ಯಾವುದೇ ದೇಶದ ಅಭಿವೃದ್ಧಿ ಆ ದೇಶದ ಜನಪರ, ಜೀವಪರ ಕಾಳಜಿಯುಳ್ಳ ಆಡಳಿತಗಾರರಿಂದ ಮತ್ತು, ಪ್ರಭುತ್ವದ ಅರಾಜಕತೆಯನ್ನು ಪ್ರಶ್ನಿಸುವ ಪ್ರಜ್ಞಾವಂತ ನಾಗರಿಕರಿಂದಾಗಿದೆ. ಈ ಹಿನ್ನೆಲೆಯಲ್ಲಿ ವಿವೇಚನಾತ್ಮಕ, ವಿಮರ್ಶಾತ್ಮಕ ಶಿಕ್ಷಣ ದೇಶವೊಂದರ ಅಭಿವೃದ್ಧಿಗೆ ಅತ್ಯಗತ್ಯ.
ದೇಶ ಬ್ರಿಟಿಷರಿಂದ ಸ್ವಾತಂತ್ರ್ಯಗೊಂಡು 7 ದಶಕಗಳು ಕಳೆದವು. ಈ ಹೊತ್ತಿಗೆ ಅಭಿವೃದ್ಧಿಯ ತುತ್ತ ತುದಿಯಲ್ಲಿ ಇತರ ದೇಶಗಳಿಗೂ ಪೈಪೋಟಿ ನೀಡುವಲ್ಲಿ ಭಾರತ ಶಕ್ತವಾಗಿರಬೇಕಿತ್ತು. ಆದರೆ ಕೋಮುವಾದವೆಂಬ ವೈರಸ್ ದೇಶಾದ್ಯಂತ ಸಕ್ರಿಯವಾಗಿರುವ ಕಾರಣ ದೇಶದ ಅಭಿವೃದ್ಧಿಗೆ ಹಿನ್ನಡೆಯಾಗಿವೆ. ಕೋಮುವಾದ ಒಂದು ಧರ್ಮದ ಮೇಲಿರುವ ಪ್ರೀತಿ ಅಥವಾ ಇನ್ನೊಂದು ಧರ್ಮದ ಮೇಲಿರುವ ದ್ವೇಷವಾಗಿರದೆ ಬಹುದೊಡ್ಡ ವ್ಯಾವಹಾರಿಕ ತಂತ್ರ ಮತ್ತು ಬಂಡವಾಳಶಾಹಿಗಳ ಹಿತಾಸಕ್ತಿ ಕಾಪಾಡಲು ಇರುವ ದೊಡ್ಡ ಅಸ್ತ್ರವೂ ಆಗಿದೆ.
ಇತಿಹಾಸ ನಷ್ಟವಾದರೆ ದೇಶಕ್ಕಾಗುವ ನಷ್ಟ, ಸಮಸ್ಯೆಗಳು ಅಪಾರವಾದುದು. ಪಾಠಪುಸ್ತಕಗಳಲ್ಲಿ ಮೌಲ್ಯಾಧಾರಿತ ವಿಷಯಗಳನ್ನು ಬದಲಾವಣೆ ಮಾಡಬಹುದು. ಬದಲಾವಣೆ ಮಾಡಿದ ವಿಷಯಗಳು ವಿದ್ಯಾರ್ಥಿಗಳ ಬೆಳವಣಿಗೆಗೆ ಸಹಕಾರಿಯಾಗುವಂಥದ್ದಾಗಿರಬೇಕು. ಆದರೆ, ಇತಿಹಾಸವನ್ನು ಬದಲಾಯಿಸುವುದು ಮತ್ತು ತಿರುಚಿದ ಇತಿಹಾಸವನ್ನು ಪ್ರಚಾರಮಾಡುವುದು ದೇಶದ್ರೋಹದ ಕೆಲಸ.
