ವಿಧಾನಪರಿಷತ್ ಗೆ ದಿನೇಶ್ ಅಮೀನ್ ಮಟ್ಟು, ನಿಕೇತ್ ರಾಜ್ ಮೌರ್ಯ?

- Advertisement -

►ಈ ಬಾರಿ ಚಿಂತಕರ ಚಾವಡಿಯಲ್ಲಿ ವಿಚಾರವಂತರಿಗೆ ಅವಕಾಶ ಸಿಗುತ್ತಾ?

- Advertisement -

►ಅವಕಾಶ ಕೊಟ್ಟರೆ ಸಮರ್ಥವಾಗಿ ನಿಭಾಯಿಸುತ್ತೇನೆ ಎಂದ ನಿಕೇತ್ ರಾಜ್

ಬೆಂಗಳೂರು : ಕರ್ನಾಟಕ ವಿಧಾನ ಪರಿಷತ್ ಎನ್ನುವುದು ಚಿಂತಕರ ಚಾವಡಿ ಎಂದು ಹೆಸರುವಾಸಿಯಾಗಿತ್ತು. ಚಿಂತಕರು, ವಿಚಾರವಂತರು, ಮಾತಿನ ಮಲ್ಲರು ಮೇಲ್ಮನೆಗೆ ಆಯ್ಕೆಯಾಗುತ್ತಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಅದೇ ಮೇಲ್ಮನೆಯು ಚುನಾವಣೆಯಲ್ಲಿ ಸೋತವರಿಗೆ ಪುನರ್ವಸತಿ ಕಲ್ಪಿಸುವ ಕೇಂದ್ರ ಎಂಬ ಅಪಕೀರ್ತಿಗೆ ಒಳಗಾಗಿದೆ. ಆದರೆ ಈ ಬಾರಿ ವಿಧಾನ ಪರಿಷತ್ ನ ನಾಮನಿರ್ದೇಶನದಲ್ಲಿ ವಿಚಾರವಂತರಿಗೆ ಅವಕಾಶ ಸಿಗುವ ಸಾಧ್ಯತೆ ಕಂಡುಬಂದಿದೆ.

- Advertisement -

ಖಾಲಿ ಬಿದ್ದಿರುವ ವಿಧಾನ ಪರಿಷತ್ ನ ನಾಲ್ಕು ಸ್ಥಾನಗಳಿಗೆ ನಾಮನಿರ್ದೇಶನ ಮಾಡಲು ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಶೀಘ್ರದಲ್ಲೇ ಸರ್ಕಾರ ನಾಮನಿರ್ದೇಶನ ಪೂರ್ಣಗೊಳಿಸುವ ಸಾಧ್ಯತೆ ಇದೆ. ನಾಮನಿರ್ದೇಶನಗೊಳ್ಳಲಿರುವ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಮಾಜಿ ಸಭಾಪತಿ ಬಿ.ಎಲ್ ಶಂಕರ್, ಮುಖ್ಯಮಂತ್ರಿಗಳ ಮಾಜಿ ಮಾಧ್ಯಮ ಸಲಹೆಗಾರರಾದ ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು, ಕೆಪಿಸಿಸಿ ವಕ್ತಾರರಾದ ನಿಕೇತ್ ರಾಜ್ ಮೌರ್ಯ ಮತ್ತು ರಮೇಶ್ ಬಾಬು, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರಾದ ಸಿ.ಎಸ್ ದ್ವಾರಕನಾಥ್ ಸೇರಿದಂತೆ ಕೆಲ ಪ್ರಮುಖರ ಹೆಸರುಗಳು ಪ್ರಸ್ತಾಪವಾಗಿದೆ.

ಇತ್ತೀಚೆಗೆ ದೆಹಲಿ ಪ್ರವಾಸ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ವಿಧಾನ ಪರಿಷತ್ ಗೆ ನಾಲ್ವರನ್ನು ನಾಮನಿರ್ದೇಶನ ಮಾಡುವ ಪ್ರಕ್ರಿಯೆಗೆ ಹೈಕಮಾಂಡ್ ಅನುಮತಿ ಪಡೆದಿದ್ದಾರೆ. ನಾಮನಿರ್ದೇಶನ ಮಾಡುವಾಗ ಸಾಮಾಜಿಕ ನ್ಯಾಯ ಮತ್ತು ಸೈದ್ಧಾಂತಿಕ ಬದ್ಧತೆಯುಳ್ಳವರನ್ನು ಪರಿಗಣಿಸುವಂತೆ ಹೈಕಮಾಂಡ್ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.

