Home ಟಾಪ್ ಸುದ್ದಿಗಳು ಸಿದ್ದರಾಮಯ್ಯ ಮೇಲೆ ಜಗಳಕ್ಕೆ ಹೋಗಲು ನನಗೆ ಬೇರೆ ಕೆಲಸ ಇಲ್ಲವೇ?: ಹೆಚ್ಡಿಕೆ

ಸಿದ್ದರಾಮಯ್ಯ ಮೇಲೆ ಜಗಳಕ್ಕೆ ಹೋಗಲು ನನಗೆ ಬೇರೆ ಕೆಲಸ ಇಲ್ಲವೇ?: ಹೆಚ್ಡಿಕೆ

ಕಲಬುರಗಿ: ಸಿದ್ದರಾಮಯ್ಯ ಮೇಲೆ ಕಾಲು ಕೆರೆದುಕೊಂಡು ಜಗಳಕ್ಕೆ ಹೋಗಲು ನನಗೇನು ಬೇರೆ ಕೆಲಸ ಇಲ್ಲವೇ? ಮುಸ್ಲಿಂ ಅಭ್ಯರ್ಥಿಗಳ ರಾಜಕೀಯ ವಿವಾದ ಶುರು ಮಾಡಿದ್ದು ಯಾರು? ಅವರೇ ಅಲ್ಲವೇ? ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತೀಕ್ಷ್ಣವಾಗಿ ಪ್ರಶ್ನೆ ಮಾಡಿದರು.
ಸಿಂಧಗಿ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ತೆರಳಲು ಇಂದು ಬೆಳಗ್ಗೆ ಕಲಬುರಗಿಗೆ ಆಗಮಿಸಿದ ಅವರು ಮಾಧ್ಯಮಗಳ ಜತೆ ಮಾತನಾಡಿದರು.


ಹಾನಗಲ್ ಮತ್ತು ಸಿಂಧಗಿಯಲ್ಲಿ ಜೆಡಿಎಸ್ ಪಕ್ಷ ಇಬ್ಬರು ಸುಶಿಕ್ಷಿತ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ. ಆದರೆ, ಜೆಡಿಎಸ್ ಸೆಕ್ಯುಲರ್ ಮತಗಳನ್ನು ವಿಭಜಿಸಿ ಬಿಜೆಪಿಗೆ ಗೆಲ್ಲಲು ಅವಕಾಶ ಮಾಡಿಕೊಡಲು ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ ಎಂದು ಸಿದ್ದರಾಮಯ್ಯ ಮೊದಲು ಹುಯಿಲೆಬ್ಬಿಸಿದರು. ಅನಗತ್ಯ ವಿವಾದವನ್ನು ಸೃಷ್ಟಿಸಿ ಗೊಂದಲ ಆರಂಭ ಮಾಡಿದ್ದಾರೆ. ಬಹುಶಃ ಅದಕ್ಕೆ ನಾನೇ ಅಂತ್ಯ ಹಾಡಬೇಕಾಗುತ್ತದೆ, ಅಂಥ ಸ್ಥಿತಿಗೆ ನನ್ನನ್ನು ದೂಡಿದ್ದಾರೆ ಎಂದು ಹೆಚ್ಡಿಕೆ ಮಾರ್ಮಿಕವಾಗಿ ತಿಳಿಸಿದರು.


ಕಾಂಗ್ರೆಸ್ ಪಕ್ಷವೇ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಬಹುದಾಗಿತ್ತಲ್ಲವೇ? ಅದನ್ನು ಮಾಡದೇ ಜೆಡಿಎಸ್ ಟಿಕೆಟ್ ಕೊಟ್ಟಿತು ಕೊರಗುವುದು ಏಕೆ? ಸಿಂಧಗಿಯಲ್ಲಿ ನಮ್ಮ ಪಕ್ಷದ ನಿಷ್ಠಾವಂತ ಕುಟುಂಬಕ್ಕೆ ಟಿಕೆಟ್ ಕೊಟ್ಟಿದ್ದೇವೆ. ಪಕ್ಷದ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾಗ ಮರಣ ಹೊಂದಿದ ನಾಯಕರ ಕುಟುಂಬದ ಹೆಣ್ಣು ಮಗಳು ನಾಜಿಯಾ ಶಕೀಲಾ ಅಂಗಡಿ ಅವರಿಗೆ ಟಿಕೆಟ್ ನೀಡಿದ್ದೇವೆ. ಇದರ ಬಗ್ಗೆ ಕಾಂಗ್ರೆಸ್ಗೆ ಸಂಕಟವೇಕೆ? ಕ್ಷೇತ್ರದಲ್ಲಿ ಪೈಪೋಟಿ ಇರುವುದು ಜೆಡಿಎಸ್-ಬಿಜೆಪಿ ನಡುವೆ ಮಾತ್ರ. ಯಾವ ಚುನಾವಣೆಯ್ಲಲೂ ಕಾಂಗ್ರೆಸ್ ಎರಡನೇ ಸ್ಥಾನಕ್ಕೂ ಬಂದಿರಲಿಲ್ಲ. ಹಾಗಿದ್ದ ಮೇಲೆ ಜೆಡಿಎಸ್ ವಿರುದ್ಧ ಅಪಪ್ರಚಾರ ಮಾಡುವುದೇಕೆ? ಎಂದು ಹೆಚ್ಡಿಕೆ ಕಿಡಿ ಕಾರಿದರು.


