Home ಟಾಪ್ ಸುದ್ದಿಗಳು ಯುವ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ರಕ್ಷಾ ರಾಮಯ್ಯ ವಿರುದ್ಧ ಬಿಜೆಪಿ ಯುವ ಮೋರ್ಚಾ ನೀಡಿರುವ ದೂರು...

ಯುವ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ರಕ್ಷಾ ರಾಮಯ್ಯ ವಿರುದ್ಧ ಬಿಜೆಪಿ ಯುವ ಮೋರ್ಚಾ ನೀಡಿರುವ ದೂರು ರಾಜಕೀಯ ಪ್ರೇರಿತ : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

ಬೆಂಗಳೂರು :  ಗೃಹ ಆರೈಕೆಯಲ್ಲಿರುವ ಕೋವಿಡ್ ಸೋಂಕಿತರಿಗೆ ಪ್ರದೇಶ ಯುವ ಕಾಂಗ್ರೆಸ್ ತಂಡ ವೈದ್ಯಕೀಯ ವಲಯದ ಸೂಕ್ತ ಶಿಫಾರಸ್ಸು ಇಲ್ಲದೇ ಔಷಧಗಳನ್ನು ವಿತರಿಸುತ್ತಿದ್ದು, ಇವರ ಮೇಲೆ ಕ್ರಮ ಕೈಗೊಳ್ಳುವಂತೆ ಬಿಜೆಪಿ ಯುವ ಮೋರ್ಚಾ ಔಷಧ ನಿಯಂತ್ರಕರಿಗೆ ನೀಡಿರುವ ದೂರು ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. 

ಬಿಜೆಪಿ ಯುವ ಮೋರ್ಚಾದ ಬೆಂಗಳೂರು ಕೇಂದ್ರ ವಿಭಾಗದ ಪ್ರಧಾನ ಕಾರ್ಯದರ್ಶಿ ಎಸ್.ಎಂ. ವಿಜಯೇಂದ್ರ ಎಂಬುವರು ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ರಕ್ಷಾ ರಾಮಯ್ಯ ಮತ್ತು ತಂಡದ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ದೂರು ನೀಡಿರುವ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ರಾಜಕೀಯ ಉದ್ದೇಶದ ಈ ದೂರಿಗೆ ನಾವು ಸೂಕ್ತ ರೀತಿಯಲ್ಲಿ ಉತ್ತರ ನೀಡುತ್ತೇವೆ ಎಂದರು.

ತಮಗೆ ಕೋವಿಡ್ ಸೋಂಕು ಕಂಡು ಬಂದ ಸಂದರ್ಭದಲ್ಲಿ ತಮಗೂ ಕೂಡ ಸ್ಟಿರಾಯ್ಡ್ ನೀಡಲಾಗಿತತು. ವೈದ್ಯರ ಸಲಹೆ ಮೇರೆಗೆ ಔಷಧಗಳನ್ನು ನೀಡಲಾಗುತ್ತದೆ. ಇದು ಯಾವುದೇ ರೀತಿಯಲ್ಲೂ ತಪ್ಪಲ್ಲ. ಹಾಗೊಂದು ವೇಳೆ ತಪ್ಪು ಮಾಡಿದ್ದರೆ ಅದನ್ನು ಮೊದಲು ಸರ್ಕಾರ, ಆರೋಗ್ಯ ಸಚಿವರು, ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ ನಾರಾಯಣ ತಿಳಿಸಲಿ. ತಪ್ಪು ಮಾಡಿದ್ದರೆ ತಿದ್ದಿಕೊಳ್ಳುತ್ತೇವೆ ಎಂದು ಹೇಳಿದರು.