ವಿವಾದಗಳ ಮೂಲಕವೇ ಜನವಿರೋಧಿ ಅಜೆಂಡಾವನ್ನು ಜಾರಿಗೊಳಿಸಬಯಸುವ ಸಂಘಪರಿವಾರ ಯಾವುದೇ ಕ್ಷೇತ್ರವನ್ನು ಬೆಂಬಿಡದೆ ಹಿಂದುತ್ವ ಸಿದ್ಧಾಂತವನ್ನು ಹೇರಲು ತುದಿಗಾಲಲ್ಲಿ ನಿಂತಿದೆ. ಸಂಘಪರಿವಾರದ ಅಣತಿಯಂತೆ ಕಾರ್ಯ ನಿರ್ವಹಿಸ್ತುತಿರುವ ಮೋದಿ ಸರಕಾರದಿಂದ ನೈಜ ಇತಿಹಾಸಕಾರರಿಗೂ ಸಮಸ್ಯೆ ಎದುರಾಗುತ್ತಿದೆ.
ಇತಿಹಾಸಕಾರರಾದ ರೋಮಿಲಾ ಥಾಪರ್ ಮತ್ತು ಬಿಪಿನ್ ಚಂದ್ರ ಮೊದಲಾದವರ ಪುಸ್ತಕಗಳನ್ನು ಸುಟ್ಟುಹಾಕಬೇಕೆಂದು ಸಂಘಪರಿವಾರ ಬಹಿರಂಗ ಹೇಳಿಕೆಗಳನ್ನು ನೀಡುತ್ತಿತ್ತು. ವಾಜಪೇಯಿ ಸರಕಾರವಿದ್ದಾಗ ಬಿಪಿನ್ ಚಂದ್ರಪಾಲ್ ರ ಪುಸ್ತಕವನ್ನು ಶಾಲಾ ಪಠ್ಯವನ್ನಾಗಿ ಮಾಡದಂತೆ ತಡೆಯುವಲ್ಲಿ ಅದು ಯಶಸ್ವಿಯಾಗಿತ್ತು. ಆ ಪಠ್ಯದಲ್ಲಿ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹಿಂದೂ ಮುಸ್ಲಿಮರು ಒಗ್ಗೂಡಿ ನಡೆಸಿದ ಹೋರಾಟವನ್ನು ನೀಡಲಾಗಿದೆ. ಅದರಲ್ಲಿ ಭಾರತದ ಸೌಹಾರ್ದದ ಇತಿಹಾಸವಿದೆ. ಆದರೆ, ಈ ವಿಶ್ಲೇಷಣೆ ಸಂಘಪರಿವಾರಕ್ಕೆ ಪಥ್ಯವಾಗುತ್ತಿಲ್ಲ.
ಸಂಘಪರಿವಾರ ಬ್ರಿಟಿಷ್ ಚಿಂತಕ ಜೆ.ಎಸ್.ಮಿಲ್ ಬರೆದ ಇತಿಹಾಸವನ್ನು ಒಪ್ಪುತ್ತದೆ. ಮಿಲ್ ಬರೆದ ಇತಿಹಾಸ ಕೋಮುವಾದದಿಂದ ಕೂಡಿದುದಾಗಿದೆ. ಅದು ಇತಿಹಾಸವಾಗಿರದೆ ಇಲ್ಲಿನ ಜನತೆಯನ್ನು ಪರಸ್ಪರ ಒಡಕುಂಟುಮಾಡಲು ತಯಾರಿಸಿದ ಆಯುಧವಾಗಿದೆ. ಸಂಘಪರಿವಾರಕ್ಕೂ ಬೇಕಿರುವುದು ಅದೇ ತಾನೆ.
