ಬೆಂಗಳೂರು: ಜಿಲ್ಲಾ ಸಹಕಾರಿ ಕೇಂದ್ರ(ಡಿಸಿಸಿ) ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ಇಡಿ) ಮಂಗಳವಾರ ಬೆಂಗಳೂರು ಮತ್ತು ಶಿವಮೊಗ್ಗದ 10 ಸ್ಥಳಗಳಲ್ಲಿ ದಾಳಿ ನಡೆಸಿದೆ.
ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್ ಎ) ಅಡಿಯಲ್ಲಿ, ನಿರ್ದಿಷ್ಟ ಮಾಹಿತಿಯ ಆಧಾರದ ಮೇಲೆ ತನಿಖಾ ಸಂಸ್ಥೆ ಬೆಂಗಳೂರು ಮತ್ತು ಶಿವಮೊಗ್ಗದ 10 ಸ್ಥಳಗಳಲ್ಲಿ ಏಕಕಾಲದಲ್ಲಿ ಶೋಧ ನಡೆಸಿದೆ.
ಅಧಿಕಾರಿಗಳ ಪ್ರಕಾರ, ಸಹಕಾರಿ ಬ್ಯಾಂಕಿಗೆ ಸಂಬಂಧಿಸಿದ ಹಣಕಾಸು ಅಕ್ರಮಗಳು ಮತ್ತು ಹಣ ವರ್ಗಾವಣೆಗೆ ಸಂಬಂಧಿಸಿದ ಪುರಾವೆಗಳನ್ನು ಸಂಗ್ರಹಿಸುವ ಉದ್ದೇಶದಿಂದ ಈ ದಾಳಿ ನಡೆಸಲಾಗಿದೆ.
ಬೆಂಗಳೂರಿನ ಶ್ರೀ ಗುರು ರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್; ಶ್ರೀ ವಸಿಸ್ಟಾ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ ಲಿಮಿಟೆಡ್ ಹಾಗೂ ಶ್ರೀ ಗುರು ಸಾರ್ವಬೌಮ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಬೆಂಗಳೂರು, ಈ ಮೂರು ಬ್ಯಾಂಕಿನಲ್ಲಿ ನಿರ್ವಹಣಾ ಮಂಡಳಿಯ ನಿರ್ದೇಶಕರು, ಮುಖ್ಯ ಕಾರ್ಯನಿರ್ವಾಹಕರು ಮತ್ತು ಸಿಬ್ಬಂದಿಗಳು ನಡೆಸಿದ ಬಹುಕೋಟಿ ವಂಚನೆ, ಹಣ ದುರುಪಯೋಗದ ವರದಿಗಳ ನಂತರ ಇಡಿ ದಾಳಿ ನಡೆಸಿ, ಶೋಧ ನಡೆಸುತ್ತಿದೆ.
ಶಿವಮೊಗ್ಗದಲ್ಲಿ 8ಕ್ಕೂ ಹೆಚ್ಚಿನ ಸ್ಥಳಗಳಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಶಿವಮೊಗ್ಗದ ಗೋಪಾಲಗೌಡ ಬಡಾವಣೆಯಲ್ಲಿರುವ ಡಿಸಿಸಿ ಬ್ಯಾಂಕ್ ಮಾಜಿ ಮ್ಯಾನೇಜರ್ ಶೋಭಾ ನಿವಾಸದ ಮೇಲೆ ಇಂದು ದಾಳಿ ನಡೆದಿದೆ.
2014ರ ಜೂನ್ ನಲ್ಲಿ ಶಿವಮೊಗ್ಗದ ಗಾಂಧಿ ಬಜಾರ್ ನಲ್ಲಿ ಡಿಸಿಸಿ ಬ್ಯಾಂಕ್ ನಲ್ಲಿ ನಡೆದಿದೆ ಎನ್ನಲಾದ ನಕಲಿ ಗೋಲ್ಡ್ ಪ್ರಕರಣಕ್ಕೆ ಸಂಬಂಧಿಸಿ ಅಂದು ಬ್ಯಾಂಕ್ ಮ್ಯಾನೇಜರ್ ಆಗಿದ್ದ ಶೋಭಾ ಅವರ ನಿವಾಸ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.