Home ಟಾಪ್ ಸುದ್ದಿಗಳು ಉಳ್ಳಾಲ ಖಾಝಿ ನಿಧನಕ್ಕೆ ಗಣ್ಯರ ಸಂತಾಪ

ಉಳ್ಳಾಲ ಖಾಝಿ ನಿಧನಕ್ಕೆ ಗಣ್ಯರ ಸಂತಾಪ

ಮಂಗಳೂರು: ಉಳ್ಳಾಲ ಖಾಝಿ ಅಸ್ಸೈಯದ್ ಫಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿಯವರ ನಿಧನಕ್ಕೆ ರಾಜ್ಯ ಆರೋಗ್ಯ ಸಚಿವ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸಂತಾಪ ಸೂಚಿಸಿದ್ದಾರೆ.

‘ಎಕ್ಸ್’ ನಲ್ಲಿ ಪೋಸ್ಟ್ ವೊಂದನ್ನು ಮಾಡಿರುವ ಸಚಿವರು, ‘ಕೂರತ್ ತಂಙಳ್’ ಎಂದೇ ಪ್ರಸಿದ್ಧಿ ಪಡೆದಿದ್ದ ಉಳ್ಳಾಲ ಖಾಝಿ, ಅಸ್ಸೈಯದ್ ಫಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿ ಅವರು ನಿಧನರಾಗಿರುವ ಸುದ್ದಿ ತಿಳಿದು ಅತೀವ ದುಃಖವಾಯಿತು. ಸರ್ವಧರ್ಮಗಳ ಪ್ರತಿಪಾದಕರಾಗಿದ್ದ ತಂಙಳ್ ಅವರ ನಿಧನವು ಇಡೀ ಕರಾವಳಿ ಭಾಗದ ಜನತೆಗೆ ಅಪಾರ ನಷ್ಟವನ್ನುಂಟು ಮಾಡಿದೆ. ತಂಙಳ್ ಅವರಿಗೆ ನನ್ನ ಹಾಗು ನಮ್ಮ ಸರ್ಕಾರದ ಪರವಾಗಿ ಅಂತಿಮ ನಮನಗಳನ್ನು ಸಲ್ಲಿಸುತ್ತೇನೆ. ಅವರ ಅಪಾರ ಅನುಯಾಯಿಗಳು ಹಾಗೂ ಬಂಧು ಮಿತ್ರರಿಗೆ ನನ್ನ ತೀವ್ರ ಸಂತಾಪಗಳನ್ನು ಸೂಚಿಸುತ್ತೇನೆ ಎಂದು ಕಂಬನಿ ಮಿಡಿದಿದ್ದಾರೆ.

ಖಾಝಿ ಕೂರತ್ ತಂಙಳ್ ನಿಧನಕ್ಕೆ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಸಂತಾಪ ಸೂಚಿಸಿದ್ದು, ಉಳ್ಳಾಲ ಸೇರಿದಂತೆ ದ.ಕ.ಜಿಲ್ಲೆಯ ನೂರಾರು ಮೊಹಲ್ಲಾಗಳ ಖಾಝಿಗಳೂ ಆಧ್ಯಾತ್ಮಿಕ ನಾಯಕರೂ ನಮ್ಮೆಲ್ಲರ ಮಾರ್ಗದರ್ಶಕರೂ ಆದ ಅಸ್ಸೆಯ್ಯಿದ್ ಫಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿ ಕೂರತ್ ಅವರ ನಿಧನ ವಾರ್ತೆ ಕೇಳಿ ತೀವ್ರ ಆಘಾತವಾಯಿತು.ಇವರು ಮರ್ಹೂಂ ಶೈಖುನಾ ಅಸ್ಸೆಯ್ಯದ್ ತಾಜುಲ್ ಉಲಮಾ ಅಬ್ದುಲ್ ರಹ್ಮಾನ್ ಅಲ್ ಬುಖಾರಿ ತಂಙಲರ ಸುಪುತ್ರರಾಗಿದ್ದಾರೆ.

ಎರಡು ದಿನಗಳ ಹಿಂದಷ್ಟೇ ಬಹು ಸೆಯ್ಯಿದರು ನನ್ನೊಂದಿಗೆ ಮಾತನಾಡಿದ್ದರು.ಆರೋಗ್ಯವಂತರಾಗಿದ್ದ ತಂಙಳ್ ಅವರ ಹಠಾತ್ ನಿಧನ ಸಮಾಜವನ್ನು ಅತೀವ ದುಃಖಕ್ಕೆ ದೂಡಿದೆ.ರೋಗ ರುಜಿನಗಳಿಂದ, ಸಮಸ್ಯೆ ಸಂಕಷ್ಟಗಳಿಂದ ಬಳಲಿ ಬರುವವರಿಗೆ ಆಧ್ಯಾತ್ಮಿಕ ಹಾದಿಯಲ್ಲಿ ಪರಿಹಾರ ಹುಡುಕಿ ತಮ್ಮ ಬಳಿಗೆ ಬರುತ್ತಿದ್ದ ಜನರನ್ನು ರಾತ್ರಿ ಹಗಲೆನ್ನದೆ ಸಂತೈಸುತ್ತಿದ್ದ ಕೂರತ್ ತಂಙಳ್ ಅವರು ಜಾತಿ ಮತ ಭೇದವಿಲ್ಲದೆ, ಬಡವ ಧನಿಕ ವ್ಯತ್ಯಾಸವಿಲ್ಲದೆ ಎಲ್ಲರನ್ನೂ ಸಮಾನವಾಗಿ ಕಾಣುತ್ತಿದ್ದರು.ಎಲ್ಲರೂ ಪರಸ್ಪರ ಪ್ರೀತಿ ವಿಶ್ವಾಸದಿಂದ ಸರ್ವಶಕ್ತನಿಗೆ ಭಯಪಟ್ಟು ಬದುಕಬೇಕೆಂದು ನಿರಂತರವಾಗಿ ಸಮಾಜವನ್ನು ಬೋಧಿಸುತ್ತಿದ್ದರು.