ವಿದ್ಯಾರ್ಥಿಗಳಲ್ಲಿ ಎಳವೆಯಲ್ಲೇ ಕೋಮುವಾದದವನ್ನು ತುಂಬಿ ಸಮಾಜವನ್ನು ಧರ್ಮದ ಹೆಸರಲ್ಲಿ ಒಡೆಯುವ ಕೆಲಸವನ್ನು ಸಂಘಪರಿವಾರ ಮಾಡುತ್ತಿದೆ. ಸಂಘಪರಿವಾರದ ಯುವಬ್ರಿಗೇಡ್ ಬೆಳಗಾವಿಯ ಕೆ.ಎಲ್.ಇ. ಸಿಬಿಎಸ್ಸಿ ಶಾಲೆ ಮತ್ತು ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ರಾಧಾಕಷ್ಣ ಶಾಲೆ, ಜಿಎನ್. ಹಳ್ಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನೂ ಸೇರಿ ಸ್ಥಳೀಯ ಇನ್ನಿತರ ಶಾಲೆಗಳಲ್ಲಿ ಸಾವರ್ಕರ್ ಜಯಂತಿಯ ಹೆಸರಲ್ಲಿ ಆರೆಸ್ಸೆಸ್ ಅಜೆಂಡಾವನ್ನು ಮಕ್ಕಳಿಗೆ ಬೋಧಿಸಿ ಚರ್ಚೆಗೀಡಾಗಿತ್ತು. ಸಾವರ್ಕರ್ ಜಯಂತಿ ನೆಪದಲ್ಲಿ ಮನುಸ್ಮತಿಯನ್ನು ಮಕ್ಕಳಿಗೆ ಬೋಧಿಸಿ ಆತನನ್ನು ಹೀರೋ ಎಂಬುದಾಗಿ ಚಿತ್ರಿಸಿ, ದೇಶದ ತ್ರಿವರ್ಣ ಧ್ವಜದ ಬದಲಿಗೆ ಭಗವಾಧ್ವಜವನ್ನು ಮತ್ತು ಆರೆಸ್ಸೆಸ್ ಶಾಖೆಗಳಲ್ಲಿ ನೀಡಲಾಗುವ ಬೋಧನೆಯನ್ನೇ ಮುಗ್ಧ ವಿದ್ಯಾರ್ಥಿಗಳಿಗೆ ಸಂಘಪರಿವಾರ ಬೋಧಿಸುತ್ತಾ ಬಂದಿದೆ.
ಸಂಘಪರಿವಾರದ ಹಿಡಿತದಲ್ಲಿರುವ ಶಾಲೆಗಳಲ್ಲಿ ಯೋಗ, ಶ್ಲೋಕಗಳು, ಭಜನೆ ಮಂತ್ರಗಳನ್ನು ವಿದ್ಯಾರ್ಥಿಗಳಿಗೆ ಹೇಳಿಕೊಡಲಾಗುತ್ತದೆ. ಅಲ್ಲಿ ತರಗತಿಯನ್ನು ಪ್ರಾರಂಭಿಸುವುದು ಸೂರ್ಯ ನಮಸ್ಕಾರ ಅಥವಾ ಸಂಘಪರಿವಾರದ ಗೀತೆ ‘ನಮಸ್ತೇ ಸದಾವತ್ಸಲೆ’ಯ ಮೂಲಕವಾಗಿದೆ.
ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದ ಸಾವರ್ಕರ್, ಗಾಂಧೀಜಿಗೆ ಗುಂಡಿಕ್ಕಿದ ಗೋಡ್ಸೆ, ಸಂಘವಾರದ ಸಂಸ್ಥಾಪಕ ಹೆಡಗೇವಾರ್ ಮೂಲಕ ದೇಶದ ನೈಜ ಸ್ವಾತಂತ್ರ್ಯಹೋರಾಟಗಾರರನ್ನು ಪಠ್ಯದಿಂದಲೂ ಇತಿಹಾಸದಿಂದಲೂ ದೂರ ಸರಿಸಲು ಸಂಘಪರಿವಾರ ಪ್ರಯತ್ನಿಸುತ್ತಲೇ ಬಂದಿದೆ. ಇದೀಗ ರಾಜ್ಯ ಸರಕಾರ ಹತ್ತನೇ ತರಗತಿಯ ಪಠ್ಯಪುಸ್ತಕದಲ್ಲಿ ಹೆಡಗೇವಾರ್ ಭಾಷಣವನ್ನು ಸೇರಿಸಿ ವಿವಾದಕ್ಕೆ ಗುರಿಯಾಗಿದೆ. ಮಾತ್ರವಲ್ಲ ಖ್ಯಾತ ಪತ್ರಕರ್ತ ಪಿ.ಲಂಕೇಶ್, ಸಾಹಿತಿಗಳಾದ ಜಿ.ರಾಮಕೃಷ್ಣ, ಸಾರಾ ಅಬೂಬಕರ್, ಎ.ಎನ್.ಮೂರ್ತಿರಾವ್, ಶಿವಕೋಟ್ಯಾಚಾರ್ಯ ಅವರ ಪಠ್ಯಗಳನ್ನು ಕೈಬಿಡಲಾಗಿದೆ.
