Home ಟಾಪ್ ಸುದ್ದಿಗಳು ಕೊಲ್ಲಾಪುರದ ಎನ್’ಸಿಪಿ ನಾಯಕ ಹಸನ್ ಮುಶ್ರಿಫ್ ಮನೆ ಮೇಲೆ ಇ.ಡಿ. ದಾಳಿ

ಕೊಲ್ಲಾಪುರದ ಎನ್’ಸಿಪಿ ನಾಯಕ ಹಸನ್ ಮುಶ್ರಿಫ್ ಮನೆ ಮೇಲೆ ಇ.ಡಿ. ದಾಳಿ

ಮುಂಬೈ: ಜಾರಿ ನಿರ್ದೇಶನಾಲಯ- ಇ.ಡಿ. ಅಧಿಕಾರಿಗಳು ಮತ್ತೊಮ್ಮೆ ಎನ್’ಸಿಪಿ ನಾಯಕ ಮಾಜಿ ಮಂತ್ರಿ ಹಸನ್ ಮುಶ್ರಿಫ್ ಅವರ ಕೊಲ್ಹಾಪುರದ ಕಾಗಲ್ ನಲ್ಲಿರುವ ಮನೆಗೆ ದಾಳಿ ನಡೆಸಿದ್ದಾರೆ.
ಕಳೆದ ಒಂದೂವರೆ ತಿಂಗಳಿನಲ್ಲಿ ಎನ್ ಸಿಪಿ ನಾಯಕನ ಮನೆ ಮೇಲೆ ನಡೆಯುತ್ತಿರುವ ಎರಡನೆಯ ದಾಳಿಯಾಗಿದ್ದು ಅದು ರಾಜಕೀಯ ಬಿರುಗಾಳಿಯೆಬ್ಬಿಸಿದೆ. ಎರಡನೆಯ ಬಾರಿ ಇ.ಡಿ.ದಾಳಿಯಿಂದ ಮುಶ್ರಿಫ್’ರಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.


ಶನಿವಾರ ಬೆಳ್ಳಂಬೆಳಿಗ್ಗೆ ನಾಲ್ಕೈದು ಇಡಿ ಅಧಿಕಾರಿಗಳು ಕಾಗಲ್ನ ಹಸನ್ ಮುಶ್ರಿಫ್ ಅವರ ಮನೆಗೆ ದಾಳಿ ಮಾಡಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ. ಮುಂಜಾನೆಯೆ ಬಂದ ಇಡಿ ಅಧಿಕಾರಿಗಳು ಶೋಧ ಕೈಗೊಂಡರು. ಅತಿ ಮುಖ್ಯವಾದ ದಾಖಲೆ ಪತ್ರಗಳನ್ನು ಅವರು ವಶಪಡಿಸಿಕೊಂಡಿದ್ದಾರೆ. ಈ ಆಪರೇಶನ್ ಗೆ ಯಾವುದೇ ಅಡೆ ತಡೆ ಬರಬಾರದು ಎನ್ನುವುದಕ್ಕಾಗಿ ಮನೆಯ ಹೊರಗೆ ಭಾರೀ ಭದ್ರತಾ ಪಡೆಗಳವರನ್ನು ನಿಲ್ಲಿಸಲಾಗಿತ್ತು.


ಮುಶ್ರಿಫ್ ರ ಮನೆಗೆ ಇಡಿ ದಾಳಿ ಏಕೆ?
ಸಂತಾಜಿ ಘೋರ್ಪಡೆ ಸಕ್ಕರೆ ಕಾರ್ಖಾನೆಯ ಹಗರಣಕ್ಕೆ ಸಂಬಂಧಿಸಿದಂತೆ ಮುಶ್ರಿಫ್ ಅವರ ಮನೆಗೆ ಇಡಿ ದಾಳಿ ನಡೆದಿದೆ. ಈ ಹಗರಣದಲ್ಲಿ ಕೊಲ್ಕತ್ತದ ಬೋಗಸ್ ಕಂಪೆನಿಗಳಿಂದ 158 ಕೋಟಿ ರೂಪಾಯಿಗಳು ಈ ಸಕ್ಕರೆ ಕಂಪೆನಿಗೆ ಅಕ್ರಮ ವರ್ಗಾವಣೆ ಆಗಿರುವುದಾಗಿ ಹೇಳಲಾಗಿದೆ. ಇದು ಅಕ್ರಮ ಹಣ ವರ್ಗಾವಣೆಯ ಕಳ್ಳ ಹಣ ಎನ್ನುವುದು ಬಿಜೆಪಿ ನಾಯಕ ಕಿರಿಟ್ ಸೋಮಯ್ಯ ಹೇಳಿಕೆ. ಈ ಪ್ರಕರಣದಲ್ಲಿ ಮುಶ್ರಿಫ್ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸೋಮಯ್ಯ ಒತ್ತಾಯಿಸಿದ್ದಾರೆ. ಆ ಬಳಿಕ ಆದಾಯ ತೆರಿಗೆ ಇಲಾಖೆಯವರು ಮತ್ತು ಜಾರಿ ನಿರ್ದೇಶನಾಲಯದವರು ಮುಶ್ರಿಫ್ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ.


ಹಸನ್ ಮುಶ್ರಿಫ್ ಯಾರು?
ಹಸನ್ ಮುಶ್ರಿಫ್ ಎನ್ ಸಿಪಿ ಪಕ್ಷದ ಹಾಲಿ ಶಾಸಕರು. ಕೊಲ್ಹಾಪುರದ ಕಾಗಲ್ ವಿಧಾನ ಸಭಾ ಕ್ಷೇತ್ರದಿಂದ ಅವರು ಗೆದ್ದಿದ್ದಾರೆ. ಪಶ್ಚಿಮ ಮಹಾರಾಷ್ಟ್ರದಲ್ಲಿ ಎನ್ ಸಿಪಿ ನಾಯಕರಾಗಿ ಮುಶ್ರಿಫ್ ಚಿರಪರಿಚಿತರು. ಕೊಲ್ಹಾಪುರದ ರಾಜಕೀಯದಲ್ಲಿ ಸದಾ ಅವರದೇ ಮೇಲುಗಯ್.
ಹಿಂದಿನ ಸಮ್ಮಿಶ್ರ ಸರಕಾರದಲ್ಲಿ ಹಸನ್ ಮುಶ್ರಿಫ್ ಮಂತ್ರಿಯಾಗಿದ್ದರು. ಕಾರ್ಮಿಕ ಸಚಿವರಾಗಿದ್ದರು. ಮೋದಿ ಅಲೆಯಲ್ಲೂ 2014ರಲ್ಲೂ ಅವರು ಗೆದ್ದಿದ್ದರು. ಅವರಿಗೆ ಬಿಜೆಪಿ ಸೇರಲು ಕರೆ ಇತ್ತು; ಆದರೆ ಅವರದನ್ನು ತಿರಸ್ಕರಿಸಿದ್ದಾರೆ. ಅದಕ್ಕಾಗಿ ಇ.ಡಿ. ದಾಳಿ ಎನ್ನುವವರೂ ಇದ್ದಾರೆ.

Join Whatsapp
Exit mobile version