Home ಅಂಕಣಗಳು ದ್ವೇಷದಿಂದ ದೇಶ ನಾಶ

ದ್ವೇಷದಿಂದ ದೇಶ ನಾಶ

ಭಾರತ ಒಕ್ಕೂಟದ ನೆರೆಯ ದೇಶ ಶ್ರೀಲಂಕಾ ನಿತ್ರಾಣಗೊಂಡು ನಮ್ಮ ಕಣ್ಣೆದುರು ಕುಸಿದು ಬಿದ್ದಿದೆ.
ಶ್ರೀಲಂಕಾ ಆರ್ಥಿಕವಾಗಿ ದಿವಾಳಿಯಾಗಿದೆ. ಅಲ್ಲೀಗ ಸಾಕಷ್ಟು ಆಹಾರವಿಲ್ಲ, ಇಂಧನವಿಲ್ಲ, ವಿದ್ಯುತ್ ಇಲ್ಲ, ಔಷಧಗಳಿಲ್ಲ. ಜನಸಾಮಾನ್ಯರಿಗೆ ಕೆಲಸಗಳಿಲ್ಲ, ಹಣವಿಲ್ಲ ಒಟ್ಟಾರೆಯಾಗಿ ನೆಮ್ಮದಿ ಇಲ್ಲ.
ಕೆಲವರ ಬಳಿ ಹಣವಿದೆಯಾದರೂ ಕೊಳ್ಳಬೇಕೆಂದರೆ ವಸ್ತುಗಳೇ ಲಭ್ಯವಿಲ್ಲ.
ಮತ್ತೆ,
ಆಹಾರವಿಲ್ಲ
ಇಂಧನವಿಲ್ಲ
ವಿದ್ಯುತ್ ಇಲ್ಲ
ಔಷಧಗಳಿಲ್ಲ… ಸರಣಿ ಸ್ಥಿತಿ!
ದೇಶದಲ್ಲೀಗ ಜನರಿಗೆ ಜೀವನ ಭದ್ರತೆಯಿಲ್ಲ. ತುರ್ತು ಪರಿಸ್ಥಿತಿ ಹೇರಲಾಗಿದೆಯಾದ್ದರಿಂದ ಪ್ರಜಾಸತ್ತಾತ್ಮಕ ಹಕ್ಕುಗಳೂ ಇಲ್ಲ. ಅಂದರೆ ಬದುಕುಳಿಯಲು ಜನ ದನಿ ಎತ್ತುವಂತೆಯೂ ಇಲ್ಲ.
ಭರವಸೆಯ ನಾಯಕ ಎಂದು ಬಿಂಬಿಸಲ್ಪಟ್ಟಿದ್ದ ಮಹಿಂದಾ ರಾಜಪಕ್ಸೆ ರಾಜೀನಾಮೆ ನೀಡಿದ್ದಾನೆ. ಪ್ರಧಾನಿ ಮಹಿಂದಾನ ಅರಮನೆಗೆ ಲಂಕನ್ನರು ಬೆಂಕಿ ಹಾಕಿ ತಮ್ಮ ಆಕ್ರೋಶ ತೋರಿದ್ದಾರೆ. ಮಹಿಂದಾ ರಾಜಪಕ್ಸೆ ಬಿಟ್ಟುಕೊಟ್ಟ ಪ್ರಧಾನ ಮಂತ್ರಿ ಸ್ಥಾನಕ್ಕೆ ಈಗ ಕೂರಿಸಲ್ಪಟ್ಟಿರುವ ರನಿಲ್ ವಿಕ್ರಮ ಸಿಂಘೆ ಕೇವಲ ಅಲಂಕಾರಿಕ ವಸ್ತು ಎಂಬುವುದು ಮೇಲ್ನೋಟಕ್ಕೆ ಕಾಣುತ್ತಿದೆ.
