Home ಟಾಪ್ ಸುದ್ದಿಗಳು ಬೆಂಗಳೂರು ಟ್ರಾಫಿಕ್ ಸಮಸ್ಯೆಗೆ ಇತಿಶ್ರೀ ಹಾಡಲು ಡಿಸಿಎಂ ಸಂಕಲ್ಪ

ಬೆಂಗಳೂರು ಟ್ರಾಫಿಕ್ ಸಮಸ್ಯೆಗೆ ಇತಿಶ್ರೀ ಹಾಡಲು ಡಿಸಿಎಂ ಸಂಕಲ್ಪ

ಬೆಂಗಳೂರು: ಬೆಂಗಳೂರಿನ ಘನತೆಗೆ ಕಪ್ಪುಚುಕ್ಕೆಯಾಗಿರುವ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಂಕಲ್ಪ ಮಾಡಿರುವ ಡಿಸಿಎಂ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರು ಇಂದು ನಗರದ ಪ್ರಮುಖ ಸಂಚಾರಿ ದಟ್ಟಣೆ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಿಡಿಎ ಕೇಂದ್ರ ಕಚೇರಿಯಲ್ಲಿ ಮಂಗಳವಾರ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ಬಿಡಿಎ ಅಧ್ಯಕ್ಷ ರಾಕೇಶ್ ಸಿಂಗ್, ಕಮಿಷನರ್ ಕುಮಾರ್ ನಾಯಕ್, ಬಿಬಿಎಂಪಿ ಕಮಿಷನರ್ ತುಷಾರ್ ಗಿರೀನಾಥ್, ಡಿಸಿಎಂ ಆಪ್ತ ಕಾರ್ಯದರ್ಶಿ ರಾಜೇಂದ್ರ ಪ್ರಸಾದ್ ಹಾಗೂ ಮತ್ತಿತರ ಅಧಿಕಾರಿಗಳ ಜೊತೆ ಸಭೆ ನಡೆಸಿದರು.

ನಂತರ ಬೆಂಗಳೂರು ಪ್ರದಕ್ಷಣೆ ಹಾಕಿದ ಶಿವಕುಮಾರ್ ಅವರು ಮೊದಲು ಹೆಬ್ಬಾಳ ಜಂಕ್ಷನ್ ಗೆ ಭೇಟಿ ನೀಡಿ ಮೇಲ್ಸೇತುವೆ ನಿರ್ಮಾಣ, ಸುತ್ತಮುತ್ತಲ ಪ್ರದೇಶದ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಈ ಭಾಗದಲ್ಲಿ ಸಂಚಾರ ದಟ್ಟಣೆ ನಿಯಂತ್ರಣ, ರಸ್ತೆ, ಮೇಲ್ಸೇತುವೆ ಅಗಲೀಕರಣ ಹಾಗೂ ಹೆಬ್ಬಾಳ ಕೆರೆಯ ಸೌಂದರ್ಯಕ್ಕೆ ಕೈಗೊಳ್ಳುವ ಕ್ರಮಗಳ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು. ಅಲ್ಲದೆ 2047ರ ವೇಳೆಗೆ ಹೆಚ್ಚಾಗುವ ವಾಹನ ದಟ್ಟಣೆಗೆ ಯಾವ ರೀತಿ ಕ್ರಮ ಕೈಗೊಳ್ಳಬಹುದು ಎಂದು ವಿವರಣೆ ನೀಡಿದರು.

63 ಕಿ.ಮೀ. ಅವಳಿ ಸುರಂಗ ಮಾರ್ಗ ನಿರ್ಮಾಣದ ಬಗ್ಗೆ ಸಲಹೆ ನೀಡಿದರು. ಈ ವಿಚಾರವಾಗಿ ಪ್ರತ್ಯೇಕ ಸಭೆ ಮಾಡೋಣ ಎಂದು ತಿಳಿಸಿದರು.

