Home ಟಾಪ್ ಸುದ್ದಿಗಳು ಪೂಜಾರಿಯವರೆ ವಾಟ್ಸಾಪಿನಲ್ಲಿ ಬಂದಿರುವುದನ್ನು ಪೋಸ್ಟ್ ಮಾಡುವ ಮುನ್ನ ಇತಿಹಾಸ ಓದಿಕೊಳ್ಳಿ: ದಿನೇಶ್ ಗುಂಡೂರಾವ್ ತಿರುಗೇಟು

ಪೂಜಾರಿಯವರೆ ವಾಟ್ಸಾಪಿನಲ್ಲಿ ಬಂದಿರುವುದನ್ನು ಪೋಸ್ಟ್ ಮಾಡುವ ಮುನ್ನ ಇತಿಹಾಸ ಓದಿಕೊಳ್ಳಿ: ದಿನೇಶ್ ಗುಂಡೂರಾವ್ ತಿರುಗೇಟು

►► ನೀವು ರಾಷ್ಟ್ರೀಯವಾದಿಗಳಲ್ಲ, ರಾಷ್ಟ್ರವ್ಯಾಧಿಗಳು !

ಬೆಂಗಳೂರು: ಬಿಜೆಪಿ ಹೊಗಳುವ ಭರದಲ್ಲಿ ವಾಟ್ಸಾಪ್ ಬರಹವನ್ನು ಟ್ವೀಟ್ ಮಾಡಿ ಪೇಚಿಗೀಡಾಗಿದ್ದ ಸಚಿವ ಕೋಟ ಶ್ರೀನಿವಾಸ್ ಪೂಜಾರಿಗೆ ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ತಿರುಗೇಟು ನೀಡಿದ್ದಾರೆ. ಟ್ವೀಟ್ ಮೂಲಕ ಕೋಟ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ವಾಟ್ಸಾಪಿನಲ್ಲಿ ಬಂದಿರುವುದನ್ನು ಪೋಸ್ಟ್ ಮಾಡುವ ಮುನ್ನ ಇತಿಹಾಸ ಓದಿಕೊಳ್ಳಿ ಎಂದು ಕಿವಿಮಾತು ಹೇಳಿದ್ದಾರೆ.

ಸರಣಿ ಟ್ವೀಟ್ ಮಾಡಿರುವ ಅವರು, ವಾಟ್ಸಾಪ್ ಯೂನಿವರ್ಸಿಟಿಯ ವಿಧೇಯ ವಿದ್ಯಾರ್ಥಿಗಳಾದ BJPಯವರ ಜ್ಞಾನದ ಮಟ್ಟವಿದು, ಕೋಟ ಶ್ರೀನಿವಾಸ ಪೂಜಾರಿ ಸಚಿವರಾಗಿದ್ದುಕೊಂಡು ವಾಟ್ಸಾಪ್’ನಲ್ಲಿ ಬಂದಿದನ್ನು ಯಥಾವತ್ತಾಗಿ ಪೋಸ್ಟ್‌ ಮಾಡುತ್ತಾರೆಂದರೆ ಅವರ ಬುದ್ದಿಗೆ ಎಷ್ಟು ಮಂಕು ಕವಿದಿರಬಹುದು? ಪೂಜಾರಿಯವರೆ ವಾಟ್ಸಾಪಿನಲ್ಲಿ ಬಂದಿರುವುದನ್ನು ಪೋಸ್ಟ್ ಮಾಡುವ ಮುನ್ನ ಇತಿಹಾಸ ಓದಿಕೊಳ್ಳಿ ಎಂದು ವ್ಯಂಗ್ಯವಾಡಿದ್ದಾರೆ.

ರಾಷ್ಟ್ರದ ಮೊದಲ ಮುಸ್ಲಿಂ ರಾಷ್ಟ್ರಪತಿ ಕಾಂಗ್ರೆಸ್‌ನ ಕೊಡುಗೆ, ರಾಷ್ಟ್ರದ ಮೊದಲ ಸಿಖ್ ರಾಷ್ಟ್ರಪತಿ ಕಾಂಗ್ರೆಸ್‌ನ ಕೊಡುಗೆ! ರಾಷ್ಟ್ರದ ಮೊದಲ ದಲಿತ ರಾಷ್ಟ್ರಪತಿ ಕಾಂಗ್ರೆಸ್‌ನ ಕೊಡುಗೆ! ಅಷ್ಟೆ ಏಕೆ, ಮೊದಲ‌ ಮಹಿಳಾ ರಾಷ್ಟ್ರಪತಿಯ ಕೊಡುಗೆಯೂ ಕಾಂಗ್ರೆಸ್‌ನದ್ದೆ! ಆದರೆ ಕಾಂಗ್ರೆಸ್ ಯಾವತ್ತೂ ಇದನ್ನು ಪ್ರಚಾರಕ್ಕೆ ಬಳಸಲಿಲ್ಲ. ಇದೇ ವ್ಯತ್ಯಾಸ ಎಂದು ತಿರುಗೇಟು ನೀಡಿದ್ದಾರೆ.

ಪೂಜಾರಿಯವರೇ, BJPಯವರು ಜಾತಿವಾದಿಗಳಲ್ಲ ರಾಷ್ಟ್ರವಾದಿಗಳೆಂದು ವ್ಯಾಖ್ಯಾನಿಸಿದ್ದೀರಿ. ಆ ನಿಮ್ಮ ವ್ಯಾಖ್ಯಾನ ಖಂಡಿತ ತಪ್ಪು. ನೀವು ರಾಷ್ಟ್ರೀಯವಾದಿಗಳಲ್ಲ,ರಾಷ್ಟ್ರವ್ಯಾಧಿಗಳು ಜಾತ್ಯಾತೀತತೆಯ ಮುಖವಾಡ ಹಾಕಿಕೊಂಡಿರುವ ಕಟ್ಟರ್ ವಾದಿಗಳು. ದೇಶ ಒಡೆಯುವ ಕೋಮುವಾದಿಗಳು ಮತ್ತು ಅಂತರಂಗದಲ್ಲಿ ಪಸರಿಸುವ ಮನುವಾದಿಗಳು ಎಂದು ವಾಗ್ದಾಳಿ ನಡೆಸಿದ್ದಾರೆ.

https://twitter.com/dineshgrao/status/1539865018706952192

ಕಳೆದ ಎರಡು ದಿನಗಳ ಹಿಂದೆ ಸಚಿವ ಕೋಟ, ಮುಸ್ಲಿಂ ವ್ಯಕ್ತಿಯನ್ನು ರಾಷ್ಟ್ರಪತಿ ಮಾಡಿದ್ದು ನಾವೇ, ದಲಿತ ವ್ಯಕ್ತಿಯನ್ನು ರಾಷ್ಟ್ರಪತಿ ಮಾಡಿದ್ದೂ ನಾವೇ, ಇಂದು ಮಹಿಳೆ ಅದೂ ಆದಿವಾಸಿ ಬುಡಕಟ್ಟು ಜನಾಂಗದ ಮಹಿಳೆಯನ್ನು ರಾಷ್ಟ್ರಪತಿ ಮಾಡುವುದು ನಾವೇ… ಏಕೆಂದರೆ ನಾವು ಜಾತಿವಾದಿಗಳಲ್ಲಾ-ರಾಷ್ಟ್ರವಾದಿಗಳು. (ವಾಟ್ಸಪ್‌‌ನಲ್ಲಿ ಬಂದಿದ್ದು) ಎಂದು ಟ್ವೀಟ್ ಮಾಡಿದ್ದರು.

Join Whatsapp
Exit mobile version