Home ಟಾಪ್ ಸುದ್ದಿಗಳು ಕಬ್ಬನ್ ಪಾರ್ಕ್‌ನಲ್ಲಿ ಎರಡು ದಿನಗಳ ಮಹಿಳಾ ಕ್ರೀಡಾ ಹಬ್ಬ: ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಚಾಲನೆ

ಕಬ್ಬನ್ ಪಾರ್ಕ್‌ನಲ್ಲಿ ಎರಡು ದಿನಗಳ ಮಹಿಳಾ ಕ್ರೀಡಾ ಹಬ್ಬ: ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಚಾಲನೆ

ಬೆಂಗಳೂರು; ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಮಹಿಳೆಯರಲ್ಲಿ ಕ್ರೀಡಾ ಸ್ಫೂರ್ತಿ ತುಂಬಿ, ಉತ್ಸಾಹವನ್ನು ಹುರಿದುಂಬಿಸಲು ಹಾಗೂ ಕ್ರೀಡಾ ಮನೊಭಾವನೆ ಮೂಡಿಸಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ರಾಜ್ಯಾದ್ಯಂತ ಇಂದಿನಿಂದ ಎರಡು ದಿನಗಳ “ಮಹಿಳಾ ಕ್ರೀಡಾ ಹಬ್ಬ” ಆಯೋಜಿಸಿದ್ದು, ಕಬ್ಬನ್ ಪಾರ್ಕ್ ನಲ್ಲಿ ಕ್ರೀಡಾ ಉತ್ಸವಕ್ಕೆ ರಾಜ್ಯದ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಚಾಲನೆ ನೀಡಿದರು.


ಈ ಕಾರ್ಯಕ್ರಮದಲ್ಲಿ ಮಹಿಳೆಯರಿಗಾಗಿ ಕ್ರೀಡೆಗಳು, ಸಾಹಸ ಕ್ರೀಡೆಗಳು, ಗ್ರಾಮೀಣ ಮತ್ತು ಸಾಂಪ್ರದಾಯಿಕ ಕ್ರೀಡೆಗಳು, ಒಲಿಂಪಿಕ್ ಕ್ರೀಡೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಕಲೆ ಮತ್ತು ಕರಕುಶಲ ಪ್ರದರ್ಶನಗಳ ಜೊತೆ ಮನೋರಂಜನೆ ಮತ್ತು ಮೋಜಿನ ಆಟಗಳು ಸಹ ನಡೆಯುತ್ತಿವೆ. ಕಾರ್ನಿವಲ್ ಮತ್ತು ಆಹಾರದ ಮಳಿಗೆಗಳನ್ನು ಕೂಡ ಕಬ್ಬನ್ ಪಾರ್ಕ್ ನ ಸ್ವಚ್ಛ, ಸುಂದರ ಪರಿಸರದಲ್ಲಿ ತೆರೆಯಲಾಗಿದೆ.
ಹಾಕಿ, ಕಬ್ಬಡಿ, ಆರ್ಚರಿ ಮತ್ತು ಸ್ಕೇಟಿಂಗ್, ಸಾಹಸ ಕ್ರೀಡೆಗಳಲ್ಲಿ ವಾಲ್ ಕ್ಲೈಬಿಂಗ್, ರಾಪಲಿಂಗ್, ಕಯಾಕಿಂಗ್ ಮತ್ತು ರಾಫ್ಟಿಂಗ್, ಸಾಂಪ್ರದಾಯಿಕ ಕ್ರೀಡೆಗಳಲ್ಲಿ ಕುಂಟೆ ಬಿಲ್ಲೆ, ಅಳಿಗುಳಿಮನೆ ಆಟ, ಲಗೋರಿ, ಹಗ್ಗ ಜಗ್ಗಾಟ, ಕಲೆ ಮತ್ತು ಕರಕುಶಲಗಳಲ್ಲಿ ರಂಗೋಲಿ, ಸೆಲ್ಪಿ ತೆಗೆದುಕೊಳ್ಳುವ, ಕ್ಯಾಲಿಗ್ರಫಿ, ಮೆಹಂದಿ ಮತ್ತು ಮಡಿಕೆ ತಯಾರಿಕೆ ಜೊತೆಗೆ ಮೋಜಿನ ಆಟಗಳಲ್ಲಿ ಮ್ಯೂಸಿಕಲ್ ಚೇರ್, ಫಜಲ್‌ಗಳು, ಡಮ್ಸರೇಡ್ಸ್, ಮೆಮೊರಿ ಆಟಗಳು, ಮ್ಯೂಸಿಕಲ್ ಚೇರ್, ಕೆರೆ ದಡ, ಬಕೆಟ್ ಬಾಲ್ ಹೀಗೆ ಹತ್ತು ಹಲವು ಕ್ರೀಡೆಗಳು ಮಹಿಳೆಯರಲ್ಲಿ ಸ್ಪೂರ್ತಿ ತುಂಬುತ್ತಿದೆ.


ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಮಾತನಾಡಿ, ರಾಜ್ಯದಲ್ಲಿ ಅತಿ ಹೆಚ್ಚು ಕ್ರೀಡಾ ಪದಕಗಳನ್ನು ಮಹಿಳೆಯರು ಗೆದ್ದಿದ್ದು, ಅವರನ್ನು ಸಹ ಕ್ರೀಡಾ ಹಬ್ಬಕ್ಕೆ ಸ್ವಾಗತಿಸಲಾಗಿದೆ. ಈ ಮೂಲಕ ಮಹಿಳೆಯರಲ್ಲಿ ಕ್ರೀಡೆ ಬಗ್ಗೆ ಆಸಕ್ತಿ ಕೆರಳಿಸುವ ಉದ್ದೇಶ ಹೊಂದಲಾಗಿದೆ. ಹೆಣ್ಣು ಮಕ್ಕಳಲ್ಲಿ ಹಾಕಿ ಸ್ಟಿಕ್ ಹಿಡಿಯುವುದು ಹೇಗೆ?, ಫುಟ್ಬಾಲ್ ಆಟ ಹೇಗಿರುತ್ತದೆ, ಸಾಹಸ ಕ್ರೀಡೆಗಳ ಸ್ವರೂಪವನ್ನು ತಿಳಿಸಿಕೊಡುವ ಪ್ರಯತ್ನ ಇದಾಗಿದೆ. ಎರಡು ದಿನಗಳ ಕ್ರೀಡಾ ಮಹೋತ್ಸವದಲ್ಲಿ ಮಹಿಳಾ ಸಮುದಾಯ ಭಾಗಿಯಾಗಬೇಕು ಎಂದು ಹೇಳಿದರು.
ಹಿರಿಯ ಐಎಎಸ್ ಅಧಿಕಾರಿಗಳಾದ ಮಣಿವಣ್ಣನ್, ಮುಲ್ಲೈ ಮುಹಿಲನ್, ಶಿಖಾ, ಮಂಜುಳಾ ಮತ್ತಿತರರು ಉಪಸ್ಥಿತರಿದ್ದರು.

Join Whatsapp
Exit mobile version