ಕಳೆದ ಎರಡು ದಶಕಗಳ ಶ್ರೀಲಂಕಾ ರಾಜಕೀಯದಲ್ಲಿ ಮೈತ್ರಿಪಾಲ ಸಿರಿಸೇನಾ, ರನಿಲ್ ವಿಕ್ರಮ್ ಸಿಂಘೆ, ಮಹಿಂದಾ ರಾಜಪಕ್ಸೆ ಕುಟುಂಬ, ಪ್ರೇಮದಾಸ, ಶರತ್ ಫೊನ್ಸೇಕಾ ಮುಂತಾದ ಬೆರಳೆಣಿಕೆಯಷ್ಟು ಜನರು ಮಾತ್ರ ಮುಂಚೂಣಿಯಲ್ಲಿದ್ದಾರೆ.
ಇವರಲ್ಲಿ ಅಧ್ಯಕ್ಷರಾಗಿದ್ದ ಪ್ರೇಮದಾಸರ ಹತ್ಯೆಯಾಯಿತು. ಮಾಜಿ ಸೇನಾ ಕಮಾಂಡರ್ ಶರತ್ ಫೊನ್ಸೇಕಾರನ್ನು ಸೆರೆಯಲ್ಲಿಡಲಾಗಿದೆ. ಉಳಿದ ನಾಲ್ವರು ಅಂದರೆ ಒಬ್ಬ ಗೋಟಬಾಯಿ ರಾಜಪಕ್ಸೆ ಅಧ್ಯಕ್ಷನಾಗಿ, ಸಿರಿಸೇನಾ ಕಾನೂನು ಮುಖ್ಯಸ್ಥನಾಗಿ, ರನಿಲ್ ಪ್ರಧಾನಿಯಾಗಿ, ಮಹಿಂದಾ ಮಾಜಿ ಪ್ರಧಾನಿಯಾಗಿ ಪರಸ್ಪರರ ಹಿತ ಕಾಯುವಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಜನಸಾಮಾನ್ಯರ ಹಿತ ಕಾಪಾಡುವವರಲ್ಲ ಇವರು ಎಂಬುದು ಈಗಾಗಲೇ ಸಾಬೀತಾಗಿದೆ.
ಬ್ರಿಟಿಷರು ದಕ್ಷಿಣ ಏಷ್ಯಾದ ತಮ್ಮ ವಸಾಹತುಗಳಿಂದ ನಿರ್ಗಮಿಸಿದ ನಂತರ ಭಾರತವು ಹಲವು ಭಾಷಿಕ ಹಾಗೂ ಜನಾಂಗೀಯ ಸಮುದಾಯಗಳ ಒಕ್ಕೂಟವಾಗಿ ಅಸ್ತಿತ್ವ ಪಡೆಯಿತು. ಪಾಕಿಸ್ತಾನವು ಧರ್ಮ ಹಾಗೂ ಉರ್ದು ಭಾಷಾ ದುರಭಿಮಾನದ ಕಾರಣಕ್ಕೆ ಬಾಂಗ್ಲಾದೇಶ (ಆಗಿನ ಪೂರ್ವ ಪಾಕಿಸ್ತಾನ) ಹಾಗೂ ಪಾಕಿಸ್ತಾನವಾಗಿ ವಿಭಜನೆಯಾಗಿ ಹೋಯಿತು.
ಶ್ರೀಲಂಕಾದಲ್ಲಿ ಸಿಂಹಳ ಭಾಷಿಕರು ಬಹುಸಂಖ್ಯಾತರಾಗಿ ಬೌದ್ದ ಧರ್ಮವು ಪ್ರಬಲ ಧಾರ್ಮಿಕ ಸಂಸ್ಥೆಯಾಗಿ ಆಳುವ ವರ್ಗಗಳ ಜೊತೆ ಬೆಸೆದುಕೊಂಡಿದೆ. ಶ್ರೀಲಂಕಾದ ರಾಜಕಾರಣಿಗಳು ಹಾಗೂ ಪ್ರಬಲ ಉದ್ಯಮಿಗಳೆಲ್ಲಾ ತಮ್ಮ ತಮ್ಮ ಲಾಭ ಹಾಗೂ ಸ್ವಾರ್ಥ ಸಾಧನೆಗಾಗಿ ಬೌದ್ಧ ಧರ್ಮವನ್ನು ಹಾಗೂ ಭಾಷೆಯ ವಿಚಾರವನ್ನೂ ದುರ್ಬಳಕೆ ಮಾಡಿಕೊಂಡು ಬಂದಿದ್ದಾರೆ. ಅದರಿಂದಾಗಿ ಶ್ರೀಲಂಕಾದ ತಮಿಳು ಜನಾಂಗೀಯರು, ಮುಸ್ಲಿಮರು ಹಾಗೂ ಕ್ರಿಶ್ಚಿಯನ್ನರು ಅಪಾರ ಸಾವು-ನೋವು ಅನುಭವಿಸಿದ್ದಾರೆ. ಈ ಜನಾಂಗೀಯ ದ್ವೇಶವು ಬೆಳೆದು ಈಗ ಶ್ರೀಲಂಕಾ ದೇಶವನ್ನೇ ವಿನಾಶದತ್ತ ದೂಡಿದೆ.