ರಕ್ಷಾ ರಾಮಯ್ಯ ಸುಶಿಕ್ಷಿತ ವ್ಯಕ್ತಿ. ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಆರೋಗ್ಯ ಕ್ಷೇತ್ರದಲ್ಲಿ ಅವರ ಕುಟುಂಬ ಅತ್ಯುತ್ತಮ ಸೇವೆ ಸಲ್ಲಿಸುತ್ತಿದ್ದು, ವೈದ್ಯಕೀಯ ಕಾಲೇಜು ಸಹ ನಡೆಸುತ್ತಿದೆ. ಎಂ.ಎಸ್. ರಾಮಯ್ಯ ವೈದ್ಯಕೀಯ ಕ್ಷೇತ್ರದಲ್ಲಿ ಅತ್ಯಂತ ಪ್ರತಿಷ್ಠಿತ ಕುಟುಂಬ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಆರೋಗ್ಯದಲ್ಲಿ ಏನಾದರೂ ತೊಂದರೆಯಾದರೆ ಮೊದಲು ಹೋಗುವುದು ಎಂ.ಎಸ್. ರಾಮಯ್ಯ ಆಸ್ಪತ್ರೆಗೆ. ಇಂತಹ ಕುಟುಂಬದ ವಿರುದ್ಧ ಆರೋಪ ಸಲ್ಲದು ಎಂದರು.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೆಪಿವೈಸಿಸಿ ಅಧ್ಯಕ್ಷ ಎಂ.ಎಸ್. ರಕ್ಷಾ ರಾಮಯ್ಯ, ಬಿಜೆಪಿ ಯುವ ಮೋರ್ಚಾ ಔಷಧ ನಿಯಂತ್ರಕರಿಗೆ ನೀಡಿರುವ ದೂರು ವಾಸ್ತವಿಕೆತೆಯಿಂದ ಕೂಡಿಲ್ಲ. ಬಿಜೆಪಿಯವರು ಡಕ್ಸಾಜೋಕ್ಸ್ ಔಷಧಿಯನ್ನು ಐಸೋಲೇಷನ್ ಕಿಟ್ ನಲ್ಲಿ ನೀಡುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸತ್ಯಾಸತ್ಯತೆ ಅರಿಯದೇ ದೂರು ದಾಖಲಿಸಿದ್ದು, ಅವರ ಆಕ್ಷೇಪಗಳಿಗೆ ಸೂಕ್ತ [ಔಷಧ ನಿಯಂತ್ರಕರಿಗೆ] ವೇದಿಕೆಯಲ್ಲೇ ಉತ್ತರ ನೀಡುತ್ತೇವೆ ಎಂದಿದ್ದಾರೆ.

ಯುವ ಮೋರ್ಚಾದವರ ಕಾಳಜಿಗೆ ಮೆಚ್ಚುಗೆ ಇದೆ. ಆದರೆ ಜನತೆ ತೀವ್ರ ತೊಂದರೆಯಲ್ಲಿರುವಾಗ ತಾನೂ ಕೆಲಸ ಮಾಡದೇ ಮತ್ತೊಬ್ಬರಿಗೂ ಕೆಲಸ ಮಾಡಲು ಬಿಡದ ಧೋರಣೆ ಮಾತ್ರ ಖಂಡನೀಯ. ಯುವ ಕಾಂಗ್ರೆಸ್ ನ ಸೇವಾ ಚಟುವಟಿಕೆಯನ್ನು ಸಹಿಸದೇ ಅವರು ಅಸೂಯೆಯಿಂದ ನಮ್ಮ ಮೇಲೆ ಕ್ರಮಕ್ಕೆ ಒತ್ತಾಯಿಸಿರುವುದಾಗಿ ಆರೋಪಿಸಿದ್ದಾರೆ.

