Home ಟಾಪ್ ಸುದ್ದಿಗಳು ಅಂಬೇಡ್ಕರ್ ಹೆಸರಿಗೆ ವಿರೋಧ: ಸಚಿವರ ಮನೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

ಅಂಬೇಡ್ಕರ್ ಹೆಸರಿಗೆ ವಿರೋಧ: ಸಚಿವರ ಮನೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

ನೂತನ ಜಿಲ್ಲೆಗೆ ಡಾ. ಬಿ.ಆರ್. ಅಂಬೇಡ್ಕರ್ ಅವರ ಹೆಸರಿಡುವುದನ್ನು ವಿರೋಧಿಸಿ ಆಂಧ್ರಪ್ರದೇಶದ ಅಮಾಲಪುರಂ ನಗರದಲ್ಲಿ ನಡೆಸಲಾದ ಪ್ರತಿಭಟನೆಯು ಹಿಂಸಾತ್ಮಕ ರೂಪ ತಾಳಿದೆ. ಬೀದಿಗಿಳಿದ ಉದ್ರಿಕ್ತ ಗುಂಪುಂದು ಸಚಿವರ ಮನೆಗೆ ಬೆಂಕಿ ಹಚ್ಚಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲು ನಗರದಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ.

ನೂತನವಾಗಿ ಘೋಷಿಸಲಾದ ಕೋನಸೀಮಾ ಜಿಲ್ಲೆಗೆ ʻಡಾ.ಬಿ.ಆರ್.ಅಂಬೇಡ್ಕರ್ ಕೋನಸೀಮಾ ಜಿಲ್ಲೆʼ ಎಂದು ನಾಮಕರಣ ಮಾಡಲು ವೈಎಸ್ಆರ್‌ಸಿಪಿ ನೇತೃತ್ವದ ರಾಜ್ಯ ಸರ್ಕಾರ ನಿರ್ಧರಿಸಿತ್ತು. ಆದರೆ ಇದನ್ನು ವಿರೋಧಿಸಿ ಕೋನಸೀಮಾ ಸಾಧನ ಸಮಿತಿ (ಕೆಎಸ್ಎಸ್) ಸಂಘಟನೆಯು ಮಂಗಳವಾರ ಆಯೋಜಿಸಿದ್ದ ʻಕೋನಸೀಮಾʼ ಚಲೋ ವೇಳೆ ಹಿಂಸಾಚಾರ ಭುಗಿಲೆದ್ದಿದೆ.

ರಾಜ್ಯ ಸರ್ಕಾರ ತನ್ನ ನಿರ್ಧಾರವನ್ನು ಹಿಂಪಡೆಯಬೇಕು ಮತ್ತು ಕೋನಾಸೀಮಾ ಹೆಸರನ್ನು ಮುಂದುವರಿಸಬೇಕು ಎಂದು ಆಗ್ರಹಿಸಿ ಕೆಎಸ್ಎಸ್ ಸಂಘಟನೆಯ ನೂರಾರು ಮಂದಿ, ಅಮಾಲಪುರಂ ಜಿಲ್ಲಾಧಿಕಾರಿ ಕಚೇರಿಗೆ ಪ್ರತಿಭಟನಾ ಮೆರವಣಿಗೆ ನಡೆಸಿದ್ದರು. ಈ  ವೇಳೆ ರಾಜ್ಯ ಸಾರಿಗೆ ಸಚಿವ ಪಿನಿಪೆ ವಿಶ್ವರೂಪ್ ಅವರ ಮನೆ ಎದುರು ಜಮಾಯಿಸಿದ ಉದ್ರಿಕ್ತರ ಗುಂಪೊಂದು ಸಚಿವರ ಮನೆಗೆ ಬೆಂಕಿ ಹಚ್ಚಿದೆ. ಮನೆಯಲ್ಲಿದ್ದ ಸಚಿವರ ಕುಟುಂಬ ಸದಸ್ಯರನ್ನು ಪೊಲೀಸರ ಸಹಾಯದಿಂದ ರಕ್ಷಿಸಲಾಗಿದೆ. 

ಪೊಲೀಸ್ ವಾಹನ, ಐದು ಶಾಲಾ ವಾಹನ ಸೇರಿದಂತೆ ರಸ್ತೆ ಬದಿಯಲಿದ್ದ ವಾಹನಗಳಿಗೆ ಪ್ರತಿಭಟನಾಕಾರರು ಬೆಂಕಿಹಚ್ಚಿದ್ದು, ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. 20ಕ್ಕೂ ಅಧಿಕ ಪೊಲೀಸರಿಗೆ ಗಾಯಗಳಾಗಿದೆ. ಅಮಲಾಪುರಂ ಮತ್ತು ಕೋನಸೀಮಾ ಜಿಲ್ಲೆಯ ಕೆಲವು ಭಾಗಗಳಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿದೆ. ಗುಂಪನ್ನು ಚದುರಿಸಲು ಮತ್ತು ಪರಿಸ್ಥಿತಿಯನ್ನು ಹತೋಟಿಗೆ ತರಲು 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಐದಕ್ಕಿಂತ ಹೆಚ್ಚು ಮಂದಿ ಗುಂಪುಗೂಡುವುದನ್ನು ನಿಷೇಧಿಸಲಾಗಿದ್ದು, 500ಕ್ಕೂ ಹೆಚ್ಚು ಪೊಲೀಸರನ್ನು ಅಮಲಾಪುರಂ ನಗರದಲ್ಲಿ ನಿಯೋಜಿಸಲಾಗಿದೆ.

Join Whatsapp
Exit mobile version