ಈಳಂ ಯುದ್ಧ ಮತ್ತು ರಾಜಪಕ್ಸೆ
2009ರಲ್ಲಿ ಶ್ರೀಲಂಕಾದ ಅಂತರ್ಯುದ್ಧವು ಮುಗಿಯಿತು. ತಮಿಳು ಪ್ರತ್ಯೇಕ ದೇಶದ ಕನಸು ಹೊತ್ತು ಸಶಸ್ತ್ರ ಹೋರಾಟ ನಡೆಸಿದ ವೇಲುಪಿಳ್ಳೈ ಪ್ರಭಾಕರನ್ ನಾಯಕತ್ವದ ತಮಿಳ್ ಟೈಗರ್ಸ್ ಸೇನೆಯನ್ನು ಲಂಕಾ ಮಿಲಿಟರಿಯು ಸೋಲಿಸಿತು.
ಪ್ರಭಾಕರನ್ ಸಹ ಸಾವಿಗೀಡಾದ. ಆಗ ನಡೆದ ತಮಿಳರ ಜನಾಂಗೀಯ ಹತ್ಯೆಯಲ್ಲಿ ನಲವತ್ತು ಸಾವಿರ ಜನರನ್ನು ಶ್ರೀಲಂಕಾ ಸೇನೆಯು ಕೊಂದಿದೆಯೆಂದು ವಿಶ್ವಸಂಸ್ಥೆಗೆ ಸಲ್ಲಿಸಲಾದ ನವಿಪಿಳ್ಳೆ ವರದಿಯು ಬಹಿರಂಗ ಪಡಿಸಿತು.
ಆದರೆ ಮಹಿಂದಾ ರಾಜಪಕ್ಸೆಯನ್ನು ಶ್ರೀಲಂಕಾದ ಹಿರೋ ಎಂಬಂತೆ ಬಿಂಬಿಸಲಾಯಿತು. ಆಗಿನ ಮಿಲಿಟರಿ ದಂಡನಾಯಕನಾಗಿದ್ದ ಶರತ್ ಪೊನ್ಸೇಕಾ ಪ್ರತಿಸ್ಪರ್ಧಿಯಾಗಬಹುದೆಂದು ಆತನನ್ನು ಸೆರೆಯಲ್ಲಿಡಲಾಗಿದೆ.
ಚುನಾವಣೆ ಗೆದ್ದು ಅಧ್ಯಕ್ಷನಾದ ರಾಜಪಕ್ಸೆ ಸರ್ಕಾರವೊಂದಕ್ಕೆ ಇರಬೇಕಿದ್ದ ಪ್ರಜಾಪ್ರಭುತ್ವದ ಸ್ವರೂಪವನ್ನೇ ಬದಲಿಸಿದ. I am no Dictaters ಎಂದು ಹೇಳುತ್ತಲೇ ಎಲ್ಲಾ ಸಾಂವಿಧಾನಿಕ ಸಂಸ್ಥೆಗಳ ಮೇಲೆ ತನ್ನ ಹತೋಟಿ ಏರ್ಪಡಿಸಿಕೊಂಡ. ದೇಶದ ಸಂವಿಧಾನಕ್ಕೆ ತಿದ್ದುಪಡಿ ತಂದ (18 ನೇ ತಿದ್ದುಪಡಿ).