ಸತ್ಯದ ಹಾದಿಯಲ್ಲಿ‌ ದೃಡವಾಗಿ‌ ನಿಲ್ಲುವ ಅವರ ವ್ಯಕ್ತಿತ್ವ ಮಾದರಿಯಾಗಿತ್ತು.ಅವರ ತಂದೆ ತಾಜುಲ್ ಉಲಮಾರವರ ವಿದಾಯದಿಂದ ದುಃಖಿತವಾದ ಸಮಾಜ ಕೂರತ್ ತಂಙಳ್ ಅವರ ನಿಧನದೊಂದಿಗೆ ಮತ್ತೊಮ್ಮೆ ತಮ್ಮ ಆಸರೆಯನ್ನು ಕಳೆದುಕೊಂಡ ದುಃಖದಲ್ಲಿದೆ ಎಂದು ಕಂಬನಿ ಮಿಡಿದಿದ್ದಾರೆ.

ಖಾಝಿ ಕೂರತ್ ತಂಙಳ್ ನಿಧನಕ್ಕೆ ಎಸ್‌ ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಸಂತಾಪ ಸೂಚಿಸಿದ್ದು,  ಬಹುಮಾನ್ಯರಾದ ತಾಜುಲ್ ಉಲಮಾ ಉಳ್ಳಾಲ ತಂಙಳ್ ಪುತ್ರರಾದ ಹಾಗೂ ಸಮಸ್ತ ಕೇರಳ ಜಮ್ಮೀಯತುಲ್ ಉಲಮಾ ಕೇಂದ್ರಿಯ ಕೌನ್ಸಿಲ್ ಸದಸ್ಯ, ಜಾಮಿಯಾ ಸ‌ಅದಿಯ್ಯ ಪ್ರಧಾನ ಕಾರ್ಯದರ್ಶಿ, ಉಳ್ಳಾಲ ಖಾಝಿಯೂ ಆಗಿರುವಂತಹ ಸೈಯದ್ ಫಝಲ್ ಕೋಯಮ್ಮ ತಂಙಳ್ ಕೂರತ್ ಅವರು ವಫಾತಾದರು ಎಂಬ ದುಃಖಕರ ವಾರ್ತೆ ಬಂದಿದೆ. ಅಲ್ಲಾಹನು ಅವರಿಗೆ ಜನ್ನಾತುಲ್ ಫಿರ್ದೋಸ್ ನಲ್ಲಿ ಉನ್ನತ ದರ್ಜೆ ನೀಡಿ ಅನುಗ್ರಹಿಸಲಿ. ಅವರನ್ನು ಬೆಂಬಲಿಸುವ ಅಪಾರವಾದ ಅನುಯಾಯಿಗಳಿಗೆ, ಶಿಷ್ಯ ವರ್ಗಕ್ಕೆ ಮತ್ತು ಅವರ ಕುಟುಂಬಸ್ಥರಿಗೆ, ಹಿತೈಷಿಗಳಿಗೆ ತಂಙಳ್ ರವರ ಆಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಅಲ್ಲಾಹು ಕರುಣಿಸಲಿ ಎಂದು ಕಂಬನಿ ಮಿಡಿದಿದ್ದಾರೆ.

ಖಾಝಿ ಕೂರತ್ ತಂಙಳ್ ನಿಧನಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಸಂತಾಪ ಸೂಚಿಸಿದ್ದು,  ಉಳ್ಳಾಲ ಖಾಝಿಗಳು, ಪ್ರಮುಖ ಧಾರ್ಮಿಕ ವಿದ್ವಾಂಸರಾಗಿ ನಮಗೆ ಮಾರ್ಗದರ್ಶಕರಾಗಿದ್ದ ಗೌರವಾನ್ವಿತ ಸೈಯದ್ ಫಝಲ್ ಕೋಯಮ್ಮ ತಂಙಳ್ ಕೂರತ್ ರವರು ನಿಧನರಾದ ಸುದ್ದಿ ತಿಳಿದು ತೀವ್ರ ಆಘಾತವಾಯಿತು. ತಂಙಳ್‌ರವರ ಅಗಲುವಿಕೆ ತುಂಬಲಾರದ ನಷ್ಟ ತಂದಿದೆ.

ತಂಙಳ್ ರವರ ಪಾರತ್ರಿಕ ಜೀವನ ಸುಗಮವಾಗಿರಲಿ, ಮಗ್ಫಿರತ್ ಮರ್ಹಮತ್‌ಗಾಗಿ ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.

Join Whatsapp
Exit mobile version