ನವದೆಹಲಿ: ಮಾದಕವಸ್ತು ತಯಾರಿಕಾ ಪ್ರಕರಣದಲ್ಲಿ ಪ್ರಮುಖ ಆರೋಪ ಹೊತ್ತಿದ್ದ ಆರೋಪಿ ಹಾಗೂ ಇಂಟರ್‌ಪೋಲ್ ರೆಡ್ ನೋಟಿಸ್ ಹೊಂದಿದ್ದ ಕುಬ್ಬಾವಾಲಾ ಮುಸ್ತಫಾನನ್ನು ಸಿಬಿಐ ಯುಎಇಯಿಂದ ಭಾರತಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದೆ.
ಇಂಟರ್‌ಪೋಲ್ ರೆಡ್ ನೋಟಿಸ್ ಎದುರಿಸುತ್ತಿರುವ ಮುಸ್ತಾಫಾ ಸಿಂಥೆಟಿಕ್ ಮಾದಕವಸ್ತು ತಯಾರಿಕೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ. ಈತನ್ನು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಂಡ ಕರೆ ತಂದಿದೆ.
ಸಿಬಿಐನ ಅಂತಾರಾಷ್ಟ್ರೀಯ ಪೊಲೀಸ್ ಸಹಕಾರ ಘಟಕ (ಐಪಿಸಿಯು) ಎನ್‌ಸಿಬಿಯು ಅಬುಧಾಬಿ ಸಹಯೋಗದೊಂದಿಗೆ ಯಶಸ್ವಿಯಾಗಿ ಹಸ್ತಾಂತರ ಪ್ರಕ್ರಿಯೆ ನಡೆಸಿದ್ದು, ಭಾರತಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದೆ.
ಡ್ರಗ್ಸ್ ಪ್ರಕರಣದಲ್ಲಿ ಮುಂಬೈ ಪೊಲೀಸರಿಗೆ ಬೇಕಾದ ಅಪರಾಧಿ ಈತ. ಮಹಾರಾಷ್ಟ್ರ ಸಾಂಗ್ಲಿಯಲ್ಲಿ ಸಿಂಥೆಟಿಕ್ ಡ್ರಗ್ಸ್ ತಯಾರಿಕಾ ಘಟಕವನ್ನು ಮುಂಬೈ ಪೊಲೀಸರು ಭೇದಿಸಿದ್ದರು. ಈ ವೇಳೆ, 126.141 ಕೆಜಿ ಮೆಫೆಡ್ರೋನ್ ಡ್ರಗ್ಸ್ ವಶಕ್ಕೆ ಪಡೆದಿದ್ದರು. ಈ ತಯಾರಿಕಾ ಘಟಕವನ್ನು ವಿದೇಶದಿಂದಲೇ ಮುಸ್ತಫಾ ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದರು.
ಮುಸ್ತಫಾ ವಿರುದ್ಧ ಮುಂಬೈನಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದ್ದು, ವಿಶೇಷ ನ್ಯಾಯಾಲಯವು ಅವರ ವಿರುದ್ಧ ಬಂಧನ ವಾರಂಟ್ ಹೊರಡಿಸಿತ್ತು.