ನಾಲ್ಕು ಸ್ಥಾನಗಳ ಪೈಕಿ ಎರಡು ಸ್ಥಾನಗಳು ಸಿದ್ದರಾಮಯ್ಯ ಸೂಚಿಸುವ ಅಭ್ಯರ್ಥಿಗಳಿಗೆ ಸಿಗುವ ಸಾಧ್ಯತೆ ಇದೆ. ಡಿಕೆ. ಶಿವಕುಮಾರ್ ಕೋಟಾದಿಂದ ಒಬ್ಬರು ಮತ್ತು ಎಐಸಿಸಿ ಅಧ್ಯಕ್ಷ ಖರ್ಗೆಯವರ ಕೋಟಾದಿಂದ ಒಬ್ಬ ದಲಿತ ಅಭ್ಯರ್ಥಿ ಹೆಸರು ಅಂತಿಮವಾಗಲಿದೆ ಎಂದು ತಿಳಿದುಬಂದಿದೆ.

ಸಿದ್ದರಾಮಯ್ಯ ಕೋಟಾದಲ್ಲಿ ಅಹಿಂದ ಪ್ರಾಶಸ್ತ್ಯದಡಿ ಬಿ.ಎಲ್ ಶಂಕರ್, ದಿನೇಶ್ ಅಮೀನ್ ಮಟ್ಟು, ನಿಕೇತ್ ರಾಜ್ ಮೌರ್ಯ ಅವರ ಹೆಸರುಗಳಿದ್ದು, ಈ ಮೂವರಲ್ಲಿ ಇಬ್ಬರು ಪರಿಷತ್ ಗೆ ನಾಮನಿರ್ದೇಶನಗೊಳ್ಳುವ ಸಾಧ್ಯತೆ ಇದೆ. ಈ ಮೂವರು ಕೂಡ ವಿಚಾರವಂತರಾಗಿದ್ದು ವೈಚಾರಿಕ ಸ್ಪಷ್ಟತೆ ಮತ್ತು ಸೈದ್ಧಾಂತಿಕ ಬದ್ಧತೆ ಹೊಂದಿದವರು, ವಿಷಯಗಳಲ್ಲಿ ಆಳವಾದ ಜ್ಞಾನ ಉಳ್ಳವರು. ಈ ಮೂವರ ಪೈಕಿ ಇಬ್ಬರು ಪರಿಷತ್ ಗೆ ನಾಮನಿರ್ದೇಶನಗೊಳ್ಳುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.


”ಕಾಂಗ್ರೆಸ್ ಸಿದ್ಧಾಂತದ ಪರವಾಗಿ ಆಕ್ರಮಣಕಾರಿಯಾಗಿ ಧ್ವನಿ ಎತ್ತುವ ಉತ್ತಮ ವಾಗ್ಮಿಗಳಿಗೆ ವಿಧಾನಪರಿಷತ್ ಗೆ ನಾಮನಿರ್ದೇಶನ ಮಾಡಲಾಗುವುದು” ಎಂದು ಡಿ.ಕೆ ಶಿವಕುಮಾರ್ ಹೇಳಿರುವುದು ಹೆಚ್ಚಿನ ಕುತೂಹಲ ಮೂಡಿಸಿದೆ. ದಿನೇಶ್ ಅಮೀನ್ ಮಟ್ಟು ನಿಕೇತ್ ರಾಜ್ ಮೌರ್ಯ ಅವರು ಜಾತ್ಯಾತೀತ ಸಿದ್ಧಾಂತವನ್ನು ಗಟ್ಟಿ ಧ್ವನಿಯಲ್ಲಿ ಮಾತನಾಡುತ್ತಾ ಕೋಮುವಾದಿಗಳನ್ನು ಕಟುವಾಗಿ ವಿರೋಧ ಮಾಡುವ ಛಾತಿಯುಳ್ಳವರಾಗಿರುವುದರಿಂದ ಇವರಿಬ್ಬರು ಪರಿಷತ್ ಗೆ ನಾಮನಿರ್ದೇಶನಗೊಳ್ಳುವ ನಿರೀಕ್ಷೆ ಮೂಡಿದೆ. ದಿನೇಶ್ ಅಮೀನ್ ಮಟ್ಟು ಮತ್ತು ನಿಕೇತ್ ರಾಜ್ ಅವರಿಗೆ ಕಾಂಗ್ರೆಸ್ ಈ ಬಾರಿ ಅವಕಾಶ ಮಾಡಿಕೊಡಬೇಕು ಎಂದು ಅವರು ಬೆಂಬಲಿಗರು ಸಾಮಾಜಿಕ ಮಾಧ್ಯಮಗಳಲ್ಲಿ ಬಲವಾದ ಆಗ್ರಹ ಮಾಡುತ್ತಿದ್ದಾರೆ.


