ತುಮಕೂರು; “ಮುಂದಿನ ಮುಖ್ಯಮಂತ್ರಿ” ಘೋಷಣೆ ಕೂಗಬೇಡಿ ಎಂದು ಕಾಂಗ್ರೆಸ್’ನ ಹಿರಿಯ ಮುಖಂಡ, ಮಾಜಿ ಉಪಮುಖ್ಯಮಂತ್ರಿ ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ.
ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಚಿಕ್ಕಗುಂಡಗಲ್ ಗ್ರಾಮದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಪರಮೇಶ್ವರ್, “ಮುಂದಿನ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್’ ಘೋಷಣೆ ಕೇಳುತ್ತಿದ್ದಂತೆ ಮತ್ತೊಮ್ಮೆ ಈ ಪದ ಬಳಕೆ ಮಾಡಬೇಡಿ, ನಾನು ಮುಂದಿನ ಮುಖ್ಯಮಂತ್ರಿ ಆಗಬೇಕು ಎಂದು ಯಾರು ಹೇಳಬೇಡಿ, ಇದರಿಂದ ಒಳಸಂಚು ಶುರುವಾಗುತ್ತದೆ ಎಂದಿದ್ದಾರೆ.
ಸಿಎಂ ವಿಚಾರ ಎತ್ತಿದರೆ ನನಗೆ ಬಹಳ ಕಷ್ಟ ಆಗುತ್ತದೆ. ನೀವು ಇಲ್ಲಿ ಹೇಳೋಕೆ ಪ್ರಾರಂಭಿಸಿದರೆ, ಅಲ್ಲಿ ನನಗೆ ಹೊಡೆತ ಬೀಳೋಕೆ ಶುರುವಾಗುತ್ತದೆ. ನೀವು ಮನಸ್ಸಿನಲ್ಲಿ ಬೇಕಾದರೆ ಹೇಳಿಕೊಳ್ಳಿ ಎಂದ ಅವರು, ನಿಮ್ಮ ಆಶೀರ್ವಾದ ಹಾಗೂ ಪರಮಾತ್ಮನ ಇಚ್ಛೆ ಇದ್ದರೆ ನಾನು ಮುಖ್ಯಮಂತ್ರಿ ಆಗುತ್ತೇನೆ. ಮುಖ್ಯಮಂತ್ರಿ ಸ್ಥಾನ ಯಾರಿಗೆ ನೀಡಬೇಕು ಎನ್ನುವುದನ್ನು ವರಿಷ್ಠರು ತೀರ್ಮಾನಿಸುತ್ತಾರೆ ಎಂದರು.