ಅಧ್ಯಕ್ಷರ ಪುನರಾಯ್ಕೆಗೆ ಇಲ್ಲದಂತೆಯೂ, ದೇಶದ ಪ್ರಮುಖ ಹುದ್ದೆಗಳಿಗೆ ಅಂದರೆ ಚುನಾವಣಾ ಆಯೋಗ, ಸುಪ್ರೀಂ ಕೋರ್ಟ್ ನ್ಯಾಯಾಧೀಶರು, ಪೊಲೀಸ್ ಪೊಲೀಸ್ ಮುಖ್ಯಸ್ಥ, ಹಣಕಾಸು ಆಯೋಗ, ಹಗರಣಗಳ ತನಿಖಾ ಆಯೋಗ, ಪಬ್ಲಿಕ್ ಸರ್ವಿಸ್ ಕಮಿಷನ್, ಅಟಾರ್ನಿ ಜನರಲ್, ಆಡಿಟರ್ ಜನರಲ್, ಸಂಸತ್ ಕಾರ್ಯದರ್ಶಿ ಮುಂತಾದವರ ನೇಮಕಗಳನ್ನು ಐದು ಮಂದಿಯ ಸಮಿತಿ ನಿರ್ಧರಿಸುತ್ತದೆ ಎಂದು ಘೋಷಿಸಿ ತಾನೇ ಆ ಸಮಿತಿಯ ಮುಖ್ಯಸ್ಥನಾದ. ಒಂದು ಹಂತದಲ್ಲಿ ರಾಜಪಕ್ಸೆ ಕುಟುಂಬದ 40ರಷ್ಟು ಸದಸ್ಯರು ಶ್ರೀಲಂಕಾದ ಆಡಳಿತ, ಮಿಲಿಟರಿ, ಕ್ಯಾಬಿನೆಟ್, ನ್ಯಾಯಾಂಗ, ಹಣಕಾಸು ಮುಂತಾದ ಇಲಾಖೆಗಳ ಆಯಕಟ್ಟಿನ ಸ್ಥಾನಗಳಲ್ಲಿ ಅಧಿಕಾರದ ಹಿಡಿತ ಹೊಂದಿದ್ದರು.
ಇದೇ ಮಹೀಂದಾ ರಾಜಪಕ್ಸೆಯ ಸೋದರ ಹಾಗೂ ಮಾಜಿ ರಕ್ಷಣಾ ಸಚಿವ ಗೋಟಾಬಾಯಿ ರಾಜಪಕ್ಸೆಯೇ ಶ್ರೀಲಂಕಾದ ಅಧ್ಯಕ್ಷನಾಗಿದ್ದಾನೆ.
ಶ್ರೀಲಂಕಾದ ರಾಜಕಾರಣಿಗಳು, ಉದ್ಯಮಿಗಳು, ಬೌದ್ಧ ಧರ್ಮ ಗುರುಗಳು ಮತ್ತಿತರ ಸಮ್ಮತಿಯಿಂದ ಘಟಿಸಿರುವ ಈ ವಿದ್ಯಮಾನಗಳಿಂದ ಆದ ಅನಾಹುತವೆಂದರೆ ಅಲ್ಲಿನ ಪ್ರಜಾಪ್ರಭುತ್ವ ದುರ್ಬಲವಾಯಿತು.
