Home ಟಾಪ್ ಸುದ್ದಿಗಳು ಜೋಡಿ ಕೊಲೆ, ಲೂಟಿ: ಆರೋಪಿಗಳ ಪತ್ತೆಗೆ ನಾಲ್ಕು ವಿಶೇಷ ತಂಡ ರಚನೆ

ಜೋಡಿ ಕೊಲೆ, ಲೂಟಿ: ಆರೋಪಿಗಳ ಪತ್ತೆಗೆ ನಾಲ್ಕು ವಿಶೇಷ ತಂಡ ರಚನೆ

ಬೆಂಗಳೂರು: ಕೋರಮಂಗಲದ ಉದ್ಯಮಿ ರಾಜಗೋಪಾಲ ರೆಡ್ಡಿ ಅವರ ಮನೆಯಲ್ಲಿ ನಡೆದ ಜೋಡಿ ಕೊಲೆ ನಡೆಸಿ ಹಣ ಚಿನ್ನಾಭರಣಗಳನ್ನು ಲೂಟಿ ಪ್ರಕರಣದ ಪತ್ತೆಗಾಗಿ ವಿಶೇಷ ಪೊಲೀಸ್ ತಂಡಗಳನ್ನು ರಚಿಸಿ ತನಿಖೆಯನ್ನು ತೀವ್ರಗೊಳಿಸಲಾಗಿದೆ.

ಈ ನಡುವೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೊಸದೊಂದು ವಿಚಾರ ಬೆಳಕಿಗೆ ಬಂದಿದ್ದು, ಈ ಕೃತ್ಯದ ಹಿಂದೆ ರಾಜಗೋಪಾಲ ರೆಡ್ಡಿಅವರ ಮನೆಯಲ್ಲಿ ಡ್ರೈವರ್ ಆಗಿ ಕೆಲಸ ಮಾಡಿದ್ದ ಜಗದೀಶ್ ನ ಕೈವಾಡ ಇರುವ ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಆ ಆಯಾಮದಲ್ಲೂ ತನಿಖೆಯನ್ನು ನಡೆಸಲಾಗಿದೆ.

ರಾಜಗೋಪಾಲ ರೆಡ್ಡಿ ಮತ್ತು ಕುಟುಂಬದವರೆಲ್ಲ ಮದುವೆಗಾಗಿ ಅನಂತಪುರಕ್ಕೆ ಹೋಗಿದ್ದಾಗ, ಮನೆಯಲ್ಲಿದ್ದ ಸೆಕ್ಯೂರಿಟಿ ಗಾರ್ಡ್ ಅಸ್ಸಾಂ ಮೂಲದ ಬಹದ್ದೂರ್ ಹಾಗೂ ಮನೆ ಕೆಲಸದವನಾದ ಕರಿಯಪ್ಪನನ್ನು ಕೊಲೆಗೈದು ನಗದು ಚಿನ್ನಾಭರಣಗಳನ್ನು ದೋಚಲಾಗಿತ್ತು.

ಮೊದಲು ಕರಿಯಪ್ಪನ  ಮೃತದೇಹ ಸಿಕ್ಕಿತ್ತು. ಆಗ ಬಹದ್ದೂರ್ ಈ ಹತ್ಯೆ ಮಾಡಿ ಓಡಿಹೋಗಿದ್ದಾನೆ ಎಂಬ ಅನುಮಾನದ ಮೇರೆಗೆ ಪೊಲೀಸರು ತನಿಖೆ ಪ್ರಾರಂಭ ಮಾಡಿದ್ದರು. ಆದರೆ ನಂತರ ಮನೆಯ ನೀರಿನ ತೊಟ್ಟಿಯಲ್ಲಿ ಬಹದ್ದೂರ್ ಮೃತದೇಹ ಕೂಡ ಸಿಕ್ಕಿ, ಹೊಸದೊಂದು ಟ್ವಿಸ್ಟ್ ಸಿಕ್ಕಿತ್ತು.

ಇದೀಗ ಈ ಜೋಡಿ ಕೊಲೆ ಮಾಡಿದ ಅನುಮಾನ ಮನೆಯ ಹಳೇ ಡ್ರೈವರ್ ಜಗದೀಶ್ ಎಂಬವನತ್ತ ತಿರುಗಿದೆ.