ಹೆಬ್ಬಾಳದಲ್ಲಿ ಮೆಟ್ರೋ ಸ್ಟೇಷನ್, ಮೆಟ್ರೋ ಲೈನ್ಸ್ ನಿರ್ಮಾಣದ‌ ಬಗ್ಗೆ ನುರಿತ ಇಂಜಿನಿಯರ್ ಗಳಿಂದ ಸ್ಥಳದಲ್ಲಿ ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ಮಹಿಳಾ ಪೌರ ಕಾರ್ಮಿಕರು ನಮಗೆ ಸ್ಥಳೀಯ ಆಧಾರ್ ಹಾಗೂ ಮತದಾರರ ಗುರುತಿನ ಚೀಟಿ ಇಲ್ಲ, ಹೀಗಾಗಿ ಪೌರ ಕಾರ್ಮಿಕ ಗುರುತಿನ ಚೀಟಿಗೆ ಉಚಿತ ಟಿಕೆಟ್ ಪ್ರಯಾಣಕ್ಕೆ ಅವಕಾಶ ಕಲ್ಪಿಸಿ ಎಂದು ಮನವಿ ಮಾಡಿದರು.

ನಂತರ ಹೊರ ವರ್ತುಲ ರಸ್ತೆ, ನಾಗವಾರ ಮೇಲ್ಸೇತುವೆ, ಟೆಲಿಕಾಂ ಲೇಔಟ್ ಗೆ ಭೇಟಿ ಮಾಡಿ ಅಲ್ಲಿ ನಡೆಯುತ್ತಿರುವ ಕೊಳಚೆ ನೀರು ಕಾಲುವೆ ಕಾಮಗಾರಿ ಪರಿಶೀಲನೆ ನಡೆಸಿದರು.

ಮಳೆ ಬಂದಾಗಲೆಲ್ಲಾ ಜಲಾವೃತವಾಗ್ತಿದ್ದ ಹಿನ್ನೆಲೆಯಲ್ಲಿ ಬಿಬಿಎಂಪಿ ರಾಜಕಾಲುವೆ, ತಡೆಗೋಡೆ ಕಾಮಗಾರಿ ಕೈಗೆತ್ತಿಕೊಂಡಿದ್ದು, ಅದರ ಪರಿಶೀಲನೆ ನಡೆಸಲಾಯಿತು.

ನಂತರ ಹೊರ ವರ್ತುಲ ರಸ್ತೆ, ಕಲ್ಯಾಣ ನಗರ, ಹೆಚ್ ಆರ್ ಬಿಆರ್ ಲೇಔಟ್ ಗೆ ಭೇಟಿ ನೀಡಿ ಕೊಳಚೆ ನೀರು ಕಾಲುವೆ ಕಾಮಗಾರಿ ಪರಿಶೀಲನೆ ನಡೆಸಿದರು. ನಂತರ ಕೆ.ಆರ್ ಪುರಂಗೆ ಭೇಟಿ ನೀಡಿ ಬಿಎಂ ಆರ್ ಸಿ ಎಲ್ ನಡೆಸುತ್ತಿರುವ ಮೆಟ್ರೋ ಕಾಮಗಾರಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಕೆ.ಆರ್ ಪುರಂ ಶಾಸಕ ಭೈರತಿ ಬಸವರಾಜು ಅವರು ಟಿನ್ ಫ್ಯಾಕ್ಟರಿ ಬಳಿ ಡಿಸಿಎಂಗೆ ಹೂಗುಚ್ಛ ನೀಡಿ ಸ್ವಾಗತಿಸಿದರು. ಈ ವೇಳೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು “ಸಭೆ ಕರೆದರೆ ಪ್ರತಿಭಟನೆ ಮಾಡಿಕೊಂಡು ಹೋಗ್ತೀಯಾ” ಎಂದು ಛೇಡಿಸಿದರು.

Join Whatsapp
Exit mobile version