ಒಂದು ಆರೋಗ್ಯಕರ ಡೆಮಾಕ್ರಸಿಯಲ್ಲಿ ಸಾಂವಿಧಾನಿಕ ಸಂಸ್ಥೆಗಳ ಸ್ವಾಯತ್ತತೆ ಬಹಳ ಮುಖ್ಯ. (Separation of power). ಆದರೆ ರಾಜಪಕ್ಸೆ ಎಲ್ಲವನ್ನೂ ಕಳಚಿ ತನ್ನ ಅಧೀನಕ್ಕೆ ತಂದುಕೊಂಡ. ಪ್ರತಿಭಟಿಸಿದವರನ್ನು ಜೈಲಿಗೆ ಹಾಕಿದ. ಪ್ರಶ್ನಿಸಿದ ದಿಟ್ಟ ಪತ್ರಕರ್ತರನ್ನು ಕೊಲ್ಲಿಸಿದ. ಲಸಾಂತೆ ವಿಕ್ರಮ ತುಂಘೆ ಎಂಬ ಪತ್ರಕರ್ತ ೞತನ್ನ ಕೊಲೆಯಾಗಲಿದೆೞ ಎಂಬ ಸಂದೇಶವನ್ನು ಸಾವಿಗೂ ಮುನ್ನ ಘೋಷಿಸಿದ್ದ. ಇದು ಶ್ರೀಲಂಕಾದಲ್ಲಿನ ಪರಿಸ್ಥಿತಿ.
ರಾಜಪಕ್ಸೆ 2009ರಲ್ಲಿ ಗೆದ್ದಿದ್ದು ಶಾಂತಿಯನ್ನಲ್ಲ ಎಂಬುದು ಬೇಗನೆ ತಿಳಿಯಿತು. ಸಿಂಹಳೀಯ ದುರಭಿಮಾನವನ್ನೇ ಬಳಸಿ ತನ್ನ ಅಧಿಕಾರ ಗಟ್ಟಿಗೊಳಿಸಲು ಯತ್ನಿಸಿದ.
ರಾಜಪಕ್ಸೆ ಕುಟುಂಬ ಧರ್ಮದ ಅಮಲು ಹಾಗೂ ನಕಲಿ ದೇಶಾಭಿಮಾನವನ್ನೇ ಅಸ್ತ್ರವಾಗಿ ಬಳಸಿತು.
ಶ್ರೀಲಂಕಾ ಕೃಷಿ ಪ್ರಧಾನ ದೇಶವಾಗಿದ್ದು, ಆಹಾರ, ಇಂಧನ, ಔಷಧ ಮುಂತಾದ ನಿತ್ಯ ಬಳಕೆಯ ವಸ್ತುಗಳನ್ನೂ ಹೊರ ದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ಅಂತರ್ಯುದ್ಧ, ಮಿಲಿಟರಿ ದಬ್ಬಾಳಿಕೆ, ಭ್ರಷ್ಟಾಚಾರದಿಂದ ನಲುಗಿದ್ದ ಆರ್ಥಿಕತೆಗೆ ಕೋವಿಡ್-19 ಹೊಡೆತ ನೀಡಿತು.
ಪ್ರವಾಸೋದ್ಯಮವು ಶ್ರೀಲಂಕಾದ ಪ್ರಮುಖ ಆದಾಯವಾಗಿದೆ. ದೇಶದ ಒಟ್ಟು ಆಂತರಿಕ ಉತ್ಪನ್ನದಲ್ಲಿ ಶೇ.೧೫ರಷ್ಟು ಹಣಗಳಿಕೆ ಟೂರಿಸಂನಿಂದ ಸಿಗುತ್ತದೆ. ಆದರೆ ಕೋವಿಡ್ನಿಂದಾಗಿ ಪ್ರವಾಸಿಗರು ಲಂಕಾಗೆ ಬರುವುದು ನಿಂತು ಹೋಯಿತು. ದೇಶ ಅದಾಗಲೇ ಸಾಲದಲ್ಲಿತ್ತು. ವಿದೇಶಿ ವಿನಿಮಯ ಸಂಗ್ರಹ ಮಿತ ಪ್ರಮಾಣದಲ್ಲಿತ್ತು. ಒಮ್ಮೆ ಶುರುವಾದ ಆರ್ಥಿಕ ಹಿಂಜರಿಕೆ ಆಹಾರದ ಕೊರತೆಯಾಗಿ, ಔಷಧ ಇಂಧನಗಳ ಆಮದಿಗೆ ತೊಡಕಾಗಿ ದೊಡ್ಡದಾಗಿ ಬೆಳೆಯಿತು.