ಸಂಘಪರಿವಾರದ ಈ ಷಡ್ಯಂತ್ರ ಕೇವಲ ಕರ್ನಾಟಕಕ್ಕೇ ಸೀಮಿತವಾಗಿಲ್ಲ. ದೇಶಾದ್ಯಂತ ಶಾಲೆಗಳಲ್ಲಿ ಅದು ಇತಿಹಾಸವನ್ನು ತಿರುಚಿ ಪಾಠವನ್ನು ಹೇಳಿಕೊಡುತ್ತಾ ಬಂದಿದೆ. 1994ರಿಂದ 2004ರವರೆಗೆ ಕೇಂದ್ರದಲ್ಲಿ ಬಿಜೆಪಿ ಮತ್ತು ಇತರ ಮಿತ್ರಪಕ್ಷಗಳನ್ನು ಒಳಗೊಂಡ ಎನ್ ಡಿಎ ಸರಕಾರವಿದ್ದಾಗ ಮುರಳಿ ಮನೋಹರ ಜೋಷಿಯವರು ಶಿಕ್ಷಣ ಮಂತ್ರಿಯಾಗಿದ್ದರು. ಆ ಸಂದರ್ಭದಲ್ಲಿ ಪಠ್ಯವನ್ನು ಕೇಸರೀಕರಣಗೊಳಿಸುವ ಯೋಜನೆಗೆ ಅವರು ಮುಂದಾಗಿದ್ದರು. ಅದರ ಮುಂದುವರಿದ ಪ್ರಯತ್ನ ಸಕ್ರಿಯವಾಗಿದೆ.
ಒಂದೆಡೆ ತಾಜ್ ಮಹಲನ್ನು ತೇಜೋ ಮಹಲ್ ಎಂದು, ಕುತುಬ್ ಮಿನಾರನ್ನು ಸಮುದ್ರಗುಪ್ತ ನಿರ್ಮಿಸಿದನೆಂದು ಅದರ ಹೆಸರು ವಿಷ್ಣುಸ್ತಂಭವೆಂಬ ಸುಳ್ಳಿನ ಕಂತೆಗಳನ್ನು ಪೋಣಿಸಿದ ಸಂಘಪರಿವಾರ ಮತ್ತೊಂದೆಡೆ ಭಾರತೀಯ ಋಷಿಗಳ ಕಾಲದಲ್ಲಿ ಟೆಲಿವಿಷನ್ನ್ನು ಕಂಡುಹಿಡಿಯಲಾಯಿತೆಂದು ಹೇಳಿ ವಿಜ್ಞಾನವನ್ನು ಹಿಂದುತ್ವದ ತೆಕ್ಕೆಯಲ್ಲಿಡಲು ಪ್ರಯತ್ನಿಸಿದೆ.
ದೇಶಭಕ್ತಿಯ ಹೆಸರಲ್ಲಿ ಮೌಢ್ಯವನ್ನು ಬಿತ್ತುತ್ತಾ ಬಂದಿರುವ ಸಂಘಪರಿವಾರ, ಪ್ರತಿಯೊಂದು ವಿಶ್ವವಿದ್ಯಾನಿಲಯಗಳಲ್ಲಿ ೪ ಸಂಸ್ಕೃತ ಅಧ್ಯಾಪಕರನ್ನು ನೇಮಿಸಬೇಕೆಂಬ ವಿವಾದವನ್ನು ಕೈಗೊಂಡಿತ್ತು. ಅದು ಸಂಘಪರಿವಾರದ ಹಿನ್ನ್ನೆಲೆಯುಳ್ಳ ಅಧ್ಯಾಪಕರನ್ನು ನೇಮಿಸಿ ತನ್ನ ಕೋಮುವಾದಿ ಶಾಖೆಗಳನ್ನು ವಿಸ್ತರಿಸುವ ತಂತ್ರಗಾರಿಕೆಯಾಗಿತ್ತು.
ಬಿಜೆಪಿಯ ರಾಮ್ ಸಿಂಗ್ ಕಥೇರಿಯಾ ಬಹಿರಂಗವಾಗಿ ‘ಶಿಕ್ಷಣಕ್ಷೇತ್ರವನ್ನು ಮಾತ್ರವಲ್ಲ ಇಡೀ ದೇಶವನ್ನು ಕೇಸರೀಕರಣ ಮಾಡುತ್ತೇವೆ’ ಎಂಬ ವಿವಾದಾಸ್ಪದ ಹೇಳಿಕೆ ನೀಡಿ ಸುದ್ದಿಯಾಗಿದ್ದರು. ಈ ವಿವಾದಿತ ಹೇಳಿಕೆ ಪ್ರಾಯೋಗಿಕಗೊಳಿಸುವತ್ತ ಸಂಘಪರಿವಾರ ಸಾಗಿದೆ.
