Home ಕರಾವಳಿ ದಸರಾ: ಕೋವಿಡ್ ಸೋಂಕು ಹಿನ್ನೆಲೆಯಲ್ಲಿ ಮಾರ್ಗಸೂಚಿಗಳನ್ನು ಪಾಲಿಸಿ ಆಚರಿಸಲು ನಿರ್ಧಾರ

ದಸರಾ: ಕೋವಿಡ್ ಸೋಂಕು ಹಿನ್ನೆಲೆಯಲ್ಲಿ ಮಾರ್ಗಸೂಚಿಗಳನ್ನು ಪಾಲಿಸಿ ಆಚರಿಸಲು ನಿರ್ಧಾರ

ಮಂಗಳೂರು: ಕೋವಿಡ್ ಸೋಂಕು ಹಿನ್ನಲೆಯಲ್ಲಿ ಮುಂಬರುವ ನವರಾತ್ರಿ (ದಸರಾ) ಉತ್ಸವವನ್ನು ಜಿಲ್ಲೆಯ ಕಟೀಲು ದುರ್ಗಾಪರಮೇಶ್ವರಿ, ಕುದ್ರೋಳಿ ಗೋಕರ್ಣನಾಥೇಶ್ವರ ಹಾಗೂ ಮಂಗಳಾದೇವಿ ಸೇರಿದಂತೆ ಇತರೆ ದೇವಸ್ಥಾನಗಳಲ್ಲಿ ಜಿಲ್ಲಾಡಳಿತ ಕಳೆದ ವರ್ಷ ಹೊರಡಿಸಿದ ಮಾರ್ಗಸೂಚಿಗಳಂತೆಯೇ ಈ ಬಾರಿಯೂ ಆಚರಿಸುವುದು ಸೂಕ್ತ ಎಂದು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರಾದ ಎಸ್.ಅಂಗಾರ ಅವರು ಅಭಿಪ್ರಾಯಪಟ್ಟರು.

ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ನವರಾತ್ರಿ ಉತ್ಸವ ಆಚರಣೆ ಸಂಬಂಧ ಜಿಲ್ಲಾ ಧಾರ್ಮಿಕ ಪರಿಷತ್ತಿನ ಸಭೆಯಲ್ಲಿ ಮಾತನಾಡಿದ ಅವರು ಕೋವಿಡ್-19 ಸೋಂಕು ಹಿನ್ನಲೆಯಲ್ಲಿ ಕಳೆದ ಬಾರಿ ನವರಾತ್ರಿ ಉತ್ಸವ (ದಸರಾ) ಆಚರಣೆ ಕುರಿತಂತೆ ಜಿಲ್ಲಾಡಳಿತ ಮಾರ್ಗಸೂಚಿಗಳನ್ನು ಪ್ರಕಟಿಸಿತ್ತು. ಅದರಂತೆ ದೇವಸ್ಥಾನಗಳ ಆಡಳಿತ ಮಂಡಳಿಗಳು, ಪ್ರಮುಖವಾಗಿ ಭಕ್ತರು ಸಹಕರಿಸಿದರು, ಈ ಬಾರಿ ಕೋವಿಡ್ 3ನೇ ಅಲೆ ಎದುರಾದಲ್ಲಿ ಮತ್ತೊಮ್ಮೆ ಜಿಲ್ಲೆಯಲ್ಲಿ ಲಾಕ್ ಡೌನ್ ಮಾಡುವ ಸಂದರ್ಭವನ್ನು ತಳ್ಳಿಹಾಕುವಂತಿಲ್ಲ. ಸಮಸ್ಯೆ ಬಿಗಡಾಯಿಸದಂತೆ ನಮಗೆ ನಾವೇ ತಡೆ ಹಾಕಿಕೊಳ್ಳಬೇಕಿದೆ ಎಂದರು.

ದೇವಸ್ಥಾನಗಳಿಗೆ ಬರುವ ಭಕ್ತಾದಿಗಳಿಗೆ ಕೋವಿಡ್ ವ್ಯಾಕ್ಸಿನ್ ಪ್ರಯೋಜನದ ಬಗ್ಗೆ ದೇವಸ್ಥಾನಗಳಲ್ಲಿ ಜಾಗೃತಿ ಮೂಡಿಸಬೇಕು, ದೇವಸ್ಥಾನದ ಆವರಣದಲ್ಲಿಯೇ ಜಿಲ್ಲಾಡಳಿತದ ಸಹಯೋಗದಲ್ಲಿ ಲಸಿಕಾ ಶಿಬಿರವನ್ನು ಏರ್ಪಡಿಸಬೇಕು ಎಂದು ಅವರು ಸಲಹೆ ನೀಡಿದರು.

ಜಿಲ್ಲಾಧಿಕಾರಿ ಡಾ. ರಾಜೇಂದ್ರ.ಕೆ.ವಿ ಮಾತನಾಡಿ, ದಸರಾ ಸಂದರ್ಭದಲ್ಲಿ ಕೋವಿಡ್ ಸಮುಚಿತ ವರ್ತನೆಯನ್ನು ಪಾಲಿಸಿಕೊಂಡು ದೇವಸ್ಥಾನದಲ್ಲಿ ದರ್ಶನ ಹಾಗೂ ಸೇವೆಯನ್ನು ನಿರ್ವಹಿಸಬೇಕು. ಮಾಸ್ಕ್ ಧಾರಣೆ ಕಡ್ಡಾಯ ಹಾಗೂ ಸಾಮಾಜಿಕ ಅಂತರ ಪಾಲನೆ ಎಲ್ಲರ ಜವಬ್ದಾರಿಯಾಗಿದೆ. ಕಳೆದ ವರ್ಷ ಹೊರಡಿಸಲಾದ ಮಾರ್ಗಸೂಚಿಗಳಂತೆ ಈ ಬಾರಿಯೂ ಜಿಲ್ಲಾಡಳಿತದಿಂದ ಹೊರಡಿಸಲಾಗುವ ಮಾರ್ಗಸೂಚಿಗಳ ಅನ್ವಯ ದಸರಾ ಆಚರಣೆಗೆ ದೇವಸ್ಥಾನದ ಆಡಳಿತ ಮಂಡಳಿಗಳು ಸಹಕಾರ ನೀಡಬೇಕು ಎಂದವರು ಹೇಳಿದರು

Join Whatsapp
Exit mobile version