Home ಕ್ರೀಡೆ ಐಪಿಎಲ್ 2022: ಚೊಚ್ಚಲ ಆವೃತ್ತಿಯಲ್ಲೇ ಫೈನಲ್ ಪ್ರವೇಶಿಸಿದ ಗುಜರಾತ್ ಟೈಟನ್ಸ್

ಐಪಿಎಲ್ 2022: ಚೊಚ್ಚಲ ಆವೃತ್ತಿಯಲ್ಲೇ ಫೈನಲ್ ಪ್ರವೇಶಿಸಿದ ಗುಜರಾತ್ ಟೈಟನ್ಸ್

ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ತನ್ನ ಮೊದಲ ಆವೃತ್ತಿಯಲ್ಲೇ ಗುಜರಾತ್ ಟೈಟನ್ಸ್ ಫೈನಲ್ ಪ್ರವೇಶಿಸಿ ದಿಗ್ವಿಜಯ ಸಾಧಿಸಿದೆ. ಕಿಕ್ಕಿರಿದು ತುಂಬಿದ್ದ ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ 15ನೇ ಆವೃತ್ತಿಯ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಟೈಟನ್ಸ್, ರಾಜಸ್ಥಾನ ತಂಡವನ್ನು 7 ವಿಕೆಟ್ ಅಂತರದಲ್ಲಿ ಮಣಿಸಿತು.

ಹಾರ್ದಿಕ್ ಪಾಂಡ್ಯ ಬಳಗಕ್ಕೆ ನೀಡಿದ್ದ 189 ರನ್‌ಗಳನ್ನು ನಿಯಂತ್ರಿಸಲು ಅಂತಿಮ ಓವರ್‌ವರೆಗೂ ರಾಯಲ್ಸ್ ಹೋರಾಡಿತಾದರೂ, ಡೇವಿಡ್ ಮಿಲ್ಲರ್ ಮತ್ತು ಪಾಂಡ್ಯಾ ಹೋರಾಟದ ಮುಂದೆ ಶರಣಾಯಿತು. ಸಂಜು ಸ್ಯಾಮ್ಸನ್ ಪಡೆಯ ಫೈನಲ್ ಆಸೆ ಇನ್ನೂ ಜೀವಂತವಾಗಿದ್ದು, ಬುಧವಾರ ನಡೆಯುವ  ಎಲಿಮಿನೇಟರ್ ಪಂದ್ಯದ ವಿಜೇತರ ವಿರುದ್ಧದ ಪಂದ್ಯ ನಿರ್ಣಾಯಕವಾಗಲಿದೆ. 

189 ರನ್‌ಗಳ ಸವಾಲಿನ ಮೊತ್ತ ಬೆನ್ನಟ್ಟಿದ ಟೈಟನ್ಸ್ ಖಾತೆ ತೆರೆಯುವ ಮುನ್ನವೇ ಆರಂಭಿಕ ವೃದ್ಧಿಮನ್ ಸಹಾ ವಿಕೆಟ್ ಕಳೆದುಕೊಂಡಿತ್ತು. ಆದರೆ ಶುಭ್‌ಮನ್‌ ಗಿಲ್ ಮತ್ತು ಮ್ಯಾಥ್ಯೂ ವೇಡ್ ವಿಕೆಟ್ ಕಾಯ್ದುಕೊಂಡು ರನ್ ಗಳಿಸುತ್ತಾ ಸಾಗಿದರು. ಇವರಿಬ್ಬರೂ ತಲಾ 35 ರನ್‌ ಗಳಿಸಿ ನಿರ್ಗಮಿಸಿದರು.

ಬಳಿಕ ಜೊತೆಗೂಡಿದ ನಾಯಕ ಹಾರ್ದಿಕ್ ಪಾಂಡ್ಯಾ ಮತ್ತು ಅಪಾಯಕಾರಿ ಆಟಗಾರ ಡೇವಿಡ್ ಮಿಲ್ಲರ್ ತಂಡವನ್ನು ಗೆಲುವಿನ ಗುರಿ ಮುಟ್ಟಿಸುವವರೆಗೂ ಕ್ರೀಸ್‌ನಲ್ಲಿ ಧೃಡವಾಗಿ ನಿಂತರು. ಪಾಂಡ್ಯಾ  27 ಎಸೆತಗಳಲ್ಲಿ 40 ರನ್‌ಗಳಿಸಿದರೆ (4X5) ಮಿಲ್ಲರ್ ಕೇವಲ 38 ಎಸೆತಗಳಲ್ಲಿ 5 ಸಿಕ್ಸರ್ ಮತ್ತು ಮೂರು ಬೌಂಡರಿಯ ನೆರವಿನಿಂದ 68 ರನ್‌ಗಳಿಸಿ ಅಜೇಯರಾಗುಳಿದರು. 

ಟೈಟನ್ಸ್ ಗೆಲುವಿಗೆ ಅಂತಿಮ ಆರು ಎಸೆತಗಳಲ್ಲಿ 16 ರನ್ ಅಗತ್ಯವಿತ್ತು. ಪ್ರಸಿದ್ಧ್ ಕೃಷ್ಣ  ಎಸೆದ ಓವರ್‌ನ ಮೊದಲ ಮೂರು ಎಸೆತಗಳಲ್ಲಿ ಹ್ಯಾಟ್ರಿಕ್ ಸಿಕ್ಸರ್  ಬಾರಿಸಿದ ಮಿಲ್ಲರ್, ಮೂರು ಎಸೆತಗಳನ್ನು ಬಾಕಿ ಉಳಿಸಿ ತಂಡವನ್ನು ಪ್ರಶಸ್ತಿ ಸುತ್ತಿಗೆ ಕೊಂಡೊಯ್ದರು. 

ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ರಾಜಸ್ಥಾನ ರಾಯಲ್ಸ್ 6 ವಿಕೆಟ್ ನಷ್ಟದಲ್ಲಿ 188 ರನ್‌ಗಳಿಸಿತ್ತು. ಜಾಸ್ ಬಟ್ಲರ್ ತಂಡದ ಪಾಲಿಗೆ ಮತ್ತೊಮ್ಮೆ ಆಸರೆಯಾದರು. 56 ಎಸೆತಗಳಲ್ಲಿ 89 ರನ್‌ ಗಳಿಸಿದ ಬಟ್ಲರ್ 20ನೇ ಓವರ್‌ನ ಅಂತಿಮ ಎಸೆತದಲ್ಲಿ ರನೌಟ್ ಆದರು. ನಾಯಕ ಸಂಜು ಸ್ಯಾಮ್ಸನ್ 47 ಮತ್ತು ಪಡಿಕ್ಕಲ್ 28 ರನ್‌ ಗಳಿಸಿ ವಿಕೆಟ್ ಒಪ್ಪಿಸಿದರು. 

ಈಡನ್ ಗಾರ್ಡನ್ ಮೈದಾನದಲ್ಲಿ ಬುಧವಾರ ನಡೆಯುವ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಆರ್‌ಸಿಬಿ ತಂಡವು ಕೆ.ಎಲ್.ರಾಹುಲ್ ಸಾರಥ್ಯದ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ. 

Join Whatsapp
Exit mobile version