ಭಾರತದ ಸ್ವಾತಂತ್ರ್ಯ ಹೋರಾಟ ಬಲಿಷ್ಠಗೊಳ್ಳುತ್ತಿದ್ದುದು ಬ್ರಿಟಿಷರಿಗೆ ತಲೆನೋವಾಗಿತ್ತು. ಆ ಕಾರಣದಿಂದ ಕೆಲವು ಬ್ರಿಟಿಷ್ ಇತಿಹಾಸಕಾರರು ಹಿಂದೂ ಮುಸ್ಲಿಮರ ಮಧ್ಯೆ ಒಡಕುಂಟುಮಾಡಿ ದೇಶವಾಸಿಗಳನ್ನು ಒಡೆದು ಆಳಲು ತಿರುಚಲ್ಪಟ್ಟ ಇತಿಹಾಸವನ್ನು ಸಷ್ಟಿಸಿದರು. ಅದನ್ನಿಂದು ಸಂಘಪರಿವಾರ ಅಸ್ತ್ರವನ್ನಾಗಿ ಪ್ರಯೋಗಿಸುತ್ತಿದೆ.
ಬ್ರಿಟಿಷರಿಗೆ ಹೆಚ್ಚು ತಲೆನೋವಾಗಿದ್ದು ಟಿಪ್ಪುಸುಲ್ತಾನ್. ಟಿಪ್ಪುವಿನ ಸುಸಜ್ಜಿತ ಸೇನಾಪಡೆ, ಆತನ ಸೌಹಾರ್ದ, ಅಭಿವೃದ್ಧಿ ಯೋಜನೆಗಳು ಬ್ರಿಟಿಷರಿಗೆ ತಮ್ಮ ನೆಲೆಯನ್ನು ಕಂಡುಕೊಳ್ಳಲು ಕಷ್ಟವಾಗಿತ್ತು. ಹಾಗಾಗಿ ಈಗ ಸಂಘಪರಿವಾರ ನಡೆಸುತ್ತಿರುವ ಪ್ರಯೋಗವನ್ನು ಬ್ರಿಟಿಷರು ಅಂದೇ ನಡೆಸಿದ್ದರು.
ಬ್ರಿಟಿಷರ ಪರವಿದ್ದ ಇತಿಹಾಸಕಾರ ಜಾನ್ ವಿಲಿಯಂ ಕೇ ‘ಒಬ್ಬ ದೇಶೀಯ ಅರಸನನ್ನು ಮೊದಲು ಪದಚ್ಯುತಗೊಳಿಸುವುದು, ಆನಂತರ ಅವನನ್ನು ಹೀನಾಯವಾಗಿ ದೂಷಿಸುತ್ತಾ ಹೋಗುವುದು ನಮ್ಮ ಪದ್ಧತಿಯಾಗಿದೆ’ (ಜಾನ್ ವಿಲಿಯಂ ಕೀ ಹಿಸ್ಟರಿ ಆಫ್ ದಿ ಸಿಪಾಯಿ ವಾರ್ ಇನ್ ಇಂಡಿಯಾ. ಸಂ 3, ಪುಟ 361-362) ಎಂದಿದ್ದಾನೆ.
ಮಾರ್ಕ್ಸ್ ವಿಲ್ಕ್ಸ್ ಎಂಬ ವಸಾಹತುಕಾಲದ ಬ್ರಿಟಿಷ್ ಇತಿಹಾಸಕಾರ ಟಿಪ್ಪುವನ್ನು ಅಸಹಿಷ್ಣು, ಮತಭ್ರಾಂತ ಹಾಗೂ ಉಗ್ರ ಮತಾಂಧ ಎಂದು ದಾಖಲಿಸಿಬಿಟ್ಟನು. ಆತನ ನಂತರದ ಕೆಲವು ಇತಿಹಾಸಕಾರರೂ ಆತ ದಾಖಲಿಸಿದ ಸುಳ್ಳಿನ ಕಂತೆಗಳನ್ನೇ ಮರು ದಾಖಲಿಸಿದರು. ಇಂದು ಸಂಘಪರಿವಾರದ ಮನೋಸ್ಥಿತಿಗೆ ಜೋತುಬಿದ್ದ ಇತಿಹಾಸಕಾರರು ಕೂಡ ಅದೇ ಹಾದಿಯಲ್ಲಿ ಸಾಗುತ್ತಿದ್ದಾರೆ.
