ಅಸಹನೆಯನ್ನು ಬಿಡದೆ ಹೋದದ್ದು ಒಂದು ಗಮನಾರ್ಹ ಸಂಗತಿಯಾಗಿದೆ.
ಮಹಿಳೆಯರಿಗೆ ಸಮಾನ ಹಕ್ಕು, ಅವಕಾಶ ಗಳಿರಬೇಕೆಂಬ ನಿಲುವನ್ನು ಪ್ರತಿಪಾದಿಸುವ ಲಂಕೇಶ ಪತ್ರಿಕಾ ತಂಡದೊಳಗೆ ಆ ತಂಡದ ಬದ್ಧತೆ ಪರೀಕ್ಷಿಸುವ ನಿದರ್ಶನವಾಗಿ ಗೌರಿ ಎಂಬ ಮಹಿಳಾ ಎಡಿಟರ್ ಪ್ರವೇಶವಾಗಿತ್ತು.
ಆ ಪರೀಕ್ಷೆಯಲ್ಲಿ ಕೆಲವರು ಫೇಲಾದರು.
ಕೆಲವರು ಬಿಟ್ಟು ಹೋದರು. ಇನ್ನೂ ಕೆಲವರು ಗೌರಿಯ ಬರುವನ್ನು ಸ್ವಾಗತಿಸಿ ಹೊಂದಿಕೊಂಡರು.

Join Whatsapp
Exit mobile version