ತಜ್ಞ ವೈದ್ಯರ ಶಿಫಾರಸ್ಸಿನಂತೆ ನಾವು ಐಸೋಲೇಷನ್ ಕಿಟ್ ಗಳನ್ನು ಸಿದ್ಧಪಡಿಸಿದ್ದೇವೆ. ಬಹುತೇಕ ಎಲ್ಲಾ ಔಷಧಗಳು ಈ ಕಿಟ್ ನಲ್ಲಿ ಲಭ್ಯವಿದ್ದು, ಇದೊಂದು ಸಮಗ್ರ ಔಷಧಗಳ ಸಂಗ್ರಹವಾಗಿದೆ. ಉಸಿರಾಟದ ತೊಂದರೆ ಎದುರಾದಲ್ಲಿ ಮಾತ್ರ ಡಕ್ಸಾಜೋಕ್ಸ್ ಔಷಧಿಯನ್ನು ಬಳಸುವಂತೆ ಐಸೋಲೇಷನ್ ಕಿಟ್ ನಲ್ಲಿ ಸ್ಪಷ್ಟವಾಗಿ ನಮೂದಿಸಿದ್ದೇವೆ. ಜತೆಗೆ ತಜ್ಞ ವೈದ್ಯರ ದೂರವಾಣಿ ಸಂಖ್ಯೆ ನೀಡಿದ್ದು, ಗೊಂದಲಗಳಿದ್ದರೆ ಪರಿಹರಿಸಿಕೊಳ್ಳುವಂತೆಯೂ ಸಲಹೆ ಮಾಡಿದ್ದೇವೆ ಎಂದು ರಕ್ಷಾ ರಾಮಯ್ಯ ಸ್ಪಷ್ಟಪಡಿಸಿದ್ದಾರೆ. 

ಡಕ್ಸಾಜೋಕ್ಸ್ ಔಷಧಿ ಬಗ್ಗೆ ಕೆಲ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ಷೇಪ ವ್ಯಕ್ತವಾದ ನಂತರ ಕಿಟ್ ಗಳಿಂದ ಇದನ್ನು ತೆಗೆಯಲಾಗಿದ್ದು, ಈ ಸಂಬಂಧ ಎಲ್ಲಾ ಜಿಲ್ಲಾ ಘಟಕಗಳಿಗೆ ಸೂಚನೆ ನೀಡಲಾಗಿದೆ. ಜನರ ಜೀವ ರಕ್ಷಣೆಯ ಉದ್ದೇಶದಿಂದ ನಮ್ಮ ಯುವ ಕಾಂಗ್ರೆಸ್ ತಂಡ ಮಾನವೀಯತೆಯಿಂದ ಕಾರ್ಯನಿರ್ವಹಿಸುತ್ತಿದೆ. ಜನರ ಮತ್ತು ತಜ್ಞರ ಸಲಹೆಗಳಿಗೆ ನಾವು ಸದಾ ಮನ್ನಣೆ ಮತ್ತು ಗೌರವ ನೀಡುತ್ತೇವೆ. ಇಂತಹ ಪರಿಸ್ಥಿತಿಯಲ್ಲಿ ಪ್ರತಿಷ್ಠೆ ನಮಗೆ ಮುಖ್ಯವಲ್ಲ. ಜನರನ್ನು ಸೋಂಕಿನಿಂದ ರಕ್ಷಿಸುವುದೇ ನಮ್ಮ ಪ್ರಧಾನ ಗುರಿ ಮತ್ತು ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.

ಆದರೆ ಬಿಬಿಎಂಪಿ ಹಂಚುತ್ತಿರುವ ಕಿಟ್ ನಲ್ಲಿಯೂ ಸ್ಟಿರಾಯ್ಡ್ ಔಷಧಿಯನ್ನು ದಿನಕ್ಕೆ ಮೂರು ಬಾರಿ ಸೇವಿಸುವಂತೆ ಸಲಹೆ ಮಾಡಲಾಗಿದೆ. ನಾವು ಉಸಿರಾಟದ ಸಮಸ್ಯೆ ಕಂಡು ಬಂದಲ್ಲಿ ಮಾತ್ರ ಈ ಔಷಧಿ ತೆಗೆದುಕೊಳ್ಳಬೇಕು ಎಂದು ಸ್ಪಷ್ಟವಾಗಿ ಹೇಳಿದ್ದೇವೆ. ಹಾಗೆಂದು ಬಿಬಿಎಂಪಿ ಉದ್ದೇಶದಲ್ಲಿ ನಾವು ತಪ್ಪು ಹುಡುಕುತ್ತಿಲ್ಲ. ನಿಜಕ್ಕೂ ಬಿಜೆಪಿ ಯುವ ಮೋರ್ಚಾಗೆ ದೂರು ನೀಡಬೇಕು ಎನ್ನುವ ನೈಜ ಕಾಳಜಿ ಇದ್ದರೆ ಅವರದ್ದೇ ಪಕ್ಷದ ಸರ್ಕಾರ ಇರುವ ಬಿಬಿಎಂಪಿ ಮೇಲೆ ದೂರು ದಾಖಲಿಸಲಿ ಎಂದು ಹೇಳಿದ್ದಾರೆ.