ಟಿಪ್ಪುವನ್ನು ದೂಷಿಸುವ ಸಂಘಪರಿವಾರಕ್ಕೆ ಪೂರ್ಣಯ್ಯನನ್ನು ದೇಶದ್ರೋಹಿ ಎಂಬ ಪಟ್ಟದಿಂದ ರಕ್ಷಿಸುವ ಅಗತ್ಯವಿದೆ. ಭಾರತದ ಮುಂದಿನ ಪೀಳಿಗೆಗೆ ಗಾಂಧಿಗೆ ಗುಂಡಿಕ್ಕಿದ ಗೋಡ್ಸೆಯನ್ನು ಹೀರೋ ಆಗಿ ಪರಿವರ್ತಿಸುವ ಪ್ರಯತ್ನದಲ್ಲೂ ಇದೆ. ಆ ಮೂಲಕ ಇಲ್ಲಿ ದೇಶಪ್ರೇಮಿಗಳನ್ನು ದೇಶ ದ್ರೋಹಿಗಳಾಗಿ, ದೇಶ ದ್ರೋಹಿಗಳನ್ನು ದೇಶಪ್ರೇಮಿಗಳಾಗಿ ಬಿಂಬಿಸುವ ವಿದ್ಯಮಾನಗಳು ಎಗ್ಗಿಲ್ಲದೆ ಸಾಗಿದೆ.
ಹಿಜಾಬ್ ಮುಸ್ಲಿಮರ ಧಾರ್ಮಿಕ ಆಚರಣೆ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸಬಾರದೆಂದು ಸಂಘಪರಿವಾರ ದೇಶಾದ್ಯಂತ ವಿವಾದ ಸೃಷ್ಟಿಸಿತು. ಆದರೆ, 2022ರ ಶೈಕ್ಷಣಿಕ ವರ್ಷದ ಆರಂಭಕ್ಕೆ ರಾಜ್ಯದ ಹಲವೆಡೆ ಗಣಹೋಮ ನಡೆಸುವ ಮೂಲಕ ಶಾಲೆಗಳನ್ನು ಆರಂಭಿಸಲಾಗಿದೆ. ಇತ್ತೀಚೆಗೆ ಕೊಡಗು ಜಿಲ್ಲೆಯ ಪೊನ್ನಂಪೇಟೆಯ ಸಾಯಿ ಶಂಕರ ವಿದ್ಯಾಸಂಸ್ಥೆಯಲ್ಲಿ ಬಜರಂಗದಳದ ಕಾರ್ಯಕರ್ತರಿಗೆ ಶಸ್ತ್ರಾಸ್ತ್ರ ತರಬೇತಿ ನಡೆದ ವಿಚಾರ ರಾಷ್ಟ್ರವ್ಯಾಪಿ ಸುದ್ದಿಯಾಗಿದೆ. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕೊಡಗಿನ ಶಾಸಕರು ಸೇರಿ ಹಲವು ರಾಜಕೀಯ ನಾಯಕರ ವಿರುದ್ಧ ದೂರನ್ನೂ ನೀಡಲಾಗಿದೆ. ಸಚಿವ ಸಿ.ಟಿ.ರವಿ ಈ ಬಗ್ಗೆ ಸ್ಪಷ್ಟನೆ ನೀಡಿ ‘ಬಜರಂದಳದವರು ಟಿಯರ್ ಗ್ಯಾಸ್ ತರಬೇತಿ ಪಡೆದಿದ್ದು, ಅದರಲ್ಲಿ ತಪ್ಪೇನು?’ ಎಂಬ ಹೇಳಿಯನ್ನು ನೀಡಿದ್ದಾರೆ. ಈ ವಿದ್ಯಮಾನಗಳನ್ನೆಲ್ಲ ಗಮನಿಸುವಾಗ ದೇಶ ಬಹಳ ಆತಂಕಕಾರಿ ಪರಿಸ್ಥಿತಿಯೆಡೆಗೆ ಸಾಗುತ್ತಿದೆ ಎಂಬುದು ಸ್ಪಷ್ಟವಾಗಿದೆ.