ಜನ ಈಗ ಬೀದಿಗಿಳಿದಿದ್ದಾರೆ. ದೌರ್ಜನ್ಯ, ಜನಾಂಗೀಯ ದ್ವೇಷ, ದಬ್ಬಾಳಿಕೆ, ಭ್ರಷ್ಟಾಚಾರದಲ್ಲಿ ಮಾತ್ರ ಪರಿಣಿತಿಗಳಿಸಿರುವ ಸಿಂಹಳೀಯ ದುರಭಿಮಾನಿ ನಾಯಕರು ಶ್ರೀಲಂಕಾವನ್ನು ಪಾತಾಳದತ್ತ ದೂಡಿದ್ದಾರೆ.
ಹಿಂಸೆ ಮತ್ತು ವಿವೇಚನೆ
ಚುನಾವಣೆಗಳು ಹತ್ತಿರ ಬಂದಾಗ ಬಾಂಬ್ ಸ್ಫೋಟಗಳು, ಹತ್ಯೆಗಳು ನಡೆಯುವುದು, ಕಲ್ಪಿತ ಶತ್ರುಗಳನ್ನು ಸೃಷ್ಟಿಸಿ ಬಹುಸಂಖ್ಯಾತರಲ್ಲಿ ಅಭದ್ರತೆಯ ಭಾವನೆ ಮೂಡಿಸಿ ಚುನಾವಣೆ ನಡೆಸುವುದೀಗ ಭಾರತಕ್ಕೆ ಮಾತ್ರ ಸೀಮಿತವಲ್ಲ.
ನೆರೆಯ ಶ್ರೀಲಂಕಾದಲ್ಲೂ ಈ ಪ್ರಯೋಗಗಳಾಗಿವೆ. ೨೦೧೯ರ ಅಧ್ಯಕ್ಷರ ಚುನಾವಣೆ ನಡೆಯುವಾಗ ಈಸ್ಟರ್ ಹಬ್ಬದ ವೇಳೆ ಚರ್ಚ್ ಹಾಗೂ ಹೋಟೆಲ್ಗಳಲ್ಲಿ ಬಾಂಬ್ ಸ್ಫೋಟಿಸಿ ಇನ್ನೂರಕ್ಕೂ ಹೆಚ್ಚು ಜನ ಬಲಿಯಾದರು. ಆ ಘಟನೆಯನ್ನು ಗೋಟಬಾಯಿ ರಾಜಪಕ್ಸೆ ಬಳಸಿಕೊಂಡು ಎಲೆಕ್ಷನ್ ಗೆದ್ದು ಅಧ್ಯಕ್ಷನಾದ.
ಆದರೆ ಜನಾಂಗೀಯ ದ್ವೇಷ ಸಾಧನೆ, ರಚನಾತ್ಮಕ ಕಾರ್ಯಗಳಿಂದ ಆಡಳಿತ, ಸ್ವಜನ ಪಕ್ಷಪಾತಗಳಿಂದಾಗಿ ಶ್ರೀಲಂಕಾದ ಇಡೀ ವ್ಯವಸ್ಥೆಯೇ ಕುಸಿದುಬಿದ್ದಿದೆೆ.
ಒಬ್ಬ ಪ್ರಧಾನಿ ಬದಲಾಗುವುದರಿಂದ ದೇಶ ಬದಲಾಗದು. ಅಂದರೆ ಮಹಿಂದಾ ರಾಜಪಕ್ಸೆ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ಆಸನ ಸ್ಥಾನಕ್ಕೆ ರನಿಲ್ ವಿಕ್ರಮಸಿಂಘೆ ಬಂದಾಕ್ಷಣ ಶ್ರೀಲಂಕಾ ಸ್ಥಿತಿ ಉತ್ತಮಗೊಳ್ಳದು. ಕಳೆದ 2-3 ದಶಕಗಳಿಂದ ಪೋಷಿಸಿಕೊಂಡು ಬರಲಾದ ಹಿಂಸಾ ರಾಜಕೀಯ ಇದಕ್ಕೆ ಮೂಲ ಕಾರಣವಾಗಿದೆ.