ಇತ್ತೀಚೆಗೆ ಆರ್ಯವೈಶ್ಯ ವ್ಯಾಪಾರಿಗಳ ಸಂಸ್ಥೆ 70 ಲಕ್ಷ ರೂಪಾಯಿ ಬೆಲೆ ಬಾಳುವ 15 ಸಾವಿರ ಐಸೋಲೇಷನ್ ಕಿಟ್ ಗಳನ್ನು ಬೆಂಗಳೂರು ಜಿಲ್ಲಾಧಿಕಾರಿ ಅವರಿಗೆ ಹಸ್ತಾಂತರಿಸಿದೆ. ಇದರಲ್ಲೂ ಸ್ಟಿರಾಯ್ಡ್ ಔಷಧವಿತ್ತು. ಹಾಗೆಂದ ಮಾತ್ರಕ್ಕೆ ಇವರ ಉದ್ದೇಶವನ್ನು ತಪ್ಪು ತಿಳಿಯಬೇಕೆ?. ಬಹುತೇಕ ಸಂಘ ಸಂಸ್ಥೆಗಳು ನೀಡುವ ಔಷಧದ ಕಿಟ್ ಗಳಲ್ಲಿ ಸ್ಟಿರಾಯ್ಡ್ ಔಷಧಗಳಿವೆ. ಹಾಗೆಂದ ಮಾತ್ರಕ್ಕೆ ಎಲ್ಲರೂ ದುರುದ್ದೇಶದಿಂದ ಕೂಡಿದ್ದಾರೆಯೇ? ಬಿಜೆಪಿಯವರು ಎಲ್ಲವನ್ನೂ ಬಿಟ್ಟು ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಪ್ರಯತ್ನ ಎಷ್ಟರ ಮಟ್ಟಿಗೆ ಸರಿ ಎಂದು ರಕ್ಷಾ ರಾಮಯ್ಯ ಪ್ರಶ್ನಿಸಿದ್ದಾರೆ.

ರಾಷ್ಟ್ರೀಯ ಮಟ್ಟದಲ್ಲಿ ಯುವ ಕಾಂಗ್ರೆಸ್ ನ ಚಟುವಟಿಕೆಗಳಿಗೆ ಅಡ್ಡಿಪಡಿಸಿ ವಿಫಲವಾಗಿರುವ ಬಿಜೆಪಿ ಇದೀಗ ರಾಜ್ಯದಲ್ಲಿಯೂ ಯುವ ಕಾಂಗ್ರೆಸ್ ಅನ್ನು ಗುರಿ ಮಾಡಿಕೊಂಡಿದೆ. ನಾವು ನೈತಿಕ ರಾಜಕಾರಣ ಮಾಡುತ್ತಿದ್ದು, ರಚನಾತ್ಮಕ ಕೆಲಸಗಳಲ್ಲಿ ತೊಡಗಿಕೊಂಡಿದ್ದೇವೆ. ನಮ್ಮ ಉದ್ದೇಶ ಮತ್ತು ಗುರಿಯನ್ನು ವಿಫಲಗೊಳಿಸಲು ನಿಮ್ಮಿಂದ ಸಾಧ್ಯವಿಲ್ಲ. ದ್ವೇಷ ಹರಡುವ, ಅಸೂಯೆ ಪಡುವ ಬದಲು ಜನರ ಸಂಕಷ್ಟಗಳಿಗೆ ಸ್ಪಂದಿಸಲು ಮುಂದಾಗಿ. ರಾಜಕೀಯವನ್ನು ಮೀರಿ ನಾವೆಲ್ಲರೂ ಸೇವಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಕಾಲ ಇದಾಗಿದೆ ಎಂದು ಎಂ.ಎಸ್. ರಕ್ಷಾ ರಾಮಯ್ಯ ಹೇಳಿದ್ದಾರೆ.

Join Whatsapp
Exit mobile version