ಈ ಬಗ್ಗೆ ಪ್ರಸ್ತುತ ನ್ಯೂಸ್ ಜೊತೆ ಮಾತನಾಡಿದ ನಿಕೇತ್ ರಾಜ್ ಮೌರ್ಯ, ಪರಿಷತ್ ನಾಮನಿರ್ದೇಶನದಲ್ಲಿ ಪಕ್ಷ ನನ್ನನ್ನು ಪರಿಗಣಿಸಿದೆ ಎಂಬ ಮಾಹಿತಿ ನನಗೂ ಸಿಕ್ಕಿದೆ, ಪಕ್ಷ ಅವಕಾಶ ಕೊಟ್ಟರೆ ಸಮರ್ಥವಾಗಿ ನಿಭಾಯಿಸುವುದಾಗಿ ತಿಳಿಸಿದರು.


ಡಿಕೆಶಿ ಕೋಟಾದಲ್ಲಿ ಕೆಪಿಸಿಸಿ ಖಜಾಂಜಿ ವಿನಯ್ ಕಾರ್ತಿಕ್ ಮತ್ತು ರಘುನಂದನ್ ರಾಮಣ್ಣ ಹೆಸರು ಕೇಳಿಬರುತ್ತಿದ್ದು, ವಿನಯ್ ಕಾರ್ತಿಕ್ ಹೆಸರು ಫೈನಲ್ ಆಗಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಖರ್ಗೆ ಅವರ ದಲಿತ ಅಭ್ಯರ್ಥಿ ಯಾರು ಎನ್ನುವುದು ಇನ್ನೂ ನಿಗೂಢವಾಗಿದೆ. ಖರ್ಗೆಯವರ ಕೋಟಾದಡಿ ಕಲಬುರಗಿ ಅಥವಾ ಉತ್ತರ ಕರ್ನಾಟಕದ ಒಬ್ಬರು ದಲಿತರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.


ಈಗಾಗಲೇ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಹೈಕಮಾಂಡ್ ಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ. ನಾಮನಿರ್ದೇಶನ ಪ್ರಕ್ರಿಯೆ ಅಂತಿಮಗೊಳಿಸುವ ಸಂಬಂಧ ಎಐಸಿಸಿ ಅಧ್ಯಕ್ಷರ ಜೊತೆ ಸಿದ್ದರಾಮಯ್ಯ ಮತ್ತು ಡಿಕೆಶಿ ಸಮಾಲೋಚನೆ ನಡೆಸಿದ್ದಾರೆ. ಈಗಾಗಲೇ ಎರಡು ಸುತ್ತಿನ ಮಾತುಕತೆ ನಡೆದಿದ್ದು ಮತ್ತೊಂದು ಸುತ್ತಿನ ಮಾತುಕತೆ ಬಳಿಕ ಕಾಂಗ್ರೆಸ್ ಸರ್ಕಾರ ನಾಮನಿರ್ದೇಶನ ಅಂತಿಮಗೊಳಿಸಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

- Advertisement -


Must Read

Related Articles