ಕುಸಿದ ಆರ್ಥಿಕತೆ
ಶ್ರೀಲಂಕಾದ ರೂಪಾಯಿ ಬೆಲೆ ಈಗ ಕುಸಿದಿದೆ. ಒಂದು ಡಾಲರ್ಗೆ 326 ಶ್ರೀಲಂಕಾ ರೂಪಾಯಿಗೆ ಬಂದು ತಲುಪಿದೆ. 2.2 ಕೋಟಿ ಜನಸಂಖ್ಯೆಯ ಈ ದ್ವೀಪ ರಾಷ್ಟ್ರದ ಈಗಿನ ಒಟ್ಟು ಸಾಲ ಅಂದಾಜು 12 ಲಕ್ಷ ಕೋಟಿ ರೂಪಾಯಿಗಳಿಗೆ ತಲುಪಿದೆ. 2022ರಲ್ಲಿ ಶ್ರೀಲಂಕಾ ಸುಮಾರು 1 ಲಕ್ಷ ಕೋಟಿ ರೂಪಾಯಿ ಸಾಲ ಮರುಪಾವತಿ ಮಾಡಬೇಕಿತ್ತು. ಆದರೆ ಅದಾಗಲಿಲ್ಲ. ಆಹಾರ, ಇಂಧನ, ಔಷಧಗಳ ಖರೀದಿಗಾಗಿ ಈಗ ಮತ್ತೆ ಸಾಲ ಮಾಡುತ್ತಿದೆ.
ಲಂಕಾದಲ್ಲೀಗ ಒಂದು ಕೆಜಿ ಅಕ್ಕಿಯ ಬೆಲೆ ರೂ.500, ಹಾಲಿನ ಪುಡಿಗೆ ರೂ.1000, ಸಕ್ಕರೆ ಕೆಜಿಗೆ ರೂ.300 ತಲುಪಿದೆ. ತೆರಿಗೆ ರಹಿತ ನೀತಿಯಿಂದಾಗಿ ಬೊಕ್ಕಸ ಬರಿದಾಗಿದೆ. ರಸಗೊಬ್ಬರ ಬಳಕೆಗೆ ನಿರ್ಬಂಧ ವಿಧಿಸಿದ ಕಾರಣ ಭತ್ತದ ಇಳುವರಿ ಕುಸಿದಿದೆ. ಯಾವುದೇ ಪೂರ್ವಸಿದ್ಧತೆ ಇರದೆ ಜಾರಿಗೆ ತಂದ ನೀತಿ ಅದಾಗಿತ್ತು.
ಚೀನಾದ ರಸಗೊಬ್ಬರಕ್ಕೆ ಬದಲಾಗಿ ಭಾರತದಿಂದ ದ್ರವೀಕೃತ ಗೊಬ್ಬರ 3 ಸಾವಿರ ಟನ್ ತರಿಸಿ ಬಳಸಿದ ಕಾರಣ ಕೃಷಿ ಉತ್ಪಾದನೆ ಇಳುವರಿ ಕುಸಿದಿದೆ ಎನ್ನಲಾಗಿದೆ.
ಶ್ರೀಲಂಕಾದ ಈಗಿನ ಕಷ್ಟದ ವೇಳೆಯಲ್ಲೇ ಭಾರತ ಸರ್ಕಾರವು ಲಂಕಾದ ವಿಮಾನ ನಿಲ್ದಾಣಗಳು ಹಾಗೂ ಬಂದರುಗಳನ್ನು ಗೌತಮ್ ಅದಾನಿಯ ಹಿಡಿತಕ್ಕೆ ಒಳಪಡಿಸಲು ನೆರವು ನೀಡುತ್ತಿದೆ.
ಶ್ರೀಲಂಕಾದ ಜಾನ್ ಕಿಲೀಸ್ ಹೋಲ್ಡಿಂಗ್ಸ್ ಆ್ಯಂಡ್ ಶ್ರೀಲಂಕಾ ಪೋರ್ಟ್ ಅಥಾರಿಟಿ ಕಂಪನಿಯಲ್ಲಿ ಈಗ ಅದಾನಿ 51% ಷೇರು ಹೊಂದುವಲ್ಲಿ ಸಫಲರಾಗಿದ್ದಾರೆ.