ಜಗದೀಶ್ ಮೊದಲು ರಾಜಗೋಪಾಲ ರೆಡ್ಡಿ ಮನೆಯಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. ಆತನಿಗೆ ಹುಡುಗಿಯರ ಶೋಕಿ ಇತ್ತು. ತನ್ನ ವೈಯಕ್ತಿಕ ಕೆಲಸಕ್ಕೂ ಅವನು ರಾಜಗೋಪಾಲರೆಡ್ಡಿ ಕಾರನ್ನೇ ತೆಗೆದುಕೊಂಡು ಹೋಗುತ್ತಿದ್ದ. ಇವರ ಐಷಾರಾಮಿ ಕಾರುಗಳಲ್ಲಿ ಹುಡುಗಿಯರನ್ನು ಸುತ್ತಾಡಿಸುತ್ತಿದ್ದ. ಹೀಗೆ ಒಂದು ಸಲ ಆಡಿ ಕಾರನ್ನು ಜಗದೀಶ್ ತೆಗೆದುಕೊಂಡು ಹೋಗಿದ್ದಾಗ ಅದು ಅಪಘಾತಕ್ಕೀಡಾಗಿತ್ತು. ಆಗ ರಾಜಗೋಪಾಲ್ ರೆಡ್ಡಿ ಅವರು ಜಗದೀಶನಿಗೆ ಬೈದು, ಅವನನ್ನು ಕೆಲಸದಿಂದ ತೆಗೆದು ಹಾಕಿದ್ದರು. ಈಗ ಇವರ ಮನೆ ದರೋಡೆ ಮತ್ತು ಜೋಡಿ ಕೊಲೆ ಕೃತ್ಯ ಇವನದ್ದೇ ಎಂಬ ಅನುಮಾನ ಬಲವಾಗಿದೆ. ಕಾಲ್ ಡೀಟೇಲ್ಸ್ ರೆಕಾರ್ಡ್ ಪರಿಶೀಲನೆ ಮಾಡಿದಾಗ, ಅದರಲ್ಲಿ ಸಿಕ್ಕ ಕೆಲವು ಪುರಾವೆಗಳು ಜಗದೀಶ್’ನತ್ತ ಬೊಟ್ಟು ಮಾಡಿವೆ. ಸದ್ಯ ಕೋರಮಂಗಲ ಪೊಲೀಸರು ಜಗದೀಶ್’ಗಾಗಿ ಹುಡುಕುತ್ತಿದ್ದಾರೆ.

ನಾಲ್ಕು ತಂಡ ರಚನೆ:

ಕೃತ್ಯ ನಡೆಸಿದ ಆರೋಪಿಗಳ ಪತ್ತೆಗೆ ನಾಲ್ಕು ವಿಶೇಷ ತಂಡಗಳನ್ನು ರಚನೆ ಮಾಡಲಾಗಿದ್ದು, ಸುತ್ತಮುತ್ತಲಿನ ಸುಮಾರು 50 ಸಿಸಿಟಿವಿ ಪರಿಶೀಲನೆ ನಡೆಸಲಾಗಿದೆ. ನೆಟ್ ವರ್ಕ್ ಡಂಪ್, ಸಿಡಿಆರ್ ತೆಗೆದು ಆರೋಪಿಗಳ ಪತ್ತೆಗೆ ತೀವ್ರ ಶೋಧ ನಡೆಸಲಾಗುತ್ತಿದೆ.

ಮನೆಯವರು ಇಲ್ಲದಿರುವ ವಿಚಾರ ತಿಳಿದೇ ಕಳ್ಳತನ ಮಾಡಿರುವ ಬಗ್ಗೆ ಪೊಲೀಸರಲ್ಲಿ ಅನುಮಾನ ವ್ಯಕ್ತವಾಗಿದ್ದು, ಸುತ್ತಮುತ್ತಲಿನ ಎಲ್ಲಾ ಕನ್ಟ್ರಕ್ಷನ್ ಕಟ್ಟಡಗಳ ಕೆಲಸಗಾರರ ಬಗ್ಗೆಯು ಮಾಹಿತಿ ಕಲೆಹಾಕಲಾಗುತ್ತಿದೆ. ಯಾರಾದರು ನಿನ್ನೆ ಅಥವಾ ಮೊನ್ನೆ ಕೆಲಸ ಬಿಟ್ಟು ಊರಿಗೆ ಹೋದವರಿದ್ದಾರಾ ಎನ್ನುವ ಬಗ್ಗೆ ತನಿಖೆ ನಡೆಸುತ್ತಿದೆ.

Join Whatsapp
Exit mobile version