ನಾನು ಯಾವುದೇ ಕಾರಣಕ್ಕೂ ಅವರ ತಂಟೆಗೆ ಹೋಗುವುದಿಲ್ಲ, ಅವರೇ ಪದೇಪದೆ ನಮ್ಮ ಸುದ್ದಿಗೆ ಬರುತ್ತಿದ್ದಾರೆ. ನಮಗೆ ಮಾಡಲು ಸಾಕಷ್ಟು ಕೆಲಸಗಳಿವೆ, ಹೇಳಲು ಅನೇಕ ವಿಚಾರಗಳಿವೆ. ಜನರ ಬಳಿ ಮತ ಕೇಳಲು ನಮ್ಮಲ್ಲಿ ಜನರಿಗಾಗಿ ಮಾಡಿದ ಸೇವೆ ಇದೆ. ಕಾಂಗ್ರೆಸ್ ಪಕ್ಷದ ಹೆಸರೇಳಿಕೊಂಡು ಮತ ಕೇಳಬೇಕಾದ ಕರ್ಮ ನಮಗಿಲ್ಲ. ಆದರೆ ಸಿದ್ದರಾಮಯ್ಯ ಅವರು ನಮ್ಮ ಪಕ್ಷದ ಹೆಸರೇಳಿಕೊಂಡೇ ಮತಯಾಚನೆ ಮಾಡುತ್ತಿದ್ದಾರೆಂದು ಅವರು ತರಾಟೆಗೆ ತೆಗೆದುಕೊಂಡರು.


ನೀರಾವರಿ ಯೋಜನೆ ನಿಲ್ಲಿಸಿದ ಬಿಜೆಪಿ ಸರಕಾರ:

ನಾಗಠಾಣ ಮತ್ತು ಇಂಡಿ ವಿಧಾನಸಭೆ ಕ್ಷೇತ್ರದ ಸುಮಾರು 28,000 ಹೆಕ್ಟೇರ್ ಭೂಮಿಗೆ ನೀರೊದಗಿಸುವ ಯೋಜನೆಗೆ ನಾನು ಮುಖ್ಯಮಂತ್ರಿ ಆಗಿದ್ದಾಗ ರೇವಣಸಿದ್ದೇಶ್ವರ ವೃದ್ಧಿ ಯೋಜನೆ ಅಡಿಯಲ್ಲಿ ಬಜೆಟ್ ಮೂಲಕವೇ 250 ಕೋಟಿ ರೂ.ಗಳನ್ನು ಮೀಸಲಿರಿಸಿದ್ದೆ. ಆದರೆ, ಬಿಜೆಪಿ ಸರಕಾರ ಅದಕ್ಕೆ ತಡೆಯೊಡ್ಡಿದೆ ಎಂದು ಹೆಚ್ ಡಿ ಕುಮಾರಸ್ವಾಮಿ ಅವರು ಆರೋಪಿಸಿದರು.


ಯೋಜನೆಗೆ ಬಿಜೆಪಿ ಸರಕಾರ ತಡೆಯೊಡ್ಡಿದ್ದನ್ನು ಪ್ರತಿಭಟಿಸಿ ಆ ಭಾಗದ ರೈತರು ಕಳೆದ ೪೦ ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದು, ಕೆಲ ದಿನದ ಹಿಂದೆ ಮಾಜಿ ಪ್ರಧಾನಮಂತ್ರಿಗಳಾದ ಹೆಚ್ ಡಿ ದೇವೇಗೌಡರು ಅಲ್ಲಿನ ರೈತರನ್ನು ಭೇಟಿಯಾಗಿ ಅವರ ಬೇಡಿಕೆಗೆ ದನಿಗೂಡಿಸಿದ್ದಾರೆ ಹಾಗೂ ನಿಮ್ಮ ಪ್ರತಿಭಟನೆಯನ್ನು ನಿಲ್ಲಿಸಿ ಎಂದು ಮನವಿ ಮಾಡಿದ್ದಾರೆ. ಅಲ್ಲದೆ, ಯೋಜನೆ ಕಾರ್ಯಗತ ಮಾಡುವ ನಿಟ್ಟಿನಲ್ಲಿ ನಿಮ್ಮ ಜತೆ ನಿಂತು ಹೋರಾಟ ನಡೆಸುವುದಾಗಿ ಭರವಸೆ ನೀಡಿದ್ದಾರೆ ಎಂದು ಅವರು ತಿಳಿಸಿದರು.
ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆಯಲ್ಲಿ ಮಾತನಾಡಲು ವಿಷಯವೇ ಇಲ್ಲ. ನಮಗೆ ಅಂಥ ಕೊರತೆ ಇಲ್ಲ. ಸಿಂಧಗಿ ವಿಧಾನಸಭೆ ಕ್ಷೇತ್ರಕ್ಕೆ ನಾನು ಮತ್ತು ನಮ್ಮ ತಂದೆಯವರು ಕೊಟ್ಟ ನೀರಾವರಿ ಯೋಜನೆಗಳು ಇನ್ನಿತರೆ ಕಾರ್ಯಕ್ರಮಗಳ ಮೂಲಕ ಜನರ ಮುಂದೆ ಹೋಗುತ್ತೇವೆ ಎಂದು ಹೆಚ್ಡಿಕೆ ಹೇಳಿದರು.

Join Whatsapp
Exit mobile version