ಶ್ರೀಲಂಕಾವನ್ನು ದಕ್ಷಿಣ ಏಷ್ಯಾದ ಬಂದರು ವ್ಯವಹಾರಗಳ ಇನ್ನೊಂದು ಸಿಂಗಾಪುರ ಆಗಿ ಮಾಡಲು ಅದಾನಿಗೆ ಯೋಚನೆಗಳಿವೆ.
ಭಾರತ ಸರ್ಕಾರವು ಶ್ರೀಲಂಕಾಗೆ ನೆರವು ನೀಡುವಾಗ ಹಲವು ಮಿಲಿಟರಿ ಹಾಗೂ ವಾಣಿಜ್ಯ ಒಪ್ಪಂದಗಳಿಗೆ ಸಮ್ಮತಿಸುವಂತೆ ಒತ್ತಡ ನಿರ್ಮಿಸುತ್ತಿದೆ. ಮತ್ತೊಂದೆಡೆ ಚೀನಾ ಸಹ 2 ಲಕ್ಷ ಕೋಟಿ ರೂ. ನಷ್ಟು ಸಾಲದ ನೆರವು ಘೋಷಿಸಿದೆ. ಇದೆಲ್ಲಾ ತಾತ್ಕಾಲಿಕ ಪರಿಹಾರ ಹಾಗೂ ದೀರ್ಘಕಾಲದ ಸೆರೆಮನೆಯಷ್ಟೆ.

ಗೆದ್ದದ್ದು ಒಂದು ಯುದ್ಧ, ಶಾಂತಿಯನ್ನಲ್ಲ

2009ರ ಅಂತರ್ಯುದ್ಧದಲ್ಲಿ ಆಗಿನ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಮತ್ತವನ ಸೋದರ ಆಗಿನ ಸೇನಾ ಮುಖ್ಯಸ್ಥ ಗೋಟಬಾಯಿ ರಾಜಪಕ್ಸೆ (ಈಗಿನ ಅಧ್ಯಕ್ಷ) ಎಲ್‌ ಟಿಟಿಇ ವಿರುದ್ಧದ ಸೇನಾ ಸಂಘರ್ಷದಲ್ಲಿ ಗೆಲುವು ಸಾಧಿಸಿದರು. ಆದರೆ ಆ ಗೆಲುವು ಶ್ರೀಲಂಕಾದ ಯಾವ ಸಮಸ್ಯೆಯನ್ನೂ ಬಗೆಹರಿಸಲಿಲ್ಲ. ಅದರ ಬದಲಾಗಿ ತಮಿಳರ ವಿರುದ್ಧದ ಜನಾಂಗೀಯ ದ್ವೇಷವನ್ನು ನಂತರ ಮುಸ್ಲಿಮ್ ಹಾಗೂ ಕ್ರಿಶ್ಚಿಯನ್ನರ ವಿರುದ್ಧ ಹರಿಬಿಡಲಾಯಿತು. ನೂರಾರು ಅಮಾಯಕರು ಇದರಲ್ಲಿ ಬಲಿಯಾಗಿದ್ದಾರೆ. ರಾಜಪಕ್ಸೆ ಸರ್ಕಾರವು ತನ್ನದೇ ದೇಶದ ಅಮಾಯಕ ಪ್ರಜೆಗಳ ಮೇಲೆ ಎಸಗಿರುವ ಕ್ರೌಯಗಳನ್ನು ಮರೆಮಾಚಿದೆ. ಸರ್ವಾಧಿಕಾರಿ ರಾಜಪಕ್ಸೆಯ ಜನಾಂಗೀಯ ದ್ವೇಷನೀತಿಯನ್ನು ವಿವೇಚನೆ ತೋರದೆ ಬೆಂಬಲಿಸಿದ್ದ ಶ್ರೀಲಂಕಾದ ಜನತೆ ಈಗ ಪರಿತಪಿಸುತ್ತಿದ್ದಾರೆ.

Join Whatsapp
Exit mobile version