Home ಟಾಪ್ ಸುದ್ದಿಗಳು ಡಿಜಿಪಿ ವಿರುದ್ಧ ಡಿ.ಕೆ.ಶಿವಕುಮಾರ್ ಕೆಂಡಾಮಂಡಲ: ಪ್ರವೀಣ್ ಸೂದ್ ನಾಲಾಯಕ್ ಎಂದ ಕೆಪಿಸಿಸಿ ಅಧ್ಯಕ್ಷ

ಡಿಜಿಪಿ ವಿರುದ್ಧ ಡಿ.ಕೆ.ಶಿವಕುಮಾರ್ ಕೆಂಡಾಮಂಡಲ: ಪ್ರವೀಣ್ ಸೂದ್ ನಾಲಾಯಕ್ ಎಂದ ಕೆಪಿಸಿಸಿ ಅಧ್ಯಕ್ಷ

ಬೆಂಗಳೂರು: ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ವಿರುದ್ಧ ಕೆಂಡಾಮಂಡಲರಾಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರು ನಾಲಾಯಕ್. ಬಿಜೆಪಿ ಏಜೆಂಟ್ ಆಗಿರುವ ಅವರ ವಿರುದ್ಧ ಪ್ರಕರಣ ದಾಖಲಿಸಿ ತಕ್ಷಣ ಬಂಧಿಸಬೇಕು. ನಮ್ಮ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದರೆ ಇಂತಹ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದ್ದಾರೆ.


ಮಂಡ್ಯದಲ್ಲಿ ಇತಿಹಾಸ ತಿರುಚಲು ಉರಿಗೌಡ, ನಂಜೇಗೌಡ ದ್ವಾರ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿರುವ ಡಿಜಿಪಿ ಪ್ರವೀಣ್ ಸೂದ್ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಬೇಕು. ನಾನು ಡಿಜಿಪಿ ಪ್ರವೀಣ್ ಸೂದ್ ಒಳ್ಳೆಯವರು, ನಿಷ್ಪಕ್ಷಪಾತ ವ್ಯಕ್ತಿ ಅಂದುಕೊಂಡಿದ್ದೆ. ಆದರೆ, ಬಿಜೆಪಿಯ ಬಾಲ ಬಡುಕರಾಗಿ ಕೆಲಸ ಮಾಡುತ್ತಿದ್ದಾರೆ. ಆ ದ್ವಾರ ನಿರ್ಮಾಣಕ್ಕೆ ಇವರು ಹೇಗೆ ಅನುಮತಿ ಕೊಟ್ಟರು?. ಈ ಬಗ್ಗೆ ಚುನಾವಣಾ ಆಯೋಗ ಕೂಡ ಗಮನ ಹರಿಸಬೇಕು ಎಂದು ಹೇಳಿದರು.


ಈಗಾಗಲೇ ಅಧಿಕಾರ ಸ್ವೀಕರಿಸಿ ಮೂರು ವರ್ಷ ಆಗಿದೆ. ಇನ್ನೆಷ್ಟು ದಿನ ಮುಂದುವರಿಸುತ್ತೀರಿ, ಕಾಂಗ್ರೆಸ್ ನವರು ಹೋರಾಟ ಮಾಡಿದರೆ ಬೇಕಾಬಿಟ್ಟು ಕೇಸು ದಾಖಲಿಸುವುದು ನಡೆಯುತ್ತಿದೆ. ನನ್ನ ಮೇಲೆಯೇ 25 ಪ್ರಕರಣ ದಾಖಲಿಸಿದ್ದಾರೆ. ಬಿಜೆಪಿಯವರು ವಿರುದ್ಧ ಯಾವುದೇ ಪ್ರಕರಣ ದಾಖಲಿಸುತ್ತಿಲ್ಲ ಎಂದು ಡಿಕೆಶಿ ಹರಿಹಾಯ್ದರು.


‘ಬಿಜೆಪಿಯವರು ಮೊದಲಿಂದಲೂ ಇತಿಹಾಸ ತಿರುಚಲು ಪ್ರಯತ್ನಿಸುತ್ತಿದ್ದಾರೆ. ಕುವೆಂಪು, ಬಸವಣ್ಣ, ನಾರಾಯಣ ಗುರು, ಅಂಬೇಡ್ಕರ್, ಬಾಲಗಂಗಾಧರ ಸ್ವಾಮೀಜಿ, ಶಿವಕುಮಾರ ಸ್ವಾಮೀಜಿ – ಹೀಗೆ ಯಾರನ್ನೂ ಬಿಡದೇ ಇತಿಹಾಸ ತಿರುಚುತ್ತಿದ್ದಾರೆ. ಈಗ ಉರಿಗೌಡ, ನಂಜೇಗೌಡರ ಹೆಸರು ತೆಗೆದುಕೊಂಡಿದ್ದಾರೆ. ಇವರ ಇತಿಹಾಸ ಎಲ್ಲಿದೆ? ಇವರ ಹೆಸರು ಸೃಷ್ಟಿಸಿ ಇಡೀ ಒಕ್ಕಲಿಗ ಸಮುದಾಯಕ್ಕೆ ಮೋಸ ಮಾಡಲು ಬಿಜೆಪಿಯವರು ಷಡ್ಯಂತ್ರ ರೂಪಿಸಿದ್ದಾರೆ. ಒಕ್ಕಲಿಗರಿಗೆ ಅವಮಾನ ಮಾಡುತ್ತಿದ್ದಾರೆ. ಶ್ರೀರಂಗಪಟ್ಟಣ, ಶೃಂಗೇರಿಯಲ್ಲಿ ಅನೇಕ ಇತಿಹಾಸಗಳಿವೆ. ಆ ಬಗ್ಗೆ ನಾನು ಈಗ ಚರ್ಚೆ ಮಾಡುವುದಿಲ್ಲ. ಮುಂದೆ ಹೇಳುತ್ತೇನೆ ಎಂದರು.
ಕೆಂಗೇರಿಯ ಪೂರ್ಣಿಮಾ ಪ್ಯಾಲೇಸ್’ನಲ್ಲಿ ಮಂಗಳವಾರ ತಿಗಳರ ಸಮಾವೇಶದಲ್ಲಿ ಭಾಗವಹಿಸುವ ಮುನ್ನ ಮಾಧ್ಯಮಗಳ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.

Join Whatsapp
Exit mobile version